Advertisement

ಮಹಾರಾಷ್ಟ್ರದಲ್ಲಿ ಭಾರೀ ಪ್ರಮಾಣದ ಸ್ಫೋಟಕ‌ ವಶ

07:57 AM Aug 11, 2018 | |

ಮುಂಬಯಿ: ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್‌) ಶುಕ್ರವಾರ ಹಿಂದೂ ಸಂಘಟನೆಯ ಮುಖಂಡನನ್ನು ಬಂಧಿಸಿದ್ದು, ಆತನ ಮನೆಯಲ್ಲಿದ್ದ ಭಾರೀ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಂಡಿದೆ. ಪಾಲ್ಗಾರ್‌ ಜಿಲ್ಲೆಯ ನಲ್ಲಸೋಪಾರ ಗ್ರಾಮದಲ್ಲಿ ವಾಸವಿದ್ದ ವೈಭವ್‌ ರಾವತ್‌, ಹಿಂದೂ ಗೋವಂಶ ರಕ್ಷಾ ಸಮಿತಿಯ ಸದಸ್ಯನಾಗಿದ್ದಾನೆ. ಆತನ ಮನೆ ಹಾಗೂ ಅಂಗಡಿಯಲ್ಲೂ ಶೋಧ ನಡೆಸಿದ್ದು, ಕಚ್ಚಾ ಬಾಂಬ್‌ ಸೇರಿದಂತೆ ಭಾರಿ ಸ್ಫೋಟಕಗಳು ದೊರೆತಿವೆ. ಇದಾದ ಕೆಲವೇ ಗಂಟೆಗಳಲ್ಲಿ, ಪುಣೆ ಮತ್ತು ಪಾಲ್ಗಾರ್‌ನಲ್ಲಿ ಮತ್ತಿಬ್ಬರನ್ನು ಎಟಿಎಸ್‌ ಬಂಧಿಸಿದೆ. ಬಂಧಿತ ಮೂವರನ್ನು 18ರವರೆಗೆ ಪೊಲೀಸ್‌ ವಶಕ್ಕೆ ಒಪ್ಪಿಸಲಾಗಿದೆ. ಇವರು ಸನಾತನ ಸಂಸ್ಥೆಯ ಬಗ್ಗೆ ಮೃದುಧೋರಣೆ ಉಳ್ಳವರು ಎಂದು ಹೇಳಲಾಗಿದೆ.

Advertisement

ಘಟನೆಗೆ ವಿರೋಧ ವ್ಯಕ್ತಪಡಿಸಿದ ಹಿಂದೂ ಜನಜಾಗೃತಿ ಸಮಿತಿ, ಇದೊಂದು ಮಾಲೇಗಾಂವ್‌ 2 ರೀತಿ ಇದೆ. ವೈಭವ್‌ ಮೇಲೆ ವೃಥಾ ಆರೋಪ ಹೊರಿಸಲಾಗಿದೆ. ವೈಭವ್‌ ಹಿಂದೂ ಪರ ಹೋರಾಟಗಾರ ನಾಗಿದ್ದು, ಹಲವು ಪ್ರತಿಭಟನೆ ಹಾಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಹಿಂದೆಯೂ ಈ ರೀತಿ ಹಲವು ಪ್ರಕರಣಗಳಲ್ಲಿ ಹಿಂದೂಗಳನ್ನು ಟಾರ್ಗೆಟ್‌ ಮಾಡಲಾಗಿದೆ ಎಂದು ಹೇಳಿದೆ. ಆರಂಭದಲ್ಲಿ ರಾವತ್‌ ಸನಾತನ ಸಂಸ್ಥೆಯ ಸದಸ್ಯ ಎಂದು ಹೇಳಲಾಗಿತ್ತಾದರೂ, ನಂತರ ಗೋವಂಶ ರಕ್ಷಾ ಸಮಿತಿಯ ಸದಸ್ಯ ಎಂದು ಸ್ಪಷ್ಟಪಡಿಸಲಾಗಿದೆ.

ನಿಷೇಧಕ್ಕೆ ಆಗ್ರಹ
ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ, ಬಂಧಿತರು ಸನಾತನ ಸಂಸ್ಥೆಗೆ ಸೇರಿದ ವರಾಗಿದ್ದು, ಆ ಸಂಸ್ಥೆಯನ್ನು ಕೂಡಲೇ ಸರಕಾರ ನಿಷೇಧಿಸಬೇಕು ಎಂದು ಮಹಾರಾಷ್ಟ್ರದ ವಿಪಕ್ಷ ಕಾಂಗ್ರೆಸ್‌ ಮತ್ತು ಎನ್‌ಸಿಪಿ ಆಗ್ರಹಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next