Advertisement
2ನೇ ಮಹಾರಾಣಾ ಉದಯ್ ಸಿಂಗ್ ಮತ್ತು ಮಹಾರಾಣಿ ಜೈವಂತ್ ಬಾಯಿ ಪುತ್ರನಾಗಿ ಮಹಾರಾಣಾ ಪ್ರತಾಪ್ ಜನಿಸಿದ್ದ. ಈತನಿಗೆ ಶಕ್ತಿ ಸಿಂಗ್, ವಿಕ್ರಮ್ ಸಿಂಗ್ ಹಾಗೂ ಜಗ್ಮಾಲ್ ಸಿಂಗ್ ಸೇರಿ ಮೂವರು ಸಹೋದರರು. ಅಲ್ಲದೇ ಇಬ್ಬರು ಮಲ ಸಹೋದರಿಯರು ಇದ್ದರು.
Related Articles
Advertisement
ಮಹಾರಾಣಾ ಪ್ರತಾಪ್ ಅಕ್ಬರ್ ನನ್ನು ಭಾರತದ ದೊರೆ ಎಂದು ಒಪ್ಪಿಕೊಳ್ಳಲೇ ಇಲ್ಲ. ತನ್ನ ಜೀವನ ಪೂರ್ತಿ ಅಕ್ಬರ್ ವಿರುದ್ಧ ಹೋರಾಡುತ್ತಲೇ ಕಳೆದಿದ್ದ. ಮೊದಲು ಅಕ್ಬರ್ ಮಹಾರಾಣಾ ಪ್ರತಾಪ್ ನನ್ನು ಗೆಲ್ಲಲು ರಾಜತಾಂತ್ರಿಕ ಮಾರ್ಗದ ಮೂಲಕ ಪ್ರಯತ್ನಿಸಿದ್ದ. ಆದರೆ ಅದು ಫಲ ನೀಡಲಿಲ್ಲ. ಪ್ರತಾಪ್ ಗೆ ಅಕ್ಬರ್ ವಿರುದ್ಧ ಹೋರಾಡಲು ಯಾವುದೇ ಉದ್ದೇಶವಿರಲಿಲ್ಲ. ಆದರೆ ಅಕ್ಬರ್ ಎದುರು ತಲೆಬಾಗಿ ಅವನನ್ನು ತನ್ನ ರಾಜನೆಂದು ಒಪ್ಪಿಕೊಳ್ಳಲು ತಯಾರಿಲ್ಲ ಎಂದು ಪ್ರತಿಪಾದಿಸಿದ. ಮಹಾರಾಣಾ ಅಕ್ಬರ್ ನ ಸ್ನೇಹಿತನಾಗಲು ಕೆಲವೊಂದು ಸಾಧ್ಯತೆಗಳಿದ್ದವು. ಆದರೆ ಚಿತ್ತೂರನ್ನು ಮುತ್ತಿಗೆ ಹಾಕಿದಾಗ, ಅಕ್ಬರ್ 27,000 ಜನರನ್ನು ಕೊಂದಿದ್ದ ಎಂದು ಕೆಲವು ವಿದ್ವಾಂಸರು ವಾದಿಸುತ್ತಾರೆ. ಈ ಘಟನೆಯು ಮಹಾರಾಣಾನ ಮನಸ್ಸಿನಲ್ಲಿ ಅಳಿಸಲಾಗದ ನೋವಾಗಿ ಉಳಿದಿತ್ತು.ಇಂತಹ ಅನ್ಯಾಯ ಮತ್ತು ಕ್ರೂರತೆಗೆ ತಲೆಬಾಗುವುದಿಲ್ಲ ಎಂದು ಮಹಾರಾಣಾ ನಿರ್ಧರಿಸಿದ್ದ ಎಂದು ಇತಿಹಾಸದ ಪುಟದಲ್ಲಿ ದಾಖಲಾಗಿದೆ. ಮಹಾರಾಣಾ ಪ್ರತಾಪ್ ವಿರುದ್ಧ ಅಕ್ಬರ್ ಒಂದರ ಹಿಂದೊಂದು ದಂಡಯಾತ್ರೆಯನ್ನು ಕೈಗೊಳ್ಳುತ್ತಾನಾದರೂ ಅದರಲ್ಲಿ ಯಶಸ್ವಿಯಾಗುವುದಿಲ್ಲ. ಮಹಾರಾಣಾ ಪ್ರತಾಪ್ ನನ್ನುಉ ಸೋಲಿಸುವ ಯತ್ನದಲ್ಲಿ ಅವನು ಅಪಾರ ಹಣವನ್ನು ಮತ್ತು ಸೈನಿಕರನ್ನು ಬಲಿಕೊಟ್ಟ. 30 ವರ್ಷಗಳ ಕಾಲ ಪ್ರತಾಪ್ ಅಕ್ಬರ್ ನನ್ನು ಹಿಮ್ಮೆಟ್ಟಿಸಿದ್ದ ಮತ್ತು ಪ್ರತಾಪ್ ತನ್ನ ಜೀವನದ ಕೊನೆಯ ಹತ್ತು ವರ್ಷಗಳಲ್ಲಿ ತನ್ನ ರಾಜಧಾನಿಯ ಹೆಚ್ಚಿನ ಭಾಗಗಳನ್ನು ಮುಕ್ತಗೊಳಿಸಲು ಸಮರ್ಥನಾದ. ಆದರೆ ಚಿತ್ತೂರು ಮತ್ತು ಮಂಡಲ್ ಗಢ್ ಎರಡು ಕೋಟೆಗಳನ್ನು ಪ್ರತಾಪ್ ಗೆ ಮರುವಶಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದು ಆತನನ್ನು ತೀವ್ರ ನಿರಾಸೆಗೊಡ್ಡಿತ್ತು. ಬೇಟೆಯಾಡುವಾಗ ಸಂಭವಿಸಿದ ಗಾಯಗಳಿಂದಾಗಿ ಮಹಾರಾಣಾ ಪ್ರತಾಪ್ ಚಾವಂದ್ ನಲ್ಲಿ 1597ರ ಜನವರಿ 29ರಂದು ಸಾವನ್ನಪ್ಪಿದ್ದ. ಆಗ ಮಹಾರಾಣಾ ಪ್ರತಾಪ್ ಗೆ 56 ವರ್ಷ ವಯಸ್ಸಾಗಿತ್ತು. ಪ್ರತಾಪ್ ನ ಮರಣಶಯ್ಯೆಯಲ್ಲಿ ತನ್ನ ಪುತ್ರ ಮತ್ತು ಉತ್ತರಾಧಿಕಾರಿ ಅಮರ್ ಸಿಂಗ್ ಮೊಘಲ್ ರ ವಿರುದ್ಧ ನಿರಂತರ ಹೋರಾಟವನ್ನು ಮುಂದುವರಿಸುವ ಪ್ರತಿಜ್ಞೆ ಮಾಡಿಸಿದ್ದ. ಚಿತ್ತೂರು ಕೋಟೆಯನ್ನು ಶತ್ರುಗಳಿಂದ ಮುಕ್ತಗೊಳಿಸುವ ತನಕ ನೆಲದ ಮೇಲೆ ನಿದ್ರಿಸುವುದಾಗಿ ಮತ್ತು ಗುಡಿಸಲಿನಲ್ಲಿ ವಾಸಿಸುವುದಾಗಿ ಮಹಾರಾಣಾ ಶಪಥತೊಟ್ಟಿದ್ದರಿಂದ ಪ್ರತಾಪ್ ಹಾಸಿಗೆಯ ಮೇಲೆ ಮಲಗಲಿಲ್ಲ ಎಂದು ಇತಿಹಾಸದಲ್ಲಿ ದಾಖಲಾಗಿದೆ.