ಉತ್ತರಪ್ರದೇಶ: ಬಾಂಬ್ ಸ್ಫೋಟಿಸಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ ವ್ಯಕ್ತಿಯೋರ್ವನನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಶನಿವಾರ ಬಂಧಿಸಿದೆ.
25 ವರ್ಷದ ಕಮ್ರಾನ್ ಅಮೀನ್ ಎಂಬ ಯುವಕ, ಶುಕ್ರವಾರ ಮುಂಜಾನೆ ಉತ್ತರ ಪ್ರದೇಶ ರಾಜಧಾನಿ ಲಖನೌ ಪೊಲೀಸ್ ಮುಖ್ಯ ಕಚೇರಿಯ ಸಾಮಾಜಿಕ ಜಾಲತಾಣ ಸಹಾಯವಾಣಿಗೆ ಬೆದರಿಕೆ ಕರೆ ಮಾಡಿದ್ದು ಮಾತ್ರವಲ್ಲದೆ ಸಂದೇಶವನ್ನು ರವಾನಿಸಿದ್ದ.
ಈ ಸಂಬಂಧ ಲಖನೌ ದ ಗೋಮತಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಉತ್ತರಪ್ರದೇಶ ವಿಶೇಷ ಕಾರ್ಯಪಡೆ (ಎಸ್ ಟಿಎಫ್), ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಜಂಟಿ ತನಿಖೆ ಆರಂಭಿಸಿತ್ತು. ಈ ವೇಳೆ ಆರೋಪಿ ಖಾನ್ ಮುಂಬೈನ ಚುನಭಟ್ಟಿ ಏರಿಯಾದಲ್ಲಿ ಸಿಕ್ಕಿಬಿದ್ದಿದ್ದಾನೆ.
ಸದ್ಯ ಆರೋಪಿ ಕಮ್ರಾನ್ ಎಸ್ ಟಿಎಫ್ ವಶದಲ್ಲಿದ್ದು, ಭಾನುವಾರ ಮುಂಬೈ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ತೆಗೆದುಕೊಳ್ಳಲಾಗುತ್ತದೆ ಎಂದು ವರದಿಯಾಗಿದೆ.
ಕಮ್ರಾನ್ ಮೂಲತಃ ದಕ್ಷಿಣ ಮುಂಬೈನ ನಲ್ ಬಜಾರ್ ನಿವಾಸಿಯಾಗಿದ್ದು, ಕೆಲದಿನಗಳ ಹಿಂದೆ ಚುನಭಟ್ಟಿಗೆ ಸ್ಥಳಾಂತರಗೊಂಡಿದ್ದರು. ಈ ಹಿಂದೆ ದಕ್ಷಿಣ ಮುಂಬೈನ ಜಾವೇರಿ ಬಜಾರ್‌ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ, ತದನಂತರ 2017ರಲ್ಲಿ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿ ಅಂದಿನಿಂದ ನಿರುದ್ಯೋಗಿಯಾಗಿದ್ದನು.