ಮುಂಬೈ: ಕೆಲದಿನಗಳ ಹಿಂದೆ ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನವೆಬ್ಬಿಸಿ NCP ನಾಯಕ ಶರದ್ ಪವಾರ್ ಅವರಿಗೆ ಭರ್ಜರಿ ಹೊಡೆತವನ್ನು ಕೊಟ್ಟಿದ್ದ ಅಜಿತ್ ಪವಾರ್ ಅವರು ತಮ್ಮ ಚಿಕ್ಕಪ್ಪ ಶರದ್ ಪವಾರ್ ಮನೆಗೆ ದಿಢೀರ್ ಭೇಟಿ ನೀಡಿದ್ದಾರೆ.
ಶರದ್ ಪವಾರ್ ಪತ್ನಿ ಪ್ರತಿಭಾ ಪವಾರ್ ಅವರು ಶುಕ್ರವಾರ ದಕ್ಷಿಣ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೈಯ ಸರ್ಜರಿಗೆ ಒಳಗಾಗಿದ್ದಾರೆ. ಹೀಗಾಗಿ ಅವರ ಆರೋಗ್ಯ ವಿಚಾರಿಸಲು ಅಜಿತ್ ಅವರು ಶರದ್ ಪವಾರ್ ಮನೆಗೆ ಭೇಟಿ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ವಿಶೇಷವೇನೆಂದರೆ, ಇತ್ತೀಚೆಗೆ ಶರದ್ ಪವಾರ್‌ಗೆ ಟಕ್ಕರ್ ಕೊಟ್ಟು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನವನ್ನು ಒಲಿಸಿಕೊಂಡಿದ್ದ ಅಜಿತ್ ಪವಾರ್, ಶರದ್ ಪವಾರ್ ಜೊತೆಗಿನ ಬಿರುಕಿನ ಬಳಿಕ ಮೊದಲ ಬಾರಿ ಅವರ ʻಸಿಲ್ವರ್ ಓಕ್ʼ ಮನೆಗೆ ಭೇಟಿ ಕೊಟ್ಟಿದ್ದಾರೆ.
ಶರದ್ ಪವಾರ್ ಅವರ ಅಣ್ಣನ ಮಗನಾಗಿರುವ ಅಜಿತ್ ಪವಾರ್ ಜುಲೈ 2 ರಂದು ಶರದ್ ಪವಾರ್ ಜೊತೆ ಮುನಿಸಿಕೊಂಡು ಏಕನಾಥ್ ಶಿಂಧೆ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದರು. ಸದ್ಯಕ್ಕೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಪಟ್ಟದ ಜೊತೆಗೆ ಹಣಕಾಸು ಖಾತೆಯನ್ನೂ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ: ಹತಾಶೆಗೊಂಡ ರಾಜವಂಶ; ರಾಹುಲ್ ಟ್ವೀಟ್ ಗೆ ಸ್ಮೃತಿ ಇರಾನಿ ತಿರುಗೇಟು