Advertisement

ಮಹಾ ಸರಕಾರ ರಚನಾ ಬಿಕ್ಕಟ್ಟು : ಪಟ್ಟು ಸಡಿಲಿಸದ ಮಿತ್ರರು – ಏನಾಗುತ್ತಿದೆ ಮರಾಠಾ ನಾಡಲ್ಲಿ?

09:52 AM Nov 08, 2019 | Hari Prasad |

ಮುಂಬಯಿ: ಮಹಾರಾಷ್ಟ್ರ ವಿಧಾನ ಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡು ಎರಡು ವಾರಗಳು ಸಂದರೂ ಇನ್ನೂ ಯಾರು ನೂತನ ಸರಕಾರ ರಚಿಸಬೇಕು ಎಂಬ ವಿಚಾರದಲ್ಲಿ ಗೊಂದಲ ಮುಂದುವರೆದಿದೆ. ವಿಚಿತ್ರವೆಂದರೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಮತ್ತು ಶಿವಸೇನಾ ಮೈತ್ರಿಗೆ ಸ್ಪಷ್ಟ ಬಹುಮತ ಲಭಿಸಿದ್ದರೂ ಮಹಾರಾಷ್ಟ್ರದಲ್ಲಿ ಕೇಸರಿ ಪಕ್ಷಗಳ ಸರಕಾರ ಮಾತ್ರ ರಚನೆಯಾಗದಿರುವುದು ರಾಜಕೀಯ ವಲಯದಲ್ಲಿ ನಾನಾ ರೀತಿಯ ವಿಶ್ಲೇಷಣೆಗಳಿಗೆ ಕಾರಣವಾಗುತ್ತಿದೆ.

Advertisement

ಮುಖ್ಯಮಂತ್ರಿ ಪಟ್ಟಕ್ಕ ಸಂಬಂಧಿಸಿದಂತೆ ದೋಸ್ತಿಗಳ ನಡುವೆ ಉದ್ಛವಿಸಿರುವ ಭಿನ್ನಮತ ಮರಾಠ ನಾಡಲ್ಲಿ ಸತತ ಎರಡನೇ ಅವಧಿಗೆ ಬಿಜೆಪಿ-ಶಿವಸೇನೆ ಸರಕಾರ ಅಧಿಕಾರಕ್ಕೇರುವಲ್ಲಿ ಮುಖ್ಯ ತೊಡರುಗಾಲಾಗಿ ಪರಿಣಮಿಸಿದೆ. ಶಿವಸೇನೆ ಅಧಿಕಾರ ಹಂಚಿಕೆಯಲ್ಲಿ 50-50 ಸೂತ್ರಕ್ಕೆ ಅಂಟಿಕೊಂಡಿದ್ದರೆ ಬಿಜೆಪಿ ಈ ಸೂತ್ರವನ್ನು ತಿರಸ್ಕರಿಸಿದೆ. ಇದರ ಪ್ರಕಾರ ತಲಾ ಎರಡೂವರೆ ವರ್ಷ ಮುಖ್ಯಮಂತ್ರಿ ಪಟ್ಟವನ್ನು ಎರಡೂ ಪಕ್ಷಗಳು ಹಂಚಿಕೊಳ್ಳಬೇಕು ಎಂಬ ಶಿವಸೇನೆಯ ನಿಲುವನ್ನು ಜಿಜೆಪಿ ತಿರಸ್ಕರಿಸಿರುವುದೇ ‘ಮಹಾ’ ಬಿಕ್ಕಟ್ಟು ಮುಂದುವರಿಯಲು ಪ್ರಮುಖ ಕಾರಣವಾಗಿದೆ.

ಒಂದು ವೇಳೆ ಸರಕಾರ ರಚನೆಗೆ ಯಾವ ಪಕ್ಷವೂ ಹಕ್ಕು ಮಂಡಿಸದಿದ್ದರೆ ರಾಜ್ಯಪಾಲರು ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸಿರುವ ಅತೀದೊಡ್ಡ ಪಕ್ಷವನ್ನೇ ಸರಕಾರ ರಚನೆಗೆ ಆಹ್ವಾನಿಸಲಿದ್ದಾರೆ ಎಂಬ ಮಾತು ರಾಜಕೀಯ ತಜ್ಞರಿಂದ ಕೇಳಿಬಂದಿದೆ. ಹಾಗಾದಲ್ಲಿ ರಾಜ್ಯಪಾಲರ ಮೊದಲ ಕರೆ ಭಾರತೀಯ ಜನತಾ ಪಕ್ಷದ ಶಾಸಕಾಂಗ ಪಕ್ಷದ ನಾಯಕ ಹಾಲೀ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೇ ಹೋಗಲಿದೆ. ನವಂಬರ್ 09ಕ್ಕೆ ಪ್ರಸಕ್ತ ಮಹಾರಾಷ್ಟ್ರ ವಿಧಾನಸಭೆಯ ಅವಧಿ ಮುಕ್ತಾಯಗೊಳ್ಳಲಿದ್ದು ಅದರ ಒಳಗೆ ನೂತನ ಸರಕಾರ ಅಸ್ತಿತ್ವಕ್ಕೇ ಬರದೇ ಇದ್ದಲ್ಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳ್ಳುವ ಭೀತಿ ಎದುರಾಗಿದೆ.

ಇನ್ನುಳಿದ ಎರಡು ಪ್ರಮುಖ ಪಕ್ಷಗಳಾದ ಎನ್.ಸಿ.ಪಿ. ಮತ್ತು ಕಾಂಗ್ರೆಸ್ ಸರಕಾರ ರಚನೆಯ ಪ್ರಕ್ರಿಯೆಯಿಂದ ದೂರ ಉಳಿದಿದ್ದು ವಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳುವ ಮಾತುಗಳನ್ನಾಡಿವೆ. ಈಗೇನಿದ್ದರು ಶಿವಸೇನೆ ಮತ್ತು ಬಿಜೆಪಿ ಪಕ್ಷಗಳು ಮತ್ತೆ ಜೊತೆಗೂಡಿದರಷ್ಟೇ ಇಲ್ಲಿ ಸರಕಾರ ಅಸ್ತಿತ್ವಕ್ಕೆಬರಲು ಸಾಧ್ಯ.

ನಮ್ಮ ಶಾಸಕರನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ : ಕಾಂಗ್ರೆಸ್ ಆರೋಪ
ನೂತನವಾಗಿ ಆಯ್ಕೆಯಾಗಿ ಬಂದಿರುವ ತನ್ನ ಪಕ್ಷದ ಶಾಸಕರನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಬಾಳಾಸಹೇಬ್ ಥೋರಟ್ ಅವರು ಈ ಆರೋಪವನ್ನು ಮಾಡಿದ್ದು ಬಿಜೆಪಿ ತನ್ನ ಶಾಸಕರೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದೆ ಎಂಬ ಆರೋಪ ಮಾಡಿದ್ದಾರೆ.

Advertisement

‘ಉದ್ಭವ್ ಠಾಕ್ರೆಗೆ ನೋವಾಗಿದೆ ; ಮಾತುಕಥೆ ಮೂಲಕ ಎಲ್ಲವನ್ನೂ ಪರಿಹರಿಸಿಕೊಳ್ಳಬಹುದು’
ಬಿಜೆಪಿಯೊಂದಿಗೆ ತಮ್ಮ ಪಕ್ಷದ ಸುದೀರ್ಘ ಮೈತ್ರಿಯನ್ನು ಕೊನೆಯಾಗಿಸುವ ಯಾವುದೇ ಇರಾದೆ ತಮಗಿಲ್ಲ ಎಂದು ಶಿವಸೇನಾ ಮುಖ್ಯಸ್ಥ ಉದ್ಭವ್ ಠಾಕ್ರೆ ಅವರು ಹೇಳಿದ್ದಾರೆ. ಆದರೆ ಲೋಕಸಭಾ ಚುನಾವಣೆಗೂ ಮೊದಲು ತಮ್ಮ ನಡುವೆ ಆಗಿರುವ ಒಪ್ಪಂದಕ್ಕೆ ಬದ್ಧವಾಗಿರುವಂತೆ ಅವರು ಬಿಜೆಪಿಯನ್ನು ಇದೇ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ. ನೂತನ ಮೈತ್ರಿ ಸರಕಾರದಲ್ಲಿ ಹುದ್ದೆಗಳು ಮತ್ತು ಜವಾಬ್ದಾರಿಗಳ ಸಮಾನ ಹಂಚಿಕೆ’ ಸೂತ್ರಕ್ಕೆ ಉದ್ಭವ್ ಪಟ್ಟುಹಿಡಿದಿದ್ದಾರೆ.

ಇನ್ನೊಂದೆಡೆ ಶಿವಸೇನೆಯ ಎಲ್ಲಾ ಶಾಸಕರು ತಮ್ಮ ಪಕ್ಷದ ನಾಯಕ ಉದ್ಭವ್ ಠಾಕ್ರೆ ಅವರು ತೆಗೆದುಕೊಳ್ಳುವ ತಿರ್ಮಾನಗಳಿಗೆ ಬದ್ಧರಾಗಿರಲು ನಿರ್ಧರಿಸಿದ್ದಾರೆ. ಇಂದು ಶಿವಸೇನೆಯ ನೂತನ ಶಾಸಕರ ಸಭೆಯ ಬಳಿಕ ಶಾಸಕ ಸುನಿಲ್ ಪ್ರಭು ಅವರು ಮಾತನಾಡಿ, ‘ಉದ್ಭವ್ ಠಾಕ್ರೆ ತೆಗೆದುಕೊಳ್ಳುವ ಯಾವುದೇ ತೀರ್ಮಾನಗಳಿಗೂ ನಾವೆಲ್ಲಾ ಬದ್ಧರಾಗಿರುತ್ತೇವೆ ಮತ್ತು ಈ ಸೂಕ್ಷ್ಮ ರಾಜಕೀಯ ಸನ್ನಿವೇಶದಲ್ಲಿ ನಾವೆಲ್ಲಾ ಜೊತೆಯಾಗಿರುತ್ತೇವೆ’ ಎಂಬ ಮಾತನ್ನು ಆಡಿದ್ದಾರೆ. ಮತ್ತು ಸರಕಾರ ರಚನೆಗೆ ಸಂಬಂಧಿಸಿದಂತೆ ಮತ್ತು ಮೈತ್ರಿ ವಿಚಾರದಲ್ಲಿ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಸಂಪೂರ್ಣ ಹೊಣೆಗಾರಿಕೆಯನ್ನು ಶಿವಸೇನೆಯ ಎಲ್ಲಾ ಶಾಸಕರು ಉದ್ಭವ್ ಠಾಕ್ರೆ ಅವರಿಗೇ ಬಿಟ್ಟುಬಿಟ್ಟಿದ್ದಾರೆ.

ಈತನ್ಮಧ್ಯೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ರಾಜ್ಯದ ಅಡ್ವೊಕೇಟ್ ಜನರಲ್ ಆಗಿರುವ ಅಶುತೋಷ್ ಕುಂಭಕೋಣಿ ಅವರನ್ನು ರಾಜಭವನಕ್ಕೆ ಕರೆಯಿಸಿಕೊಂಡು ಪ್ರಸಕ್ತ ರಾಜಕೀಯ ಬಿಕ್ಕಟ್ಟಿನ ಕುರಿತು ಚರ್ಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next