Advertisement

Maharaja Trophy ಕ್ರಿಕೆಟ್‌: ಹುಬ್ಬಳ್ಳಿ-ಮೈಸೂರು ಫೈನಲ್‌ ಫೈಟ್‌

11:24 PM Aug 28, 2023 | Team Udayavani |

ಬೆಂಗಳೂರು: “ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಲೀಗ್‌’ ಪಂದ್ಯಾವಳಿಯ ಫೈನಲ್‌ನಲ್ಲಿ ಹುಬ್ಬಳ್ಳಿ ಟೈಗರ್ -ಮೈಸೂರು ವಾರಿಯರ್ ಮುಖಾಮುಖಿಯಾಗಲಿವೆ. ಮೊದಲ ಸೆಮಿಫೈನಲ್‌ನಲ್ಲಿ ಹುಬ್ಬಳ್ಳಿ 8 ವಿಕೆಟ್‌ಗಳಿಂದ ಶಿವಮೊಗ್ಗ ಲಯನ್ಸ್‌ ತಂಡವನ್ನು ಮಣಿಸಿತು. ದ್ವಿತೀಯ ಸೆಮಿಫೈನಲ್‌ನಲ್ಲಿ ಮೈಸೂರು 36 ರನ್ನುಗಳಿಂದ ಹಾಲಿ ಚಾಂಪಿಯನ್‌ ಗುಲ್ಬರ್ಗ ಮಿಸ್ಟಿಕ್ಸ್‌ಗೆ ಸೋಲುಣಿಸಿತು.

Advertisement

ಶಿವಮೊಗ್ಗ 7 ವಿಕೆಟಿಗೆ ಕೇವಲ 149 ರನ್‌ ಗಳಿಸಿದರೆ, ಹುಬ್ಬಳ್ಳಿ ಬರೀ 14 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 153 ರನ್‌ ಬಾರಿಸಿತು. ಆರಂಭಕಾರ ರೋಹನ್‌ ಕದಂ ಅವರ ಅರ್ಧ ಶತಕ (54) ಹೊರತುಪಡಿಸಿದರೆ ಶಿವಮೊಗ್ಗ ಸರದಿಯಲ್ಲಿ ಯಾರಿಂದಲೂ ದೊಡ್ಡ ಮೊತ್ತ ಕಂಡುಬರಲಿಲ್ಲ. ನಿಹಾಲ್‌ ಉಲ್ಲಾಳ್‌ (7), ವಿನಯ್‌ ಸಾಗರ್‌ (13), ಅಭಿನವ್‌ ಮನೋಹರ್‌ (2) ಇನ್ನಿಂಗ್ಸ್‌ ಆಧರಿಸಲು ವಿಫ‌ಲರಾದರು. ಎಚ್‌.ಎಸ್‌. ಶರತ್‌ 18, ನಾಯಕ ಶ್ರೇಯಸ್‌ ಗೋಪಾಲ್‌ ಮತ್ತು ಪ್ರಣವ್‌ ಭಾಟಿಯ ತಲಾ 16 ರನ್‌ ಹೊಡೆದರು. ಹುಬ್ಬಳ್ಳಿ ಬೌಲಿಂಗ್‌ ಸರದಿಯಲ್ಲಿ ಮಿಂಚಿದವರೆಂದರೆ ಲವಿಶ್‌ ಕೌಶಲ್‌ ಮತ್ತು ಮನ್ವಂತ್‌ ಕುಮಾರ್‌ ಎಲ್‌. ಇಬ್ಬರೂ 2 ವಿಕೆಟ್‌ ಉರುಳಿಸಿದರು.

ಚೇಸಿಂಗ್‌ ವೇಳೆ ಹುಬ್ಬಳ್ಳಿ ಲವ್‌ನೀತ್‌ ಸಿಸೋಡಿಯ (13) ಅವರನ್ನು ಬೇಗನೆ ಕಳೆದುಕೊಂಡಿತು. ಆದರೆ ದ್ವಿತೀಯ ವಿಕೆಟಿಗೆ ಜತೆಗೂಡಿದ ಮೊಹಮ್ಮದ್‌ ತಾಹಾ ಮತ್ತು ಕೃಷ್ಣನ್‌ ಶ್ರೀಜಿತ್‌ 114 ರನ್‌ ಪೇರಿಸಿದರು. ಇಬ್ಬರಿಂದಲೂ ಅರ್ಧ ಶತಕ ದಾಖಲಾಯಿತು. ಶ್ರೀಜಿತ್‌ 39 ಎಸೆತಗಳಿಂದ ಅಜೇಯ 61 ರನ್‌ ಹೊಡೆದರೆ (7 ಬೌಂಡರಿ, 2 ಸಿಕ್ಸರ್‌), ಅತ್ಯಂತ ಆಕ್ರಮಣಕಾರಿಯಾಗಿ ಆಡಿದ ತಾಹಾ 38 ಎಸೆತ ಎದುರಿಸಿ 69 ರನ್‌ ಬಾರಿಸಿದರು. ಇವರ ಬ್ಯಾಟಿಂಗ್‌ ಅಬ್ಬರದ ವೇಳೆ 8 ಸಿಕ್ಸರ್‌ ಸಿಡಿಯಿತು. ಬೌಂಡರಿ ಮಾತ್ರ ಒಂದೇ.

ನಾಯರ್‌ ಶತಕ
ಮೈಸೂರು ವಾರಿಯರ್ 2 ವಿಕೆಟಿಗೆ 248 ರನ್‌ ಪೇರಿಸಿ ಸವಾಲೊಡ್ಡಿತು. ನಾಯಕ ಕರುಣ್‌ ನಾಯರ್‌ 42 ಎಸೆತಗಳಿಂದ ಅಜೇಯ 107 ರನ್‌ ಬಾರಿಸಿದರು (7 ಫೋರ್‌, 9 ಸಿಕ್ಸರ್‌). ಆರ್‌. ಸಮರ್ಥ್ 80 ರನ್‌ ಹೊಡೆದರು. ಜವಾಬಿತ್ತ ಗುಲ್ಬರ್ಗ 8 ವಿಕೆಟಿಗೆ 212 ರನ್‌ ಮಾಡಿತು. ಫೈನಲ್‌ ಪಂದ್ಯ ಮಂಗಳವಾರ ನಡೆಯಲಿದ್ದು, ಸಂಜೆ 5.30ಕ್ಕೆ ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next