Advertisement

ಮಹಾ ಸಾಲ ಮನ್ನಾ; ಮಹಾರಾಷ್ಟ್ರದಲ್ಲಿ 1.5 ಲಕ್ಷ ರೂ. ಸಾಲ ಮನ್ನಾ 

03:45 AM Jun 25, 2017 | Team Udayavani |

ಮುಂಬೈ: ಸತತ ಬರಗಾಲದಿಂದ ಸಂಕಷ್ಟಕ್ಕೀಡಾಗಿರುವ ಮಹಾರಾಷ್ಟ್ರದ ರೈತರಿಗೆ ಅಲ್ಲಿನ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಸಿಹಿ ಸುದ್ದಿ ನೀಡಿದ್ದಾರೆ.

Advertisement

1.5 ಲಕ್ಷ ರೂ.ಗಳವರೆಗೆ ಸಾಲ ಮನ್ನಾ ಮಾಡುವ ಬಗ್ಗೆ ಘೋಷಣೆ ಮಾಡಿದ್ದು, ಇದರಿಂದ ರಾಜ್ಯದ ಬೊಕ್ಕಸಕ್ಕೆ ಸುಮಾರು 34 ಸಾವಿರ ಕೋಟಿ ರೂ. ಹೊರೆಯಾಗಲಿದೆ ಎಂದು ಫ‌ಡ್ನವೀಸ್‌ ಹೇಳಿದ್ದಾರೆ. ಅಲ್ಲದೆ ಈ ಸಾಲ ಮನ್ನಾದ ಅನುಕೂಲ ರಾಜ್ಯದ ಶೇ.90ರಷ್ಟು ರೈತರಿಗೆ ಆಗಲಿದೆ ಎಂದೂ ಅವರು ಘೋಷಿಸಿದ್ದಾರೆ.

ರೈತರ ಆತ್ಮಹತ್ಯೆ ವಿಚಾರದಲ್ಲಿ ಇಡೀ ದೇಶಕ್ಕೇ ಮಹಾರಾಷ್ಟ್ರ ಅಗ್ರ ಸ್ಥಾನದಲ್ಲಿದೆ. 2015ರ ಅಂಕಿ ಅಂಶಗಳಂತೆ ಮಹಾರಾಷ್ಟ್ರವೊಂದರಲ್ಲೇ 3 ಸಾವಿರಕ್ಕೂ ಹೆಚ್ಚು ರೈತರು ಸಾಲ ತೀರಿಸಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಅಲ್ಲದೆ ವಿದರ್ಭವಂತೂ ರೈತರ ಆತ್ಮಹತ್ಯೆಯಿಂದಲೇ ಸುದ್ದಿಯಲ್ಲಿತ್ತು. ಹೀಗಾಗಿ ಮಹಾರಾಷ್ಟ್ರದಲ್ಲಿರುವ ಬಿಜೆಪಿ ಸರ್ಕಾರ, ರೈತರ ಸಾಲ ಮನ್ನಾ ಮಾಡುವ ನಿರ್ಧಾರ ತೆಗೆದುಕೊಂಡಿದೆ.

ಸಾಲ ಮನ್ನಾಕ್ಕಾಗಿಯೇ ಸಮಿತಿ ನೇಮಕ
ಸತತ ಬರಗಾಲದಿಂದ ಕಂಗೆಟ್ಟಿರುವ ಮಹಾರಾಷ್ಟ್ರದಲ್ಲಿ ಸಾಲ ಮನ್ನಾಕ್ಕಾಗಿ ರೈತರು ಪ್ರತಿಭಟನೆಯ ಹಾದಿ ಹಿಡಿದಿದ್ದರು. ಅಲ್ಲದೆ ಮಿತ್ರ ಪಕ್ಷ ಶಿವಸೇನೆ ಕೂಡ ರೈತರ ಸಾಲ ಮನ್ನಾ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ತಂದಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಅವರು, ಯಾವ ಪ್ರಮಾಣದಲ್ಲಿ, ಯಾರಿಗೆ ಹೆಚ್ಚಿನ ಪ್ರಯೋಜನವಾಗುತ್ತದೆ ಮತ್ತು ಎಷ್ಟರವರೆಗೆ ಸಾಲ ಮನ್ನಾ ಮಾಡಬೇಕಾಗುತ್ತದೆ ಎಂಬುದನ್ನು ಅಧ್ಯಯನ ಮಾಡುವ ಸಲುವಾಗಿ ಕಂದಾಯ ಸಚಿವ ಚಂದ್ರಕಾಂತ್‌ ಪಾಟೀಲ್‌ ನೇತೃತ್ವದಲ್ಲಿ ಸಮಿತಿ ನೇಮಕ ಮಾಡಿದ್ದರು. ಈ ಸಮಿತಿ 1 ಲಕ್ಷದ ವರೆಗೆ ಸಾಲ ಮನ್ನಾ ಮಾಡಬಹುದು ಎಂದು ಶಿಫಾರಸು ಮಾಡಿತ್ತು. ಆದರೆ ಸಿಎಂ ಇದಕ್ಕೆ ಮತ್ತೆ 50 ಸಾವಿರ ಸೇರಿಸಿಕೊಂಡು 1.5 ಲಕ್ಷದ ವರೆಗೆ ಸಾಲ ಮನ್ನಾ ಮಾಡಿದ್ದಾರೆ. ಆದರೆ, ಸಾಲ ಮನ್ನಾವಾಗಬೇಕಾದರೆ ಇಂತಿಷ್ಟೇ ಭೂಮಿ ಹೊಂದಿರಬೇಕು ಎಂಬ ನಿಯಮವನ್ನೇನೂ ಮಾಡಿಲ್ಲ.

ಈ ಮಧ್ಯೆ, ಪತ್ರಿಕಾಗೋಷ್ಠಿ ನಡೆಸಿದ ದೇವೇಂದ್ರ ಫ‌ಡ್ನವೀಸ್‌ ಅವರು, ಇದೊಂದು ಐತಿಹಾಸಿಕ ನಿರ್ಧಾರ ಎಂದಿದ್ದಾರೆ. 34 ಸಾವಿರ ಕೋಟಿ ರಾಜ್ಯದ ಬೊಕ್ಕಸಕ್ಕೆ ಹೊಡೆತ ನೀಡುವುದು ಸತ್ಯ. ಆದರೆ, ಸರ್ಕಾರದ ಇತರೆ ಕೆಲಸಗಳಿಗೆ ಹಣ ನೀಡುವುದನ್ನು ಕಡಿಮೆ ಮಾಡಿ, ಇದಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದಿದ್ದಾರೆ.

Advertisement

34 ಸಾವಿರ ಕೋಟಿ ರೂ.ಗಳ ಛತ್ರಪತಿ ಶಿವಾಜಿ ಮಹಾರಾಜ್‌ ಕೃಷಿ ಸಮ್ಮಾನ್‌ ಯೋಜನೆಯಿಂದಾಗಿ 89 ಲಕ್ಷ ರೈತರು ಪ್ರಯೋಜನ ಪಡೆಯಲಿದ್ದಾರೆ. ಅಂದರೆ 12 ಮಂದಿ ರೈತರಲ್ಲಿ 7 ಮಂದಿ ಸಂಪೂರ್ಣವಾಗಿ ಸಾಲದಿಂದ ವಿಮುಕ್ತಿ ಪಡೆಯಲಿದ್ದಾರೆ. ಇಂಥವರ ಸಂಖ್ಯೆಯೇ 40 ಲಕ್ಷವಿದೆ.

ಮನ್ನಾಗೆ ಷರತ್ತು
1. 2016ರ ಜೂ.30ರ ನಂತರ ಸಾಲ ಮರುಪಾವತಿಸದ ರೈತರ 1.5 ಲಕ್ಷ ರೂ.ವರೆಗಿನ ಸಾಲ ಮನ್ನಾ
2. ಸಕಾಲಕ್ಕೆ ಸಾಲ ಮರುಪಾವತಿಸಿದ ರೈತರಿಗೆ ಶೇ.25 ಬೋನಸ್‌ (25,000 ಮಿತಿ)(ಅಂದರೆ, ಸರಿಯಾಗಿ ಕಟ್ಟಿಕೊಂಡು ಬಂದು 1.75 ಲಕ್ಷ ಬಾಕಿ ಉಳಿಸಿಕೊಂಡಿದ್ದರೆ ಅದು ಸಂಪೂರ್ಣ ಮನ್ನಾ ಆಗುತ್ತೆ)
3. ಹಳೆಯ ಸಾಲಕ್ಕೆ ಜೋಡಣೆಯಾಗಿ ಹೊಸ ಸಾಲ ಪಡೆದಿದ್ದರೂ, ಇಂಥ ಅಕೌಂಟ್‌ಗಳಿಗೆ ಒಂದೇ ಬಾರಿ ಪಾವತಿ ಯೋಜನೆಯಂತೆ 1.5 ಲಕ್ಷ ರೂ.ಗಳ ವರೆಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ.
4. ಎಲ್ಲ ರೀತಿಯ ಪಂಚಾಯತಿಗಳಿಗೆ ಆಯ್ಕೆಯಾದವರು, ವರ್ತಕರಾಗಿದ್ದರೂ ಕೃಷಿ ಮಾಡಿಕೊಂಡು ಇರುವ, ವ್ಯಾಟ್‌ (ಮೌಲ್ಯ ವರ್ಧಿತ ತೆರಿಗೆ) ಕಟ್ಟುತ್ತಿರುವವರಿಗೆ ಈ ಯೋಜನೆ ಅನ್ವಯವಾಗದು.
5. ಆದಾಯ ತೆರಿಗೆ ಪಾವತಿಸುವ ದೊಡ್ಡ ರೈತರನ್ನೂ ಈ ಯೋಜನೆಯಿಂದ ಹೊರಗಿಡಲಾಗಿದೆ.
6. ಕೇಂದ್ರ ಮತ್ತು ರಾಜ್ಯಗಳ ಸರ್ಕಾರಿ ಸೇವೆಯಲ್ಲಿದ್ದೂ ಕೃಷಿ ಮಾಡುತ್ತಿರುವವರಿಗೂ ಈ ಯೋಜನೆ ಅನ್ವಯವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next