Advertisement

ಅನ್ನದಾತರಿಗೆ ಮಹಾ ನಮನ

08:15 AM Mar 13, 2018 | Team Udayavani |

ಮುಂಬಯಿ: ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ನಾಸಿಕ್‌ನಿಂದ ಮುಂಬೈವರೆಗೆ ಬರೋಬ್ಬರಿ 180 ಕಿ.ಮೀ. ಕಾಲ್ನಡಿಗೆಯಲ್ಲೇ ಆಗಮಿಸಿದ ರೈತ ಸಮುದಾಯದ ಮುಂದೆ ಕೊನೆಗೂ ಮಹಾರಾಷ್ಟ್ರ ಸರಕಾರ ತಲೆಬಾಗಿದೆ. ಅನ್ನದಾತರ ಎಲ್ಲ ಬೇಡಿಕೆಗಳನ್ನೂ ಈಡೇರಿಸುವುದಾಗಿ ಸರಕಾರವು ಭರವಸೆ ನೀಡಿದ್ದು, ಕಳೆದ 6 ದಿನಗಳಿಂದ ರೈತರು ನಡೆಸಿದ ಪಾದಯಾತ್ರೆಗೆ ಜಯ ಸಿಕ್ಕಿದೆ. ಸರಕಾರದಿಂದ ಸಕಾರಾತ್ಮಕ ಸ್ಪಂದನೆ ವ್ಯಕ್ತವಾದ ಹಿನ್ನೆಲೆಯಲ್ಲಿ ವಿಧಾನಭವನಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸುವ ಯೋಚನೆಯನ್ನು ರೈತರು ಕೈಬಿಟ್ಟಿದ್ದಾರೆ.

Advertisement

ಆಜಾದ್‌ ಮೈದಾನದಲ್ಲಿ ಸೇರಿದ್ದ 50 ಸಾವಿರಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕಂದಾಯ ಸಚಿವ ಚಂದ್ರಕಾಂತ್‌ ಪಾಟೀಲ್‌, ರೈತರ ಎಲ್ಲ ಬೇಡಿಕೆಗಳಿಗೂ ಲಿಖೀತ ರೂಪದಲ್ಲಿ ಒಪ್ಪಿಗೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ. 
ಇದಕ್ಕೂ ಮುನ್ನ ರೈತರು ಹಾಗೂ ಆದಿವಾಸಿಗಳ ಪ್ರತಿನಿಧಿಗಳು ವಿಧಾನಭವನದಲ್ಲಿ ಸಿಎಂ ದೇವೇಂದ್ರ ಫ‌ಡ್ನವೀಸ್‌ ಜತೆ ಸಭೆ ನಡೆಸಿದ್ದರು. ಸಭೆ ಬಳಿಕ ಮಾತನಾಡಿದ ಫ‌ಡ್ನವೀಸ್‌, “ಸೂಕ್ತ ದಾಖಲೆಗಳನ್ನು ನೀಡಿದರೆ ಬುಡಕಟ್ಟು ಜನಾಂಗೀಯರಿಗೆ ಕೃಷಿ ಭೂಮಿ ಹಂಚಿಕೆ ಮಾಡಲು ನಾವು ಸಮಿತಿ ರಚಿಸಲು ನಿರ್ಧರಿಸಿದ್ದೇವೆ. ರೈತರ ಬಹುತೇಕ ಬೇಡಿಕೆಗಳಿಗೆ ಒಪ್ಪಿದ್ದೇವೆ,’ ಎಂದಿದ್ದಾರೆ. 

ಮೈದಾನದಲ್ಲಿ ರೈತಸಾಗರ: ದಕ್ಷಿಣ ಮುಂಬೈನ ಆಜಾದ್‌ ಮೈದಾನದಲ್ಲಿ ಸೋಮವಾರ ಬೆಳಗ್ಗೆ ಎಲ್ಲಿ ನೋಡಿದರೂ ಕೆಂಪೇ ಕಾಣುತ್ತಿತ್ತು. ಕೆಂಪು ಟೋಪಿಗಳನ್ನು ಧರಿಸಿದ್ದ 50 ಸಾವಿರಕ್ಕೂ ಹೆಚ್ಚು ಮಂದಿ ಅಲ್ಲಿ ನೆರೆದಿದ್ದರು. ಬೆಳಗ್ಗೆಯೇ ವಿಧಾನಭವನ ಮುತ್ತಿಗೆ ಹಾಕಲು ನಿರ್ಧರಿಸಲಾಗಿತ್ತಾದರೂ, 10ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿದ್ದು, ಅವರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಪ್ರತಿಭಟನೆಯನ್ನು 11 ಗಂಟೆಯ ನಂತರ ನಡೆಸಲು ನಿರ್ಧರಿಸಿದರು.

ಅನ್ನದಾತರತ್ತ ಪ್ರೀತಿ ತೋರಿದ ಮುಂಬೈಗರು: ಸುಡು ಬಿಸಿಲನ್ನೂ ಲೆಕ್ಕಿಸದೇ 180 ಕಿ.ಮೀ. ಕಾಲ್ನಡಿಗೆಯಲ್ಲಿ ಬಂದ ಅನ್ನದಾತರಿಗೆ ಮುಂಬೈ ನಿವಾಸಿಗಳು ಪ್ರೀತಿ ತೋರಿದ್ದು ಕಂಡುಬಂತು. ವಿವಿಧ ಸಂಘ ಸಂಸ್ಥೆಗಳು ರೈತರಿಗೆ ಆಹಾರ, ತಿಂಡಿ-ತಿನಿಸು, ನೀರು ಹಂಚಿದರೆ, ವಿದ್ಯಾರ್ಥಿಗಳು, ಯುವಜನರೂ ಇದಕ್ಕೆ ಕೈಜೋಡಿಸಿದರು. ಮುಂಬೈನ ಡಬ್ಟಾವಾಲಾಗಳೂ ರೈತರಿಗೆ ಆಹಾರ ಒದಗಿಸಿದರು. ಇನ್ನು ಕೆಲವರು ತಮ್ಮ ಮನೆಗಳ ಮೇಲೆ ನಿಂತು, ರಸ್ತೆಯಲ್ಲಿ ಸಾಗುತ್ತಿದ್ದ ರೈತರ ಮೇಲೆ ಹೂಮಳೆಗೆರೆದರು. 

ಮೆಗಾ ಪ್ರತಿಭಟನೆಗೆ ಸಿದ್ಧತೆ
ಮಹಾರಾಷ್ಟ್ರದಲ್ಲಿ ರೈತರ ಬೃಹತ್‌ ರ್ಯಾಲಿ ಯಶಸ್ವಿಯಾಗುತ್ತಿದ್ದಂತೆ ದೇಶಾದ್ಯಂತ ಮತ್ತೂಂದು ಮೆಗಾ ಪ್ರತಿಭಟನೆಗೆ ರೈತರು ಸಿದ್ಧತೆ ನಡೆಸಿದ್ದಾರೆ. ಏಪ್ರಿಲ್‌ನಲ್ಲಿ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಹಲವು ರಾಜ್ಯಗಳ ರೈತ ಸಂಘಗಳ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ ನಡೆಯಲಿದ್ದು, ಅದನ್ನು “ಮದರ್‌ ಆಫ್ ಆಲ್‌ ಪ್ರೊಟೆಸ್ಟ್ಸ್'(ಎಲ್ಲ ಪ್ರತಿಭಟನೆಗಳ ತಾಯಿ) ಎಂದು ಬಣ್ಣಿಸಲಾಗಿದೆ ಎಂದು ಗುಜರಾತ್‌, ಅಸ್ಸಾಂ ಮತ್ತು ತಮಿಳುನಾಡಿನ ರೈತರ ನಾಯಕರು ತಿಳಿಸಿದ್ದಾರೆ. ಕೇಂದ್ರ ಸರಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಮೆಗಾ ರ್ಯಾಲಿ ಕೈಗೊಳ್ಳಲು ಮುಂದಾಗಿದ್ದೇವೆ. ಮುಂದಿನ ತಿಂಗಳು ಎಲ್ಲ ರಾಜ್ಯಗಳ ರೈತ ಮುಖಂಡರು ಗುವಾಹಟಿಯಲ್ಲಿ ಸಭೆ ಸೇರಿ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ದೇಶಾದ್ಯಂತದ ರೈತರು ಇದರಲ್ಲಿ ಪಾಲ್ಗೊಳ್ಳುವಂತೆ ಮಾಡುವ ಉದ್ದೇಶವಿದೆ ಎಂದು ಈಶಾನ್ಯ ಮೂಲದ ರೈತರ ಹಕ್ಕುಗಳ ಹೋರಾಟಗಾರ ಅಖೀಲ್‌ ಗೊಗೋಯ್‌ ತಿಳಿಸಿದ್ದಾರೆ.

Advertisement

ಇಂದು ರ್ಯಾಲಿಯಲ್ಲಿ ಪಾಲ್ಗೊಂಡ ರೈತರು “ಭಾರತದ ಹೊಸ ಸೈನಿಕರು’. ಅವರ ಬೇಡಿಕೆಯನ್ನು ಈಡೇರಿಸದಿದ್ದರೆ ಸರಕಾರವನ್ನೇ ಬುಡಮೇಲು ಮಾಡುವ ಶಕ್ತಿ ಅವರಿಗಿದೆ.
ಸೀತಾರಾಂ ಯೆಚೂರಿ, ಸಿಪಿಎಂ ನಾಯಕ

ರೈತರು ಮತ್ತು ಬುಡಕಟ್ಟು ಜನಾಂಗೀಯರನ್ನು “ನಗರದ ಮಾವೋ ವಾದಿಗಳು’ ದಾರಿ ತಪ್ಪಿಸುತ್ತಿದ್ದಾರೆ. ರೈತರ ಜತೆ ಕುಳಿತು ಸಮಸ್ಯೆ ಪರಿಹರಿಸಿ ಕೊಳ್ಳುವುದು ಮಹಾರಾಷ್ಟ್ರ ಸರಕಾರದ ಜವಾಬ್ದಾರಿ.
 ಪೂನಂ ಮಹಾಜನ್‌, ಬಿಜೆಪಿ ಸಂಸದೆ

ರ್ಯಾಲಿಯಲ್ಲಿ ಭಾಗವಹಿಸಿರುವ ಶೇ.90ರಿಂದ 95ರಷ್ಟು ಮಂದಿ ಬಡ ಆದಿವಾಸಿಗಳು. ಅವರು ತಮ್ಮ ಅರಣ್ಯ ಭೂಮಿ ಹಕ್ಕಿಗಾಗಿ ಹೋರಾಡುತ್ತಿದ್ದಾರೆ. ಅವರ ಪರ ಸರಕಾರ ಧನಾತ್ಮಕ ನಿಲುವು ಹೊಂದಿದೆ.
ದೇವೇಂದ್ರ ಫ‌ಡ್ನವೀಸ್‌, ಮಹಾರಾಷ್ಟ್ರ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next