ಮುಂಬಯಿ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಕನಿಷ್ಠ 15 ಸಚಿವರನ್ನು ಸೇರ್ಪಡೆಗೊಳಿಸುವ ಮೂಲಕ ಆಗಸ್ಟ್ 15 ರ ಮೊದಲು ತಮ್ಮ ಸಂಪುಟವನ್ನು ವಿಸ್ತರಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ನಿರ್ಣಾಯಕ ಗೃಹ ಖಾತೆಯನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಮೂಲಗಳು ಭಾನುವಾರ ತಿಳಿಸಿವೆ.
ಶಿವಸೇನೆಯಲ್ಲಿನ ಬಂಡಾಯದಿಂದಾಗಿ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ ನಂತರ ಶಿಂಧೆ ಮತ್ತು ಫಡ್ನವೀಸ್ ಕ್ರಮವಾಗಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯಾಗಿ ಜೂನ್ 30 ರಂದು ಪ್ರಮಾಣವಚನ ಸ್ವೀಕರಿಸಿದರು.ತಿಂಗಳು ಕಳೆದರೂ ಸಂಪುಟ ವಿಸ್ತರಣೆ ಮಾಡಿರದೆ ಇರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿತ್ತು. ದ್ವಿಸದಸ್ಯ ಸಚಿವ ಸಂಪುಟ, ವಿರೋಧ ಪಕ್ಷದ ನಾಯಕರಿಂದ ಟೀಕೆಗಳನ್ನು ಎದುರಿಸುತ್ತಲೇ ಇತ್ತು.
ಅಮೃತಾ ಫಡ್ನವಿಸ್ ಟ್ವೀಟ್ ವೈರಲ್
ಇದೀಗ ಮತ್ತೊಮ್ಮೆ ಅಮೃತಾ ಫಡ್ನವೀಸ್ ಮಾಡಿರುವ ಟ್ವೀಟ್ ಎಲ್ಲರ ಗಮನ ಸೆಳೆಯುತ್ತಿದೆ. ಫ್ರೆಂಡ್‌ಶಿಪ್ ಡೇ ಸಂದರ್ಭದಲ್ಲಿ ಟ್ವಿಟ್ಟರ್‌ನಲ್ಲಿ ಫೋಟೋವನ್ನು ಹಂಚಿಕೊಂಡಿರುವ ಅವರು ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಫೋಟೋವನ್ನು ಹಂಚಿಕೊಂಡು, ಫೋಟೋಗೆ “ಯೇ ದೋಸ್ತಿ ಹಮ್ ನಹೀ ತೊಡೆಂಗೆ …….. ಮಹಾರಾಷ್ಟ್ರದ ಎರಡು ಅಮೂಲ್ಯ ರತ್ನಗಳೊಂದಿಗೆ ಎಂಬ ಶೀರ್ಷಿಕೆ ನೀಡಿದ್ದಾರೆ. ಈ ಫೋಟೋ ಶೇರ್ ಮಾಡುವ ಮೂಲಕ ಮತ್ತೊಮ್ಮೆ ಶಿವಸೇನೆಯಲ್ಲಿ ಒಡಕು ಮೂಡಿಸಲು ಯತ್ನಿಸಿದ್ದಾರೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.