ಮುಂಬೈ: ಮಹಾರಾಷ್ಟ್ರ ವಿಧಾನ ಪರಿಷತ್‌ನ 10 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 5 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ, ಆಡಳಿತಾರೂಢ ಮಹಾ ವಿಕಾಸ್ ಅಘಾಡಿ (ಎಂವಿಎ) ಒಕ್ಕೂಟಕ್ಕೆ ತೀವ್ರ ಮುಖಭಂಗ ಉಂಟು ಮಾಡಿದೆ. ಇನ್ನುಳಿದಂತೆ, ಎಂವಿಎ ಅಂಗಪಕ್ಷಗಳಾದ ಎನ್‌ಸಿಪಿಯ ಇಬ್ಬರು, ಶಿವಸೇನೆಯ ಇಬ್ಬರು ಹಾಗೂ ಕಾಂಗ್ರೆಸ್‌ನ ಒಬ್ಬರು ಜಯ ಸಾಧಿಸಿದ್ದಾರೆ.
ಇದನ್ನೂ ಓದಿ:ಸಿದ್ದರಾಮಯ್ಯ ಮತ್ತು ಸುಳ್ಳು ಒಂದೇ ನಾಣ್ಯದ ಎರಡು ಮುಖಗಳು: ಸಿ.ಟಿ.ರವಿ ವ್ಯಂಗ್ಯ
ಬಿಜೆಪಿ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದ ಪ್ರವೀಣ್ ದಾರೇಕರ್, ರಾಮ್ ಶಿಂಧೆ, ಶ್ರೀಕಾಂತ್ ಭಾರತೀಯ, ಉಮಾ ಕಾಪ್ರೆ ಹಾಗೂ ಪ್ರಸಾದ್ ಲಾಡ್ ಜಯ ಗಳಿಸಿದ್ದರೆ, ಶಿವಸೇನೆಯ ಆಮ್ ಶ್ಯ ಪಡವಿ, ಸಚಿನ್ ಆಹಿರ್ ಹಾಗೂ ಶಿವಸೇನೆಯ ರಾಮರಾಜೇ ನಿಂಬಾಳ್ಕರ್, ಏಕನಾಥ್ ಖಾಡ್ಸೆ ವಿಜಯಿಗಳಾಗಿದ್ದಾರೆ.
ಕಾಂಗ್ರೆಸ್‌ನಿಂದ ಸ್ಪರ್ಧೆಗಳಿದಿದ್ದ ಇಬ್ಬರು ಅಭ್ಯರ್ಥಿಗಳಲ್ಲಿ ಚಂದ್ರಕಾಂತ್ ಹಂಡೋರೆ ಮಾತ್ರ ಜಯ ಗಳಿಸಿದ್ದು, ಮತ್ತೊಬ್ಬ ಅಭ್ಯರ್ಥಿ ಭಾಯಿ ಜಗತಪ್ ಸೋಲು ಕಂಡಿದ್ದಾರೆ. ಇತ್ತೀಚೆಗೆ ನಡೆದಿದ್ದ ಮಹಾರಾಷ್ಟ್ರದ ಆರು ರಾಜ್ಯಸಭಾ ಸ್ಥಾನಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಮೂರು ಸ್ಥಾನಗಳನ್ನು ಗೆಲ್ಲುವ ಮೂಲಕವೂ ಬಿಜೆಪಿಯು, ಎಂವಿಎಗೆ ತೀವ್ರ ಮುಖಭಂಗ ಉಂಟು ಮಾಡಿತ್ತು. ಅದರ ಬೆನ್ನಲ್ಲೇ, ಈಗ ಪರಿಷತ್ ಚುನಾವಣೆಯಲ್ಲೂ ಪಾರಮ್ಯ ಮೆರೆದಿದೆ.
ಆಡಳಿತಾರೂಢ ಮಹಾ ವಿಕಾಸ್ ಅಘಾಡಿಯ ಶಾಸಕರು ಅಡ್ಡ ಮತದಾನ ಮಾಡಿದ ಪರಿಣಾಮ ಬಿಜೆಪಿಯ ಪ್ರಸಾದ್ ಲಾಡ್ ಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸುವಂತಾಗಿದೆ. ಈ ಬಗ್ಗೆ ಎನ್ ಡಿಟಿವಿ ಜತೆ ಮಾತನಾಡಿದ ಲಾಡ್, ಗೆಲುವಿಗೆ ಶ್ರಮಿಸಿದ ದೇವೇಂದ್ರ ಫಡ್ನವೀಸ್ ಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಪರಿಷತ್ ಚುನಾವಣೆಯ ಫಲಿತಾಂಶ ಮಹಾ ವಿಕಾಸ್ ಅಘಾಡಿ ಮತ್ತು ಶಿವಸೇನೆಗೆ ಮುಖಭಂಗ ಅನುಭವಿಸುವಂತೆ ಮಾಡಿದೆ. ಮಹಾ ವಿಕಾಸ್ ಅಘಾಡಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡುತ್ತಿಲ್ಲ ಇದೊಂದು ಭ್ರಷ್ಟ ಸರ್ಕಾರ ಎಂದು ಲಾಡ್ ಆರೋಪಿಸಿದ್ದಾರೆ.