ಮುಂಬಯಿ: ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸಚಿವ ಸಂಪುಟದ ಬಹು ನಿರೀಕ್ಷಿತ ವಿಸ್ತರಣೆ ಮಂಗಳವಾರ ನಡೆಯಲಿದೆ ಎಂದು ರಾಜ್ಯ ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಶಿವಸೇನೆ ಶಾಸಕ ಶಿಂಧೆ ಮತ್ತು ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರು ಜೂನ್ 30 ರಂದು ಕ್ರಮವಾಗಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು, ಅಂದಿನಿಂದ ಇಬ್ಬರು ಸದಸ್ಯರ ಕ್ಯಾಬಿನೆಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸರಕಾರದ ವಿರುದ್ಧ ವಿರೋಧ ಪಕ್ಷದ ನಾಯಕರಿಂದ ನಿರಂತರ ಟೀಕೆಗಳು ಕೇಳಿ ಬರುತ್ತಿದ್ದವು.
ಸಂಪುಟ ವಿಸ್ತರಣೆ ನಾಳೆ ನಡೆಯಲಿದೆ. ಅದರ ಬಗ್ಗೆ ಮತ್ತು ಸಂಪುಟದಲ್ಲಿ ಯಾರು ಇರುತ್ತಾರೆ ಎಂಬುದರ ಕುರಿತು ನಾನು ಯಾವುದೇ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಸೋಮವಾರ ಪಿಟಿಐಗೆ ತಿಳಿಸಿದ್ದಾರೆ.
ಆಗಸ್ಟ್ 10 ರಿಂದ 18 ರವರೆಗೆ ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನ ನಡೆಯಲಿದೆ ಎಂದು ಸೋಮವಾರ ಪ್ರಕಟಣೆ ಹೊರಡಿಸಲಾಗಿದ್ದು, ಅದಕ್ಕೂ ಮುನ್ನ ಸಂಪುಟ ವಿಸ್ತರಣೆ ನಡೆಯುತ್ತಿದೆ.
ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಫಡ್ನವೀಸ್ ಮತ್ತು ಶಿಂಧೆ ಇತ್ತೀಚೆಗೆ ಹಲವು ಬಾರಿ ದೆಹಲಿಗೆ ಭೇಟಿ ನೀಡಿದ್ದರು.ಕನಿಷ್ಠ 15 ಸಚಿವರನ್ನು ಸೇರ್ಪಡೆಗೊಳಿಸುವ ಮೂಲಕ ಸಿಎಂ ಶಿಂಧೆ ಈ ವಾರ ತಮ್ಮ ಸಂಪುಟವನ್ನು ವಿಸ್ತರಿಸುವ ಸಾಧ್ಯತೆಯಿದೆ ಮತ್ತು ಉಪ ಮುಖ್ಯಮಂತ್ರಿ ಫಡ್ನವೀಸ್ ಅವರು ಪ್ರಮುಖ ಗೃಹ ಖಾತೆಯನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ.
ಸಚಿವ ಸಂಪುಟ ವಿಸ್ತರಣೆ ವಿಳಂಬದಿಂದ ರಾಜ್ಯ ಸರ್ಕಾರದ ಕಾರ್ಯವೈಖರಿಗೆ ಯಾವುದೇ ರೀತಿಯ ಧಕ್ಕೆ ಉಂಟಾಗಿಲ್ಲ ಮತ್ತು ಶೀಘ್ರದಲ್ಲಿಯೇ ಹೆಚ್ಚಿನ ಸಚಿವರನ್ನು ಸೇರ್ಪಡೆಗೊಳಿಸಲಾಗುವುದು ಎಂದು ಶಿಂಧೆ ಶನಿವಾರ ಹೇಳಿದ್ದರು.