Advertisement

Maharashtra; ಶಿವಸೇನೆ ಶಾಸಕರ ಅನರ್ಹತೆ ಕೇಸ್‌: ಇಂದು ಸ್ಪೀಕರ್‌ ಮಹತ್ವದ ತೀರ್ಪು

12:24 AM Jan 10, 2024 | Team Udayavani |

ಮುಂಬಯಿ: ಮಹಾರಾಷ್ಟ್ರ ರಾಜಕೀಯಕ್ಕೆ ಸಂಬಂಧಿಸಿದ ಮಹತ್ವದ ಬೆಳವಣಿಗೆ ಎಂಬಂತೆ ಶಿವಸೇನೆಯ ಎರಡೂ ಬಣಗಳು ಸಲ್ಲಿಸಿರುವ ಅನರ್ಹತೆ ಅರ್ಜಿಗಳಿಗೆ ಸಂಬಂಧಿಸಿದ ತೀರ್ಪು ಬುಧವಾರ ಹೊರಬೀಳಲಿದೆ. ಸಿಎಂ ಏಕನಾಥ ಶಿಂಧೆ ಮತ್ತು ಶಿವಸೇನೆಯ ಇತರ ಶಾಸಕರ ಭವಿಷ್ಯದ ನಿಟ್ಟಿನಲ್ಲಿ ಈ ತೀರ್ಪು ನಿರ್ಣಾಯಕವಾಗಲಿದೆ.

Advertisement

ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್‌ ರಾಹುಲ್‌ ನಾರ್ವೇಕರ್‌ ಅವರು ಅನರ್ಹತೆ ಅರ್ಜಿಗಳಿಗೆ ಸಂಬಂಧಿಸಿದ ತೀರ್ಪನ್ನು ಬುಧವಾರ ಸಂಜೆ ಪ್ರಕಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಹಿಂದೆಯೇ ಸುಪ್ರೀಂ ಕೋರ್ಟ್‌ ತೀರ್ಪು ಪ್ರಕಟಿಸಲು ಸ್ಪೀಕರ್‌ಗೆ ಜ.10ರ ಗಡುವು ವಿಧಿಸಿತ್ತು.

2022ರ ಜೂನ್‌-ಜುಲೈಯಲ್ಲಿ ಶಿವಸೇನೆಯು ಇಬ್ಭಾಗವಾಗಿ, ಹಿರಿಯ ನಾಯಕ ಏಕನಾಥ ಶಿಂಧೆ ಅವರು ಬಿಜೆಪಿ ಜತೆ ಕೈಜೋಡಿಸಿ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ್ದರು. ಇದರಿಂದಾಗಿ ಶಿವಸೇನೆಯ ಉದ್ಧವ್‌ ಠಾಕ್ರೆ ನೇತೃತ್ವದ ಮಹಾ ವಿಕಾಸ್‌ ಅಘಾಡಿ ಸರಕಾರ ಪತನಗೊಂಡಿತ್ತು. ತದನಂತರ ಎರಡೂ ಬಣದವರು ಎರಡೂ ಬಣದ ಶಾಸಕರ ಅನರ್ಹತೆ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಕುರಿತ ತೀರ್ಪನ್ನು ಸ್ಪೀಕರ್‌ ಬುಧವಾರ ಪ್ರಕಟಿಸಲಿದ್ದಾರೆ.

1200 ಪುಟಗಳ ತೀರ್ಪು?

ಒಟ್ಟು 34 ಅರ್ಜಿಗಳಿಗೆ ಸಂಬಂಧಿಸಿ ಸ್ಪೀಕರ್‌ 6 ವಿಭಾಗಗಳಲ್ಲಿ ತೀರ್ಪು ಪ್ರಕಟಿಸಲಿದ್ದಾರೆ. ಪ್ರತೀ ಭಾಗವೂ ತಲಾ 200 ಪುಟಗಳನ್ನು ಹೊಂದಿದ್ದು, ಒಟ್ಟು  ತೀರ್ಪು 1,200 ಪುಟಗಳಲ್ಲಿ ಇರಲಿವೆ ಎಂದು ಮೂಲಗಳು ತಿಳಿಸಿವೆ. ತೀರ್ಪಿನ ವಿರುದ್ಧ ಹೈಕೋ ರ್ಟ್‌ ಅಥವಾ ಸುಪ್ರೀಂ ಕೋರ್ಟ್‌ ಮೆಟ್ಟಿಲೇರುವ ಅವಕಾಶವೂ ಎರಡೂ ಕಡೆಯವರಿಗೆ ಇರುತ್ತದೆ.  ಮಂಗಳವಾರ ಮಾತನಾಡಿರುವ ಡಿಸಿಎಂ ಫ‌ಡ್ನವೀಸ್‌, “ಶಿವಸೇನೆ-ಬಿಜೆಪಿ ಸರ್ಕಾರ ಸ್ಥಿರವಾಗಿರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಸ್ಪೀಕರ್‌-ಸಿಎಂ ಭೇಟಿ: ಸುಪ್ರೀಂ ಮೆಟ್ಟಿಲೇರಿದ ಉದ್ಧವ್‌ ಠಾಕ್ರೆ

ತೀರ್ಪು ಹೊರಬೀಳುವುದಕ್ಕೆ 3 ದಿನ ಬಾಕಿಯಿರುವಂತೆಯೇ ಸಿಎಂ ಶಿಂಧೆ ಅವರು ಸ್ಪೀಕರ್‌ ರಾಹುಲ್‌ ನಾರ್ವೇಕರ್‌ರನ್ನು ಭೇಟಿಯಾಗಿರುವುದು ಶಿವಸೇನೆಯ ಉದ್ಧವ್‌ ಬಣದ ಆಕ್ರೋಶಕ್ಕೆ ಕಾರಣವಾಗಿದೆ. ಸ್ಪೀಕರ್‌ ಆದವರು ನ್ಯಾಯಯುತ ಮತ್ತು ನಿಷ್ಪಕ್ಷವಾಗಿ ಕಾರ್ಯನಿರ್ವಹಿಸಬೇಕು. ಆದರೆ ಅವರು ತೀರ್ಪಿಗೆ ಮುನ್ನ ಸಿಎಂ ಅನ್ನು ಭೇಟಿಯಾಗಿರುವುದು ಸರಿಯಲ್ಲ ಎಂದು ಹೇಳಿ ಉದ್ಧವ್‌ ಬಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ.

Advertisement

Udayavani is now on Telegram. Click here to join our channel and stay updated with the latest news.

Next