ಮುಂಬಯಿ: ಮಹಾರಾಷ್ಟ್ರ ಮಾಜಿ ಸಿಎಂ ಮತ್ತು ಶಿವಸೇನೆ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಅವರ ಬ್ಯಾಗ್‌ಗಳನ್ನು ಅಧಿಕಾರಿಗಳು ಯವತ್ಮಾಳ್‌ನಲ್ಲಿ ಪರಿಶೀಲನೆ ನಡೆಸಿದ್ದಾರೆ. ಅದಕ್ಕೆ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋಗಳನ್ನೂ ಅಪ್‌ಲೋಡ್ ಮಾಡಿ ಆಕ್ರೋಶ ಹೊರ ಹಾಕಿದ ಬೆನ್ನಲ್ಲೇ ಬಿಜೆಪಿ ವಿಡಿಯೋ ಪೋಸ್ಟ್ ಮಾಡಿದ್ದು, ಠಾಕ್ರೆ ಮಾತ್ರವಲ್ಲ ಡಿಸಿಎಂ ದೇವೇಂದ್ರ ಫಡ್ನವಿಸ್ ಅವರ ಬ್ಯಾಗ್ ಗಳನ್ನೂ ಪರೀಕ್ಷಿಸಲಾಗಿದೆ ಎಂದು ಹೇಳಿದೆ.
ಪ್ರಕರಣ ಮಂಗಳವಾರ ರಾಜಕೀಯ ಬಣ್ಣ ಪಡೆದುಕೊಂಡಿತ್ತು, “ಮಹಾಯುತಿ ನಾಯಕರ ಬ್ಯಾಗ್‌ಗಳನ್ನು ಆಯೋಗದ ಅಧಿಕಾರಿಗಳು ಏಕೆ ಪರಿಶೀಲಿಸುತ್ತಿಲ್ಲ. ಅವರು ಬ್ಯಾಗ್‌ನಲ್ಲಿ ಒಳವಸ್ತ್ರ ಮಾತ್ರ ಕೊಂಡೊಯ್ಯುತ್ತಾರಾ ಎಂದು ಸಂಸದ ಸಂಜಯ ರಾವತ್ ಪ್ರಶ್ನಿಸಿದ್ದರು. ಜತೆಗೆ ಮಹಾರಾಷ್ಟ್ರಕ್ಕೆ ಬರುವ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರ ಬ್ಯಾಗನ್ನು ಪರಿಶೀಲನೆ ಮಾಡು ತ್ತೀರಾ ಎಂದು ಪ್ರಶ್ನಿಸಿದ್ದರು. ಆಪ್ ನಾಯಕರೂ ಕೂಡ ಬೆಳವಣಿಗೆಯನ್ನು ಖಂಡಿಸಿದ್ದರು.
ಕೆಲವು ನಾಯಕರಿಗೆ “ನಾಟಕ” ಸೃಷ್ಟಿ ಮಾಡುವ ಅಭ್ಯಾಸವಿದೆ ಎಂದು ಬುಧವಾರ ಬಿಜೆಪಿ ಪೋಸ್ಟ್ ಮಾಡಿ ತಿರುಗೇಟು ನೀಡಿದೆ. ಫಡ್ನವೀಸ್ ಅವರ ಬ್ಯಾಗ್‌ಗಳನ್ನು ನವೆಂಬರ್ 5 ರಂದು ಕೊಲ್ಲಾಪುರ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬಂದಿ ಪರಿಶೀಲಿಸುತ್ತಿರುವ ದೃಶ್ಯವನ್ನು ಪೋಸ್ಟ್ ಮಾಡಿದೆ.
ಸಂವಿಧಾನವನ್ನು ಪ್ರದರ್ಶನಕ್ಕಾಗಿ ಹಿಡಿದಿಟ್ಟುಕೊಳ್ಳುವುದು ಸಾಕಾಗುವುದಿಲ್ಲ; ಸಾಂವಿಧಾನಿಕ ವ್ಯವಸ್ಥೆಗಳನ್ನೂ ಅನುಸರಿಸಬೇಕು. ಎಲ್ಲರೂ ಸಂವಿಧಾನವನ್ನು ಗೌರವಿಸಬೇಕೆಂದು ನಾವು ವಿನಂತಿಸುತ್ತೇವೆ ಎಂದು ಬಿಜೆಪಿ ಪೋಸ್ಟ್ ಮಾಡಿದೆ.