ಮುಂಬೈ: ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್-19 ಸೋಂಕಿಗೆ ಕಡಿವಾಣ ಹಾಕಲು ಪೂರ್ಣ ಪ್ರಮಾಣದ ಲಾಕ್ ಡೌನ್ ಒಂದೇ ಪರಿಹಾರ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಮುಂಬೈ ಸೇರಿದಂತೆ ರಾಜ್ಯಾದ್ಯಂತ ದಿನದಿಂದ ದಿನಕ್ಕೆ ಏರುಮುಖದಲ್ಲಿ ಸಾಗಿರುವ ಕೋವಿಡ್ ಸೋಂಕು ಹೆಚ್ಚಳದ ಹಿನ್ನೆಲೆ ಇಂದು ಎಲ್ಲ ಪಕ್ಷಗಳ ಸಭೆ ಕರೆಯಾಯಿತು. ಈ ಸರ್ವ ಪಕ್ಷ ಸಭೆಯಲ್ಲಿ ಮಾತನಾಡಿರುವ ಮುಖ್ಯಮಂತ್ರಿಗಳು, ಸಂಪೂರ್ಣ ಲಾಕ್ ಡೌನ್ ಬಿಟ್ಟರೆ ಬೇರೆ ಪರಿಹಾರವಿಲ್ಲ ಎಂದು ಹೇಳಿದ್ದಾರೆ. ಏಪ್ರಿಲ್ 15 ರಿಂದ 20ರ ವರೆಗೆ ರಾಜ್ಯದಲ್ಲಿ ಪರಿಸ್ಥಿತಿ ಇನ್ನೂ ಬಿಗಡಾಯಿಸಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಸಭೆ ಬಳಿಕ ಸರಣಿ ಟ್ವಿಟ್ ಮಾಡಿರುವ ಮುಖ್ಯಮಂತ್ರಿಗಳ ಕಾರ್ಯಾಲಯ, ಜನರ ಆರೋಗ್ಯ ಗಮನದಲ್ಲಿಕೊಂಡು ಸರ್ಕಾರ ಕೈಗೊಳ್ಳುವು ನಿರ್ಧಾರಗಳಿಗೆ ಬೆಂಬಲಿಸುವಂತೆ ಎಲ್ಲ ರಾಜಕೀಯ ಪಕ್ಷಗಳಿಗೆ ಸಿಎಂ ಮನವಿ ಮಾಡಿದ್ದಾರೆ ಎಂದು ತಿಳಿಸಿದೆ.
ಇನ್ನು ಸಭೆ ಬಳಿಕ ಮಾತಾಡಿರುವ ಸಚಿವ ನವಾಬ್ ಮಲ್ಲಿಕ್, ನಾಳೆ ( ಏಪ್ರಿಲ್ 11) ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಕಾರ್ಯಪಡೆಯೊಂದಿಗೆ ಸಭೆಯೊಂದನ್ನು ನಡೆಸಲಿದ್ದಾರೆ ನಂತರ ಲಾಕ್ ಡೌನ್ ಹೇರುವ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಇನ್ನು ಇಂದು ಬಿಡುಗಡೆಯಾಗಿರುವ ವರದಿಗಳ ಪ್ರಕಾರ ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 55,411 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ.