ಸ್ವಾತಂತ್ರ್ಯ ಸಿಕ್ಕಾಗ ಭಾರತದ ನಡುವೆ 560ಕ್ಕೂ ಹೆಚ್ಚು ಚಿಕ್ಕ- ದೊಡ್ಡ ಸಂಸ್ಥಾನಗಳಿದ್ದವು. ಈ ಸಂಸ್ಥಾನಗಳನ್ನು ತುಂಡರಸರು ಆಳುತ್ತಿದ್ದರು. ಭಾರತ ಸರಕಾರ ಇವುಗಳಲ್ಲಿ ಹೆಚ್ಚಿನ ಸಂಸ್ಥಾನಗಳನ್ನು 1949ರ ಒಳಗೆ ಭಾರತದೊಡನೆ ವಿಲಿನೀಕರಿಸಿತ್ತು. ಅರಮನೆ, ಭೂ ಹಿಡುವಳಿ ಮುಂತಾದ ಖಾಸಗಿ ಆಸ್ತಿಗಳು ಆಯಾ ಸಂಸ್ಥಾನದ ರಾಜಕುಟುಂಬಗಳ ಬಳಿಯೇ ಉಳಿದುಕೊಂಡವು. ಇದಲ್ಲದೆ ಈ ರಾಜರಿಗೆ ರಾಜ್ಯದ ಬದಲು “ಪ್ರಿವೀ ಪರ್ಸ್’ (ರಾಜಭತ್ಯೆ) ಎಂಬ ಹೆಸರಿನಲ್ಲಿ ಮಾಸಾಶನ ನಿಗದಿಪಡಿಸಲಾಗಿತ್ತು. ಈ ಹಣದಲ್ಲಿ ರಾಜರು ಐಷಾರಾಮದಿಂದ ಜೀವನ ಸಾಗಿಸುತ್ತಿದ್ದರು.
1971ರಲ್ಲಿ ಇಂದಿರಾಗಾಂಧಿ ಸರಕಾರ ಸಂವಿಧಾನದಲ್ಲಿ 26ನೆಯ ತಿದ್ದುಪಡಿಯ ಮೂಲಕರಾಜರಿಗೆ ಸಿಗುತ್ತಿದ್ದ ಇವೆಲ್ಲ ರಾಜಭತ್ಯೆಯನ್ನು ರದ್ದುಪಡಿಸಿತು. ಇವರ ಬಳಿ ಸಾಕಷ್ಟು ಆಸ್ತಿಪಾಸ್ತಿಗಳಿದ್ದು , ಅವುಗಳ ಆದಾಯವೇ ಗಮ್ಮತ್ತಿನ ಜೀವನ ಸಾಗಿಸಲು ಸಾಕಿತ್ತು. ಕೆಲವರು ತಮ್ಮ ಅರಮನೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸಿದರೆ, ಇನ್ನೂ ಕೆಲವರು ಫೈವ್ ಸ್ಟಾರ್ ಹೊಟೇಲುಗಳಿಗೆ ನಡೆಸಲು ಕೊಟ್ಟರು.
ಇತ್ತೀಚೆಗೆ ಮಾಜಿ ಬರೋಡಾ ಸಂಸ್ಥಾನದ ರಾಜಮಾತೆ ರಾಧಿಕಾರಾಜೆ ಗಾಯಕ್‌ವಾಡ್ ತಮ್ಮ ಬದುಕಿನ ಬವಣೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. “”ಪ್ರಿವೀ ಪರ್ಸ್ ರದ್ದಾದ ಬಳಿಕ ನಾವು ಭಾರೀ ಕಷ್ಟದಲ್ಲಿ ದಿನ ಸಾಗಿಸುತ್ತಿದ್ದೆವು. ಹಲವು ಬಾರಿ ಅವಮಾನದ ಪರಿಸ್ಥಿತಿ ಎದುರಿಸಬೇಕಾಗಿತ್ತು. ಅರಮನೆಯ ಕೆಲಸ-ಕಾರ್ಯಗಳನ್ನು ನಡೆಸಲು
ಮನೆಯ ಬಂಗಾರದ ಪಾತ್ರೆಗಳನ್ನು ಗುಟ್ಟಿನಲ್ಲಿ ಮಾರಿದ್ದೆವು. ಕೆಲವರು ಆಸ್ಥಾನದ ಸಿಂಹಾಸನವನ್ನು ಕೂಡ ಮಾರಬೇಕಾಗಿ ಬಂತು” ಎಂದು ಅಲವತ್ತಿದ್ದರು.
ಈ ಹೇಳಿಕೆಗೆ ಟ್ವಿಟರ್‌ನಲ್ಲಿ ಉಗ್ರ ಪ್ರತಿಕ್ರಿಯೆ ಬಂದಿತ್ತು. “ಹಿಂದೆ ಇವರೆಲ್ಲ ಜನರನ್ನು ಸುಲಿದು ಅರಮನೆಯ ಕಾರುಬಾರು ಚಲಾಯಿಸುತ್ತಿದ್ದರು. ಸ್ವಾತಂತ್ರ್ಯದ ಬಳಿಕ ನಮ್ಮ ತೆರಿಗೆಯ ಹಣ ಇವರ ಐಷಾರಾಮಕ್ಕೆ ಹೋಗುತ್ತಿತ್ತು. ಇವರ ಬಂಗಾರದ ಪಾತ್ರೆಗಳು, ಸಿಂಹಾಸನ ಬಂದಿದ್ದು ನಮ್ಮ ಹಣದಿಂದ ತಾನೆ?” ಎಂದು ಹಲವರು ಪ್ರಶ್ನಿಸಿದ್ದರು.
“ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ್ದವರು ಬಡತನದಲ್ಲಿ ಹೊಟ್ಟೆಗಿಲ್ಲದೆ ತೀರಿಕೊಂಡರು. ಇವರ ಬಳಿ ಬಂಗಾರದ ಪಾತ್ರೆ ಇತ್ತು. ಜನರು ಮಣ್ಣಿನ ತಟ್ಟೆಯಲ್ಲಿ ಉಣ್ಣುತ್ತಿದ್ದರು. ಇವರ ಐಷಾರಾಮಕ್ಕೆ ಸಿಂಹಾಸನ ಮಾರಿದರು ಎನ್ನುವುದು ದೊಡ್ಡ ಸಂಗತಿಯೆ? ಭಾರತದ ಅನೇಕ ಕಡೆಗಳಲ್ಲಿ ಬಡಪಾಯಿ ಜನರು ಮನೆಯ ಮಕ್ಕಳನ್ನು ಕೂಡ ಮಾರಿ ಜೀವನ ಸಾಗಿಸಿದ ದಾರುಣ ಘಟನೆಗಳಿವೆ! ” ಎಂದು ಜನರು ಟೀಕಿಸಿದರು.
ಬರೋಡಾ ಸಂಸ್ಥಾನ ಬ್ರಿಟಿಷರ ಬೆಂಬಲಿಗ ರಾಜ್ಯಗಳಲ್ಲಿ ಒಂದಾಗಿತ್ತು. ಈ ರಾಜಕುಟುಂಬದ ಬಳಿ ಈಗ ಇರುವ ಆಸ್ತಿಪಾಸ್ತಿಗಳ ಮೌಲ್ಯ 20 ಸಾವಿರ ಕೋಟಿಗೂ ಹೆಚ್ಚು. ಇವರ ವಾಸಸ್ಥಾನ “ಲಕ್ಷ್ಮೀವಿಲಾಸ ಪ್ಯಾಲೇಸ್’ ಜಗತ್ತಿನ ಅತ್ಯಂತ ದೊಡ್ಡ ಖಾಸಗಿ ನಿವಾಸವಾಗಿದೆ. ಲಂಡನ್‌ನ ಬಕಿಂಗ್‌ಹ್ಯಾಮ್ ಪ್ಯಾಲೇಸ್‌ಗಿಂತ ಮೂರು ಪಟ್ಟು ಹೆಚ್ಚು ದೊಡ್ಡದು ಇದು. ಇದರ ಕೆಲವು ಭಾಗಗಳನ್ನು ಈಗ ಮ್ಯೂಸಿಯಂ ಆಗಿ ಮಾಡಲಾಗಿದೆ. ಇದರೊಳಗೆ ಪ್ರವೇಶಕ್ಕಾಗಿ ಭಾರತೀಯ ಪ್ರವಾಸಿಗರು ತಲಾ 250 ರೂಪಾಯಿ ಟಿಕೇಟು ಖರೀದಿಸಬೇಕು. ತಿಂಗಳಿಗೆ ಇಲ್ಲಿಂದಲೇ ಸುಮಾರು 20 ಲಕ್ಷ ಆದಾಯ ಬರುತ್ತದೆ!
*ತುಕಾರಾಮ್ ಶೆಟ್ಟಿ
ಕೃಪೆ: ತರಂಗ ವಾರಪತ್ರಿಕೆ