ಜಮ್ಮು: ಕಳೆದ ಎರಡೂವರೆ ವರ್ಷಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ವ್ಯಾಪಾರ ಹಾಗೂ ಅಭಿವೃದ್ಧಿ ಚಟುವಟಿಕೆಗಳು ಕುಸಿತ ಕಂಡಿದೆ. ಅಷ್ಟೇ ಅಲ್ಲ ಜನರು ಕೂಡಾ ಬಡತನದತ್ತ ಸಾಗುತ್ತಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಅಜಾದ್ ಹೇಳಿದರು.
ಇದನ್ನೂ ಓದಿ:ಕರ್ನಾಟಕ ಬಂದ್‌ನಿಂದ ಯಾರಿಗೆ ಪ್ರಯೋಜನ ?: ಎಚ್.ಡಿ. ಕುಮಾರಸ್ವಾಮಿ
ಆಡಳಿತಾರೂಢ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅಜಾದ್, ಪ್ರಸ್ತುತ ಸರ್ಕಾರಕ್ಕಿಂತ ಈ ಹಿಂದಿನ ಮಹಾರಾಜರ ಕಾಲದ ಆಡಳಿತವೇ ಉತ್ತಮವಾಗಿತ್ತು. ಈ ಸರ್ಕಾರ ಸಾಂಪ್ರದಾಯಿಕ ದರ್ಬಾರ್ ಆಡಳಿತದ ನಡೆಯನ್ನು ನಿಲ್ಲಿಸಿದೆ.
ದರ್ಬಾರ್ ಆಡಳಿತಾವಧಿಯಲ್ಲಿ ಸಿವಿಲ್ ಸೆಕ್ರೆಟರಿಯೇಟ್ ಮತ್ತು ಇತರ ಕಚೇರಿಗಳು ಬೇಸಿಗೆಯ ಆರು ತಿಂಗಳ ಕಾಲ ಶ್ರೀನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಉಳಿದ ಆರು ತಿಂಗಳ ಕಾಲ ಜಮ್ಮುವಿನಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಇದನ್ನು 1872ರಲ್ಲಿ ಮಹಾರಾಜ ಗುಲಾಬ್ ಸಿಂಗ್ ಆರಂಭಿಸಿದ್ದು ಎಂದು ಗುಲಾಂನಬಿ ಹೇಳಿದರು.
ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿಂಗ್ ಅವರು ಈ ಸಂಪ್ರದಾಯವನ್ನು ಅಂತ್ಯಗೊಳಿಸುವುದಾಗಿ ಜೂನ್ 20ರಂದು ಘೋಷಿಸಿದ್ದರು. ನಾನು ಯಾವತ್ತೂ ದರ್ಬಾರ್ ಆಡಳಿತವನ್ನು ಬೆಂಬಲಿಸುತ್ತೇನೆ. ಮಹಾರಾಜರು ಕಾಶ್ಮೀರ ಮತ್ತು ಜಮ್ಮು ಪ್ರದೇಶದ ಸಾರ್ವಜನಿಕರ ಹಿತಾಸಕ್ತಿಯ ಬಗ್ಗೆ ಲಕ್ಷ್ಯ ವಹಿಸಿದ್ದರು. ಇದರಲ್ಲಿ ದರ್ಬಾರ್ ಆಡಳಿತ ಕೂಡಾ ಒಮದಾಗಿದೆ ಎಂದು ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದರು.
ಜಮ್ಮು-ಕಾಶ್ಮೀರದ ನಿವಾಸಿಗಳಲ್ಲದವರಿಂದ ಭೂಮಿ ಮತ್ತು ಉದ್ಯೋಗವನ್ನು ರಕ್ಷಿಸುವುದಾಗಿ ಮಹಾರಾಜ್ ಹರಿ ಸಿಂಗ್ ಅವರು ಭರವಸೆ ನೀಡಿದ್ದರು. ಹಲವಾರು ವರ್ಷಗಳು ಕಳೆದು ಹೋದ ಮೇಲೆ ನಾವು ಇಂದು ಮಹಾರಾಜರನ್ನು ಸರ್ವಾಧಿಕಾರಿ ಎಂದು ಕರೆಯುತ್ತಿದ್ದರೂ ಕೂಡಾ ಪ್ರಸ್ತುತ ಸರ್ಕಾರದ ಆಡಳಿತಕ್ಕಿಂತ ಉತ್ತಮವಾಗಿತ್ತು ಎಂದರು.