ಮುಂಬಯಿ : “ಇತ್ತ ಮಹಾರಾಷ್ಟ್ರದಲ್ಲಿ ಬಿಹಾರಿ ವಲಸೆ ಕಾರ್ಮಿಕ ಪುರುಷರು ಕೆಲಸ ಮಾಡಿಕೊಂಡಿರುವಂತೆಯೇ ಅತ್ತ ಬಿಹಾರದಲ್ಲಿ ಅವರ ಹೆಂಡಂದಿರು ಮಕ್ಕಳನ್ನು ಹೆರುತ್ತಿರುತ್ತಾರೆ; ಮಹಾರಾಷ್ಟ್ರದಲ್ಲಿನ ಆ ಬಿಹಾರಿ ಪುರುಷರು ತಾವು ಅಪ್ಪನಾದುದಕ್ಕೆ ಆಗ ಸ್ವೀಟ್ ಹಂಚುತ್ತಾರೆ’ ಎಂದು ಮಹಾರಾಷ್ಟ್ರದ ಬಿಜೆಪಿ ಎಂಎಲ್‌ಸಿ ಸುರೇಶ್ ದಾಸ್ ಹೇಳಿರುವ ವಿವಾದಾತ್ಮಕ ಮಾತುಗಳು ವೈರಲ್ ಆಗಿದ್ದು ವಿಭಿನ್ನ ರಾಜಕೀಯ ಪಕ್ಷಗಳ ಸದಸ್ಯರಿಂದ ಕೋಪೋದ್ರೇಕದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಮಹಾರಾಷ್ಟ್ರದಲ್ಲಿ ಅಪಾರ ಸಂಖ್ಯೆಯಲ್ಲಿ ಬಿಹಾರಿ ವಲಸೆ ಕಾರ್ಮಿಕರಿರುವ ಕಾರಣ ಸ್ಥಳೀಯರು ಇಲ್ಲಿನ ಉದ್ಯೋಗಾವಕಾಶಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಹೇಳುವ ಭರದಲ್ಲಿ ಎಂಎಲ್‌ಸಿ ದಾಸ್ ಅವರು ಈ ರೀತಿಯ ಕೀಳು ಉಪಮೆ ನೀಡಿರುವುದು ಸರ್ವತ್ರ ಟೀಕೆ, ಖಂಡನೆಗೆ ಗುರಿಯಾಗಿದೆ.
ಇದೇ ವೇಳೆ ಬಿಜೆಪಿ ನಾಯಕ ಹೈದರ್ ಆಜಂ ಅವರು “ದಾಸ್ ಅವರಿಂದ ಪಕ್ಷವು ಅವರ ಹೇಳಿಕೆ ಬಗ್ಗೆ ಸ್ಪಷ್ಟನೆ ಕೋರಲಿದೆ’ ಎಂದರಲ್ಲದೆ ಈ ವಿವಾದಾತ್ಮಕ ಹೇಳಿಕೆಗಾಗಿ ದಾಸ್ ಅವರು ನಿಶ್ಶರ್ತ ಕ್ಷಮೆಯಾಚಿಸಬೇಕು ಎಂದು ಹೇಳಿದರು.
ಸುರೇಶ್ ದಾಸ್ ಅವರ ಈ ಹೇಳಿಕೆ ಕೇವಲ ಖಂಡನಾರ್ಹ ಮಾತ್ರವಲ್ಲದೆ ಅದು ಜನರನ್ನು ವಿಭಜಿಸುವಂತಿದೆ ಎಂದು ಮತ್ತೋರ್ವ ಬಿಜೆಪಿ ನಾಯಕ ಸಂಜಯ್ ಟೈಗರ್ ಹೇಳಿದರು.
Related Articles
“ಬಿಜೆಪಿ ಎಂಎಲ್‌ಸಿ ಸುರೇಶ್ ದಾಸ್ ಅವರ ಈ ಹೇಳಿಕೆ 11 ಕೋಟಿ ಬಿಹಾರಿಗಳನ್ನು ಅವಮಾನಿಸುವಂತಿದೆ. ಬಿಹಾರದ ಜನರ ಆತ್ಮಗೌರವದ ಮೇಲೆ ದಾಳಿ ನಡೆಸುವಂತಿದೆ’ ಎಂದು ಜೆಡಿಯು ವಕ್ತಾರ ರಾಜೀವ್ ರಂಜನ್ ಹೇಳಿದರು. ದಾಸ್ ಅವರಿಗೆ ಮಾನಸಿಕ ಸಂತುಲನೆ ಇಲ್ಲವೆಂಬುದಕ್ಕೆ ಅವರ ಈ ಹೇಳಿಕೆಯೇ ಸಾಕ್ಷಿ ಎಂದವರು ಟೀಕಿಸಿದರು.
ದಾಸ್ ಅವರ ಹೇಳಿಕೆಯಲ್ಲಿ ಆಳುವ ಜನತಾ ಪಕ್ಷದ ಸಿದ್ಧಾಂತ ಏನೆಂಬುದು ಪ್ರತಿಫಲಿತವಾಗುತ್ತಿದೆ ಎಂದು ಆರ್‌ಜೆಡಿ ಟೀಕಿಸಿದೆ.