ಮುಂಬಯಿ: ಕರ್ನಾಟಕ ನ್ಪೊರ್ಟಿಂಗ್ ಅಸೋಸಿಯೇಶನ್ ಆಶ್ರಯದಲ್ಲಿ ರವಿ ಅಂಚನ್‌ನ ಅವರ ಪ್ರೋತ್ಸಾಹದಿಂದ 7 ವರ್ಷದ ಬಳಿಕ ಚರ್ಚ್‌ಗೇಟ್ ಕ್ರೀಡಾಂಗಣದಲ್ಲಿ ನಡೆದ ದಿ| ವಿಶ್ವನಾಥ ಅಂಚನ್ ಸ್ಮಾರಕ ಹಿರಿಯರ ಫುಟ್ಬಾಲ್ ಪಂದ್ಯಾಟದಲ್ಲಿ ಮಹಾರಾಜಾ (ಏರ್‌ಇಂಡಿಯಾ) ತಂಡವು ವಿನ್ನರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರೆ, ರಿಸರ್ವ್ ಬ್ಯಾಂಕ್ ತಂಡವು ರನ್ನರ್ ಪ್ರಶಸ್ತಿಗೆ ಭಾಜನವಾಯಿತು.
ಮಾ. 25ರಂದು ಅಪರಾಹ್ನ ಫೈನಲ್ ಪಂದ್ಯವು ನಡೆದಿದ್ದು, ಪ್ರಥಮಾರ್ಧದಲ್ಲಿ ಮಹಾರಾಜಾ ಮತ್ತು ರಿಸರ್ವ್ ಬ್ಯಾಂಕ್ ತಂಡವು ಸಮಾಬಲ ಸಾಧಿಸಿದರೆ, ದ್ವಿತೀಯಾರ್ಧದಲ್ಲಿ 28ನೇ ನಿಮಿಷಕ್ಕೆ ಡೇರೇಲ್ ಅವರು ಮಾಡಿದ ಪಾಸ್‌ನ್ನು ಅಂತಾರಾಷ್ಟ್ರೀಯ ಆಟಗಾರ ಗೋಡ್‌ಫ್ರೆಡ್ ಪೆರೇರಾ ಅವರು ಗೋಲಿಗೆ ಪರಿವರ್ತಿಸಿ ತಂಡಕ್ಕೆ 1-0 ಅಂತರದ ಮುನ್ನಡೆ ತಂದುಕೊಟ್ಟರು, ಅನಂತರ ಅಂಥೋನಿ ಫೆರ್ನಾಂಡಿಸ್ ಅವರ ಮತ್ತೂಂದು ಗೋಲಿನಿಂದ ಮಹಾರಾಜಾ ತಂಡವು 2-0 ಮುನ್ನಡೆ ಸಾಧಿಸಿ, ಚಾರಿತ್ರಿಕ ಗೆಲುವನ್ನು ದಾಖಲಿಸಿದ ಮಹಾರಾಜಾ ತಂಡಕ್ಕೆ ವಿನ್ನರ್ ಪ್ರಶಸ್ತಿಯೊಂದಿಗೆ 50,000 ರೂ. ನಗದು ಬಹುಮಾನವನ್ನು ಗಣ್ಯರು ಪ್ರದಾನಿಸಿದರು.
ಮೂರನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಗೋಲ್ಡನ್ ಗನರ್ಸ್ ತಂಡವು ಸ್ಟೇಟ್ ಬ್ಯಾಂಕ್ ತಂಡವನ್ನು 1-0 ಅಂತರದ ಸೋಲಿಸಿತು. ವಿಜಯಿ ತಂಡದ ಪರವಾಗಿ ಫಿಲಿಫ್ ಗೋನ್ಸಾಲ್ವಿಸ್ ಗೋಲು ಹೊಡೆದರು. ಉತ್ತಮ ಗೋಲ್‌ಕೀಪರ್ ಪ್ರಶಸ್ತಿಯನ್ನು ಮಹಾರಾಜ ತಂಡದ ಶ್ಯಾಮ್ ಸಾವಂತ್, ಉತ್ತಮ ಡಿಫೆಂಡರ್ ಪ್ರಶಸ್ತಿಯನ್ನು ಮಹಾರಾಜಾ ತಂಡದ ಜೋಗಿಂಧರ್ ಥಾಪಾ, ಉತ್ತಮ ಮಿಡ್ ಫೀಲ್ಡರ್ ಪ್ರಶಸ್ತಿಯನ್ನು ಸೆಂಟ್ರಲ್ ರೈಲ್ವೇ ತಂಡದ ಅರೀಫ್ ಅನ್ಸಾರಿ, ಉತ್ತಮ ಫಾರ್ವರ್ಡರ್ ಪ್ರಶಸ್ತಿಯನ್ನು ಮಹಾರಾಜಾ ತಂಡದ ಗೋಡ್‌ಫ್ರೇಡ್ ಪರೇರಾ, ಬೆಸ್ಟ್ ಸ್ಕೋರರ್ ಪ್ರಶಸ್ತಿಯನ್ನು ರಿಸರ್ವ್ ಬ್ಯಾಂಕ್ ತಂಡದ ವಸಂತ ಕರ್ಕೇರ ಅವರು ಪಡೆದು ಎಲ್ಲರ ಪ್ರಶಂಸೆಗೆ ಪಾತ್ರರಾದರು.
ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಡಬಲ್ ಒಲಂಪಿಯನ್ ಎಸ್. ಎಸ್. ನಾರಾಯಣ್, ಯೂನಿಯನ್ ಬ್ಯಾಂಕಿನ ಡಿಜಿಎಂ ಒ. ಪಿ. ನಿಗಂ, ಅರ್ಜುನ್ ಪ್ರಶಸ್ತಿ ಪುರಸ್ಕೃತ ಅಶೋಕ್ ಶಿಂಧೆ, ಯೂನಿಯನ್ ಬ್ಯಾಂಕ್‌ನ ಮಾಜಿ ನಿರ್ದೇಶಕ ಶಂಕರ್ ಸೌತರ್ ವಾಜ್, ಎಸ್. ಎಂ. ಶೆಟ್ಟಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು, ಪಶ್ಚಿಮ ರೈಲ್ವೇಯ ರಣಜಿತ್ ಮಟರ್ ಅವರು ಉಪಸ್ಥಿತರಿದ್ದು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು.
ಸಮಾರಂಭದಲ್ಲಿ ಕರ್ನಾಟಕ ನ್ಪೋರ್ಟಿಂಗ್ ಅಸೋಸಿಯೇಶನ್ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸಮಿತಿಯ ಸದಸ್ಯರು, ಫುಟ್ಬಾಲ್ ಸಮಿತಿಯ ಸದಸ್ಯರು, ಕ್ರೀಡಾಭಿಮಾನಿಗಳು, ಹಿತೈಷಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ರನ್ನರ್ ಪ್ರಶಸ್ತಿ ಪಡೆದ ರಿಸರ್ವ್ ಬ್ಯಾಂಕ್
ತಂಡವು 35,000 ರೂ. ನಗದು ಮತ್ತು ಪ್ರಶಸ್ತಿ, ತೃತೀಯ ಸ್ಥಾನ ಪಡೆದ ಗೋಲ್ಡನ್ ಗನರ್ಸ್ ತಂಡವು 15,000 ರೂ. ನಗದು ಬಹುಮಾನವನ್ನು ಪಡೆಯಿತು.