ಲಕ್ನೋ/ಹೊಸದಿಲ್ಲಿ: ದೇಶದಲ್ಲಿಯೇ ಅತ್ಯಂತ ಹೆಚ್ಚು ಸಂಸದರನ್ನು (80) ಆರಿಸಿ ಕಳುಹಿಸುವ ಉತ್ತರ ಪ್ರದೇಶದಲ್ಲಿ ಎಸ್‌ಪಿ-ಬಿಎಸ್‌ಪಿ ನಡುವೆ ಮಹಾಮೈತ್ರಿ ಅಂತಿಮ ಹಂತ ತಲುಪಿದೆ. ಸ್ಥಾನಗಳ ಹೊಂದಾಣಿಕೆ ಬಗ್ಗೆ ಬಿಎಸ್‌ಪಿ ನಾಯಕಿ ಮಾಯಾವತಿ ಪರಿಶೀಲನೆ ನಡೆಸಿ ಒಪ್ಪಿಗೆ ಸೂಚಿಸಿದ ಕೂಡಲೇ ಅದನ್ನು ಘೋಷಿಸಲಾಗುತ್ತದೆ ಎಂದು ಬಿಎಸ್‌ಪಿ ಹಿರಿಯ ನಾಯಕರೊಬ್ಬರು ಹೇಳಿಕೊಂಡಿದ್ದಾರೆ. ಕೆಲವೊಂದು ಸ್ಥಾನಗಳ ಬಗ್ಗೆ ಇನ್ನೂ ನಿರ್ಧಾರ ಕೈಗೊಳ್ಳಲಾಗಿಲ್ಲ. ಎಸ್‌ಪಿ ಜತೆಗೆ ಚುನಾವಣಾ ಪೂರ್ವ ಮೈತ್ರಿ ಘೋಷಣೆ ಮಾಡಿದ ಬಳಿಕ ಈ ವಿಚಾರವನ್ನೂ ಪರಿಹರಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಮಾಜಿ ಸಚಿವ ಅಜಿತ್ ಸಿಂಗ್‌ರ ಇಂಡಿಯನ್ ನ್ಯಾಷನಲ್ ಲೋಕದಳ ಮತ್ತು ಅಜಿತ್ ಜೋಗಿ ಅವರ ಜನತಾ ಕಾಂಗ್ರೆಸ್ ಛತ್ತೀಸ್‌ಗಡ ಈ ಮೈತ್ರಿಕೂಟದಲ್ಲಿ ಸೇರಿಕೊಳ್ಳಲಿವೆ. ಈ ಮೂಲಕ ಮಾಯಾವತಿ ಅವರನ್ನೇ ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಘೋಷಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, ತಮಿಳುನಾಡಿನ ಬಿಜೆಪಿ ಕಾರ್ಯಕರ್ತನ ಪ್ರಶ್ನೆಯನ್ನು ಮಧ್ಯದಲ್ಲೇ ತಡೆದ ಪ್ರಧಾನಿ ಮೋದಿ ಕ್ರಮಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ವಣಕ್ಕಂ ಪುದುಶೆÏàರಿ ಎಂದು ಪ್ರಧಾನಿ ಹೇಳಿರುವುದು ಹಲವು ಸಮಸ್ಯೆಗಳಿಂದ ಬಳಲುತ್ತಿರುವ ಮಧ್ಯಮ ವರ್ಗದ ಕುಟುಂಬಗಳಿಗೆ ಪ್ರಧಾನಿಯವರ ಉತ್ತರವಾಗಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡುವುದು ಬಿಡಿ, ಬೂತ್ ಮಟ್ಟದ ಕಾರ್ಯಕರ್ತನ ಪ್ರಶ್ನೆಯನ್ನೂ ಎದುರಿಸಲು ಮೋದಿಗೆ ಆಗುತ್ತಿಲ್ಲ’ ಎಂದು ಬರೆದುಕೊಂಡಿದ್ದಾರೆ. ಪ್ರಶ್ನೆಯನ್ನು ಮಧ್ಯದಲ್ಲೇ ಛೇದಿಸುವುದು ಒಳ್ಳೆಯ ಐಡಿಯಾ ಎಂದು ಲೇವಡಿ ಮಾಡಿದ್ದಾರೆ ರಾಹುಲ್.