Advertisement

Maharashtra Deadlock: ಮಹಾ ಸರ್ಕಾರ ಇನ್ನೂ ಕಗ್ಗಂಟು: ಖಾತೆ ಹಂಚಿಕೆಯೇ ಸವಾಲು

03:45 AM Dec 03, 2024 | Team Udayavani |

ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಸರ್ಕಾರದ ಪ್ರಮಾಣ ಸ್ವೀಕಾರಕ್ಕೆ 3 ದಿನಗಳು ಬಾಕಿಯಿದ್ದರೂ, ಸಿಎಂ ಯಾರು ಎಂಬ ಗೊಂದಲ ಹಾಗೂ ಖಾತೆ ಹಂಚಿಕೆ ಕಗ್ಗಂಟಾಗಿಯೇ ಉಳಿದಿದೆ. ವಿಶೇಷವಾಗಿ ಗೃಹ ಖಾತೆ ಯಾರಿಗೆ ನೀಡಬೇಕು ಎನ್ನುವುದೇ ಅಧಿಕಾರ ಹಂಚಿಕೆಯ ಬಿಕ್ಕಟ್ಟಿನ ಕೇಂದ್ರ ಬಿಂದು ಎಂಬ ಅಂಶ ಬೆಳಕಿಗೆ ಬಂದಿದೆ. ಹೀಗಾಗಿ, ಸರ್ಕಾರ ರಚನೆ ಪ್ರಕ್ರಿಯೆ ಕೂಡ ವಿಳಂಬವಾಗುತ್ತಿದೆ.

Advertisement

ಈ ನಡುವೆ ಜ್ವರದಿಂದ ಬಳಲುತ್ತಿರುವ ಮಹಾರಾಷ್ಟ್ರದ ಉಸ್ತುವಾರಿ ಸಿಎಂ ಏಕನಾಥ ಶಿಂಧೆಯವರು ಸೋಮವಾರ ಕೂಡ ಮೈತ್ರಿಕೂಟದ ಎಲ್ಲ ಸಭೆಗಳಿಂದ ದೂರ ಉಳಿದಿದ್ದಾರೆ. ಅಲ್ಲದೆ, ಸೋಮವಾರ ದೆಹಲಿಗೆ ತೆರಳಿ ಬಿಜೆಪಿ ಹೈಕಮಾಂಡ್‌ ಜತೆ ಮಹಾಯುತಿ ನಾಯಕರು ಸಭೆ ನಡೆಸಬೇಕಿತ್ತು. ಆದರೆ, ಕೊನೇ ಕ್ಷಣ ದಲ್ಲಿ ಅನಾರೋಗ್ಯದ ಕಾರಣ ಹೇಳಿ ಶಿಂಧೆ ದೆಹಲಿಗೆ ಹೋಗಿಲ್ಲ. ಕೇವಲ ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ ಮಾತ್ರ ದಿಲ್ಲಿಗೆ ತೆರಳಿದ್ದಾರೆ.

ಗೃಹ ಖಾತೆ ಮೇಲೆ ಕಣ್ಣೇಕೆ?:
2014ರಿಂದ 2019ರ ಅವಧಿಯಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಮುಖ್ಯಮಂತ್ರಿಯಾಗಿದ್ದ ದೇವೇಂದ್ರ ಫ‌ಡ್ನವೀಸ್‌ ಅವರೇ ಗೃಹ ಸಚಿವರಾಗಿದ್ದವರು. ಇನ್ನು 2022 ಜು.30ರಿಂದ ಇದುವರೆಗೆ ಅಸ್ತಿತ್ವದಲ್ಲಿರುವ ಮಹಾಯುತಿ ಸರ್ಕಾರದಲ್ಲಿ ಡಿಸಿಎಂ ಆಗಿರುವ ಫ‌ಡ್ನವೀಸ್‌ ಅವರೇ ಗೃಹ ಸಚಿವರಾಗಿದ್ದಾರೆ. ಆ ಸಚಿವ ಸ್ಥಾನ ಕೊಡದೇ ಇದ್ದರೆ ಡಿಸಿಎಂ ಹುದ್ದೆ ಸ್ವೀಕರಿಸುವುದಿಲ್ಲ ಎಂದು ಫ‌ಡ್ನವೀಸ್‌ ಪಟ್ಟು ಹಿಡಿದ್ದರಿಂದ ಅವರಿಗೆ ಅದು ಸಿಕ್ಕಿತ್ತು. ಹೀಗಾಗಿ, ಹೊಸ ಸರ್ಕಾರದಲ್ಲಿ ಕೂಡ ಬಿಜೆಪಿ ಆ ಖಾತೆ ತನಗೇ ಬೇಕು ಎಂದು ವಾದಿಸಿದೆ ಎನ್ನಲಾಗಿದೆ.

2019ರಲ್ಲಿ ಕಾಂಗ್ರೆಸ್‌-ಎನ್‌ಸಿಪಿ-ಶಿವಸೇನೆ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ ಏಕನಾಥ ಶಿಂಧೆಯವರು ಗೃಹ ಖಾತೆಗಾಗಿ ಕಣ್ಣಿಟ್ಟಿದ್ದರು. ಆಗ ನಡೆದಿದ್ದ ಅಧಿಕಾರ ಹಂಚಿಕೆ ಸೂತ್ರದ ಅನ್ವಯ ಆ ಸಚಿವ ಸ್ಥಾನ ಎನ್‌ಸಿಪಿ ಪಾಲಾಗಿತ್ತು. ಯಾವುದೇ ಸರ್ಕಾರದಲ್ಲಿ ಮುಖ್ಯಮಂತ್ರಿ ಹುದ್ದೆಯ ಬಳಿಕ ಗೃಹ ಸಚಿವ ಸ್ಥಾನವೇ ಪ್ರಮುಖ. ರಾಜ್ಯದಲ್ಲಿನ ಪ್ರಮುಖ ಬೆಳವಣಿಗೆಗಳ ಮೇಲೆ ನಿಗಾ ಇರಿಸಲು ಇದರಿಂದ ಸಾಧ್ಯವಾಗುತ್ತದೆ. ಕಾನೂನು ಸುವ್ಯವಸ್ಥೆ, ಪೊಲೀಸರ ಮೇಲೆ ನೇರ ನಿಯಂತ್ರಣ ಇರುವುದು ಗೃಹ ಸಚಿವರಿಗೆ. ಹೀಗಾಗಿ, ಅಧಿಕಾರವನ್ನು ಭದ್ರಪಡಿಸಲು ಈ ಸಚಿವ ಸ್ಥಾನ ನೆರವಾಗುತ್ತದೆ. ಹೀಗಾಗಿ, ಏಕನಾಥ ಶಿಂಧೆಯವರು ಪ್ರಮುಖ ಸಚಿವ ಸ್ಥಾನಕ್ಕೇ ಪಟ್ಟು ಹಿಡಿದಿದ್ದಾರೆ ಎಂದು ಹೇಳಲಾಗುತ್ತಿದೆ.

ಡಿ.4ರ ಸಭೆಯಲ್ಲಿ ಸಿಎಂ ಹೆಸರು ಅಂತಿಮ?
ಬಿಜೆಪಿಯ ನೂತನ ಶಾಸಕರ ಸಭೆ ಡಿ.4ರಂದು ಮುಂಬೈನಲ್ಲಿ ನಡೆಯಲಿದೆ. ಆ ದಿನ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕನ ಹೆಸರು ಘೋಷಣೆ ಮಾಡಲಾಗುತ್ತದೆ. ಮಾರನೇ ದಿನವೇ ಅಂದರೆ ಡಿ.5ರಂದು ಮುಂಬೈನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಹಾಯುತಿ ಸರ್ಕಾರ ಪ್ರಮಾಣ ವಚನ ಸ್ವೀಕರಿಸಲಿದೆ ಎಂದು ಬಿಜೆಪಿ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ. ಇದೇ ವೇಳೆ, ಬುಧವಾರ ನಡೆಯಲಿರುವ ಬಿಜೆಪಿ ಶಾಸಕಾಂಗ ಸಭೆಗೆ ವೀಕ್ಷಕರನ್ನಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ಗುಜರಾತ್‌ ಸಿಎಂ ವಿಜಯ ರೂಪಾಣಿ ಅವರನ್ನು ಪಕ್ಷದ ವರಿಷ್ಠರು ನೇಮಿಸಿದ್ದಾರೆ.

Advertisement

ನಾನು ಡಿಸಿಎಂ ಆಗಲ್ಲ: ಶಿಂಧೆ ಪುತ್ರ
ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬರಲಿರುವ ಹೊಸ ಸರ್ಕಾರದಲ್ಲಿ ಡಿಸಿಎಂ ಆಗುವುದಿಲ್ಲ. ಈ ಬಗೆಗಿನ ವರದಿಗಳು ಸುಳ್ಳು ಎಂದು ಉಸ್ತುವಾರಿ ಸಿಎಂ ಏಕನಾಥ್‌ ಶಿಂಧೆಯವರ ಪುತ್ರ, ಸಂಸದ ಶ್ರೀಕಾಂತ್‌ ಶಿಂಧೆ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿದ ಅವರು ಪಕ್ಷ ಸಂಘಟನೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ನಾನು ಲೋಕಸಭೆ ಚುನಾವಣೆ ಬಳಿಕ ಮೋದಿ ಸರ್ಕಾರದಲ್ಲಿ ಸಚಿವನಾಗುವ ಅವಕಾಶವನ್ನೇ ನಿರಾಕರಿಸಿದ್ದೆ ಎಂದು ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next