Advertisement

ಅಫ್ಘಾನ್ ನಲ್ಲಿ ತಾಲಿಬಾನ್ ಅಟ್ಟಹಾಸ; ಪಾಕ್ ನಲ್ಲಿ ಮಹಾರಾಜ ರಂಜಿತ್ ಸಿಂಗ್ ಪ್ರತಿಮೆ ಧ್ವಂಸ

04:47 PM Aug 17, 2021 | Team Udayavani |

ಲಾಹೋರ್: ತಾಲಿಬಾನ್ ಬಂಡುಕೋರರು ಅಫ್ಘಾನಿಸ್ತಾನ ಆಡಳಿತವನ್ನು ವಶಪಡೆದುಕೊಂಡು ರಣಕೇಕೆ ಹಾಕುತ್ತಿದ್ದ ಬೆನ್ನಲ್ಲೇ ಪಾಕಿಸ್ತಾನದ ಲಾಹೋರ್ ನಲ್ಲಿ ಮಹಾರಾಜ ರಂಜಿತ್ ಸಿಂಗ್ ಪ್ರತಿಮೆಯನ್ನು ಧ್ವಂಸಗೊಳಿಸಿರುವ ಘಟನೆ ಮಂಗಳವಾರ (ಆಗಸ್ಟ್ 17) ನಡೆದಿದೆ.

Advertisement

ಇದನ್ನೂ ಓದಿ:ಮೈಸೂರಿನಲ್ಲಿ ಕ್ಷೇಮವಾಗಿದ್ದರು ಚಿತ್ತ ಮಾತ್ರ ತವರಿನ ಮೇಲಿದೆ: ಅಫ್ಘಾನ್ ವಿದ್ಯಾರ್ಥಿಗಳ ಅಳಲು

ಮಹಾರಾಜ ರಂಜಿತ್ ಸಿಂಗ್ ಭಾರತದಲ್ಲಿ 19ನೇ ಶತಮಾನದ ಸಿಖ್ ಆಡಳಿತಗಾರರಾಗಿದ್ದರು. ಲಾಹೋರ್ ಕೋಟೆಯೊಳಗಿದ್ದ ಸಿಂಗ್ ಅವರ ಪ್ರತಿಮೆಯನ್ನು ತೆಹ್ರೀಕ್ ಎ ಲಬ್ಬಾಯಿಕ್ ಪಾಕಿಸ್ತಾನ(ಟಿಎಲ್ ಪಿ) ಪಕ್ಷದ ಸದಸ್ಯನೊಬ್ಬ ಧ್ವಂಸಗೊಳಿಸಿರುವುದಾಗಿ ವರದಿ ತಿಳಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ, ವ್ಯಕ್ತಿಯೊಬ್ಬ ಪ್ರತಿಮೆಯನ್ನು ಧ್ವಂಸಗೊಳಿಸುತ್ತಿರುವುದು ಸೆರೆಯಾಗಿದೆ.

ಪ್ರತಿಮೆ ಧ್ವಂಸಗೊಳಿಸಿದ ವ್ಯಕ್ತಿಯನ್ನು ರಿಜ್ವಾನ್ ಎಂದು ಗುರುತಿಸಲಾಗಿದೆ ಎಂಬುದಾಗಿ ಮಾಧ್ಯಮದ ವರದಿ ತಿಳಿಸಿದೆ. ಆರೋಪಿಯನ್ನು ಘಟನೆ ನಂತರ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಘಟನೆಯನ್ನು ಖಂಡಿಸುವುದಾಗಿ ಹೇಳಿರುವ ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಫವಾದ್ ಚೌಧರಿ, ಇಂತಹ ಘಟನೆಗಳಿಂದಾಗಿ ದೇಶದ ಗೌರವಕ್ಕೆ ಧಕ್ಕೆ ತರಲಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ವರದಿ ವಿವರಿಸಿದೆ.

Advertisement

ಈ ಹಿಂದೆಯೂ ಎರಡು ಬಾರಿ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿತ್ತು. 2019ರ ಜೂನ್ ನಲ್ಲಿ ಲಾಹೋರ್ ನಲ್ಲಿರುವ ಮೈ ಜಿಂದಾ ಹವೇಲಿಯಲ್ಲಿ ಪ್ರತಿಮೆಯನ್ನು ಅನಾವರಣಗೊಳಿಸಲಾಗಿತ್ತು. ನಂತರ 2019ರ ಆಗಸ್ಟ್ ನಲ್ಲಿ ಹಾಗೂ 2020ರ ಡಿಸೆಂಬರ್ ನಲ್ಲಿ ಈ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿತ್ತು ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next