ಚೆನ್ನೈ: ವಿಜಯ್ ಸೇತುಪತಿ ಅವರ 50ನೇ ಚಿತ್ರ ʼಮಹಾರಾಜʼ ಥಿಯೇಟರ್‌ನಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಂಡ ಬಳಿಕ ಇದೀಗ ಓಟಿಟಿ ರಿಲೀಸ್‌ಗೆ ಸಿದ್ಧವಾಗಿದೆ.
ಜೂ.14 ರಂದು ರಿಲೀಸ್ ಆದ ʼಮಹಾರಾಜʼ ಇತ್ತೀಚೆಗೆ 25 ದಿನಗಳನ್ನು ಪೂರೈಸಿತು. 20 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 100+ ಕೋಟಿ ರೂ.ಗಳಿಸಿದೆ. ಆ ಮೂಲಕ ಸೇತುಪತಿ ಸಿನಿಕೆರಿಯರ್ ನಲ್ಲಿ ದೊಡ್ಡ ಹಿಟ್ ತಂದುಕೊಟ್ಟಿದೆ.
ನಿಥಿಲನ್ ಸ್ವಾಮಿನಾಥನ್ ನಿರ್ದೇಶನದಲ್ಲಿ ಬಂದ ಈ ಚಿತ್ರದ ಕ್ರೈಮ್ ಥ್ರಿಲ್ಲರ್ ಕಥಾಹಂದರವನ್ನು ಒಳಗೊಂಡಿದೆ. ಸೇತುಪತಿ ಅವರ ರಗಡ್ ಅವತಾರವನ್ನು ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ.
ಮನೆ ಕಳ್ಳತನ ಬಳಿಕ ಸೇಡು ತೀರಿಸಿಕೊಳ್ಳಲು ಹೊರಡುವ ಕ್ಷೌರಿಕನೊಬ್ಬ ಹಿಂದೆ ಚಿತ್ರದ ಕಥೆ ಸಾಗುತ್ತದೆ. ಕಾಣೆಯಾದ ʼಲಕ್ಷ್ಮೀʼ ಸುತ್ತ ಸಾಗುವ ಚಿತ್ರವನ್ನು ಥ್ರಿಲ್ಲರ್ ಹಾಗೂ ಕ್ರೈಮ್ ಜಾನರ್ ನಲ್ಲಿ ಕಟ್ಟಿಕೊಡಲಾಗಿದೆ.
ಕಾಲಿವುಡ್ ನಲ್ಲಿ ಭರ್ಜರಿ ಸದ್ದು ಮಾಡಿದ ʼಮಹಾರಾಜʼ ಇದೀಗ ನೆಟ್ ಫ್ಲಿಕ್ಸ್ ನಲ್ಲಿ ರಿಲೀಸ್ ಆಗಲಿದ್ದು, ಆ ಮೂಲಕ ಓಟಿಟಿಗೆ ಎಂಟ್ರಿ ಆಗಲಿದೆ. ಇದೇ ಜು.12 ರಂದು ʼಮಹಾರಾಜʼ ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಸ್ಟ್ರೀಮಿಂಗ್ ಆಗಲಿದೆ.
ಶಿವಕಾರ್ತಿಕೇಯನ್, ರಾಕುಲ್ ಪ್ರೀತ್ ಅಭಿನಯದ ‘ಅಯಾಲನ್’ನ ಯುಎಸ್ ಎ ಬಾಕ್ಸ್ ಆಫೀಸ್ ದಾಖಲೆಯನ್ನು ʼಮಹಾರಾಜʼ ಮೀರಿಸಿದೆ. ಆ ಮೂಲಕ ಈ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ತಮಿಳು ಚಿತ್ರವಾಗಿ ಹೊರಹೊಮ್ಮಿದೆ.
ʼಮಹಾರಾಜʼದಲ್ಲಿ ಸೇತುಪತಿ ಜೊತೆ ಅನುರಾಗ್ ಕಶ್ಯಪ್, ಮಮತಾ ಮೋಹನ್ ದಾಸ್, ಮುನಿಷ್ಕಾಂತ್, ಮಣಿಕಂದನ್ ಮುಂತಾದವರು ನಟಿಸಿದ್ದಾರೆ.
ಮುಂದೆ ಸೇತುಪತಿ ʼವಿಧುತಲೈ-2ʼನಲ್ಲಿ ಕಾಣಿಸಿಕೊಳ್ಳಲಿದ್ದಾರೆ.