ಔರಂಗಾಬಾದ್ : ಧಾರ್ಮಿಕ ಸ್ಥಳವೊಂದರ ಅಕ್ರಮ ನೀರಿನ ಸಂಪರ್ಕವನ್ನು ಕಡಿದು ಹಾಕಿದ ಘಟನೆಗೆ ಸಂಬಂಧಿಸಿ ಎರಡು ವಿರೋಧಿ ಗುಂಪುಗಳ ನಡುವೆ ನಡೆದ ಮಾರಾಮಾರಿಯ ಪರಾಕಾಷ್ಠೆಯಲ್ಲಿ ಹಿಂಸೆ ಮತ್ತು ಕಿಚ್ಚುಡುವಿಕೆ ಸ್ಫೋಟಗೊಂಡು ಕನಿಷ್ಠ 100 ಅಂಗಡಿ ಮುಂಗಟ್ಟುಗಳು ಬೆಂಕಿಯಲ್ಲಿ ಸುಟ್ಟು ಕರಕಲಾದ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ನಗರದಲ್ಲಿ ನಿನ್ನೆ ಶುಕ್ರವಾರ ರಾತ್ರಿ ನಡೆದಿರುವುದು ವರದಿಯಾಗಿದೆ.
ಗುಂಪು ಘರ್ಷಣೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ ಎಂಬ ವದಂತಿ ಇದ್ದು ಅದಿನ್ನೂ ದೃಢಪಟ್ಟಿಲ್ಲ . ನಗರದ ವಿವಿಧ ಭಾಗಗಳಲ್ಲಿ ಎರಡು ಗುಂಪುಗಳ ಉದ್ರಿಕ್ತ ಯುವಕರು ಬೀದಿಗಿಳಿದು ಹಿಂಸಾಚಾರ ನಡೆಸಿ ಕಲ್ಲೆಸೆತ ನಡೆಸಿರುವುದಾಗಿಯೂ ವರದಿಯಾಗಿದೆ.
ಉದ್ರಿಕ್ತರು ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹಚ್ಚಿರುವುದು ವಿಡಿಯೋ ಚಿತ್ರಿಕೆಗಳಲ್ಲಿ ಕಂಡುಬಂದಿದೆ. ನಸುಕಿನ ವೇಳೆಯ ಇನ್ನೊಂದು ವಿಡಿಯೋ ಚಿತ್ರಿಕೆಯಲ್ಲಿ ಪೊಲೀಸರು ಉದ್ರಿಕ್ತರತ್ತ ಕೆಲವು ಸುತ್ತುಗಳ ಫೈರಿಂಗ್ ನಡೆಸಿರುವುದು, ಅಶ್ರುವಾಯು ಕೋಶ ಸಿಡಿಸಿರುವುದು ಕಂಡು ಬಂದಿದೆ.
ಹಿಂಸೆ ಮತ್ತು ಗಲಭೆಯಲ್ಲಿ ಕನಿಷ್ಠ ಹತ್ತು ಮಂದಿ ಪೊಲಿಸರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಪೊಲೀಸರು ಔರಂಗಾಬಾದ್ ನಗರದಲ್ಲಿ ಸೆ.144 ಹೇರಿದ್ದಾರೆ.
ಅನೇಕರ ಟ್ಟಿಟರ್‌ನಲ್ಲಿ ಘಟನೆಯ ಬಗ್ಗೆ ಮಾಹಿತಿಗಳನ್ನು ನೀಡಿದ್ದಾರೆ.