Advertisement

Venur; ಸಾಮಾಜಿಕ ಏಕತೆ ಸಾರಿದ ಪರಂಪರೆ ಜೈನರದು: ಸಂಸದ ನಳಿನ್‌ ಕುಮಾರ್‌ ಕಟೀಲು

12:42 AM Feb 26, 2024 | Team Udayavani |

ಬೆಳ್ತಂಗಡಿ: ಅಧಿಕಾರ ಶ್ರೀಮಂತಿಕೆಯಿಂದ ಹೊರತಾದ ಜೀವನ ಶ್ರೇಷ್ಠ ಕ್ಷಣಗಳಿವೆ ಎಂಬುದಕ್ಕೆ ಮಹಾಚಕ್ರವರ್ತಿ ಬಾಹುಬಲಿಯ ತ್ಯಾಗವೇ ಸಾಕ್ಷಿ. ದೈವಾರಾಧನೆ ಮೂಲಕ ಸಾಮಾಜಿಕ ಏಕತೆಯನ್ನು ಸಾರಿದ ಸಮುದಾಯ ಜೈನರದು. ಎಲ್ಲ ಕ್ಷೇತ್ರದಲ್ಲು ಜಿಲ್ಲೆಗೆ ಅತೀ ಹೆಚ್ಚಿನ ಕೊಡುಗೆಯನ್ನು ಜೈನಸಮುದಾಯ ನೀಡಿದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

ವೇಣೂರಿನ ಭಗವಾನ್‌ ಶ್ರೀ ಬಾಹುಬಲಿ ಸ್ವಾಮಿ ಮಸ್ತಾಕಾಭಿಷೇಕದ ನಾಲ್ಕನೇ ದಿನವಾದ ರವಿವಾರ ಭರತೇಶ ಸಭಾಭವನದಲ್ಲಿ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಲೋಕಸಭಾ ನಿಧಿಯಿಂದ ಕ್ಷೇತ್ರದ ಅಭಿವೃದ್ಧಿಗೆ 20 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಈ ಮೂಲಕ ಬಾಹುಬಲಿಯ ಸಂದೇಶವನ್ನು ರಾಜಕೀಯ ಜೀವನಕ್ಕೂ ಅಳವಡಿಸುವ ಕಾರ್ಯವಾಗಲಿ ಎಂದು ಆಶಿಯ ವ್ಯಕ್ತಪಡಿಸಿದರು.

ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ಮಾತನಾಡಿ, ಜಗತ್ತಿಗೆ ಅಹಿಂಸೆಯ ಸಂದೇಶ ಸಾರಿದ ಶ್ರೇಷ್ಠ ಧರ್ಮ ಜೈನ ಧರ್ಮ. ಅಲ್ಪಸಂಖ್ಯಾಕರಾದರೂ ಅತ್ಯಂತ ಅಧಿಕ ಪ್ರಮಾಣದಲ್ಲಿ ತೆರಿಗೆ ಪಾವತಿಸುವ ಮೂಲಕ ಜೈನರು ಕಾಯಕ ಜೀವಿ ಗಳು ಎಂದು ತೋರಿಸಿ ಕೊಟ್ಟಿದ್ದಾರೆ ಎಂದು ಹೇಳಿದರು.

ಸಿ.ಡಿ. ಬಿಡುಗಡೆ
ಸ್ವರ್ಣಲತಾ ಪ್ರಭಾತ್‌ ನೆಲ್ಲಿಕಾರು ಬರೆದಿರುವ ರಾಜೇಶ್‌ ಭಟ್‌ ಸಂಗೀತ ಸಂಯೋಜನೆಯಲ್ಲಿ ವೃತಿಕ್‌ ಜೈನ್‌ ಧ್ವನಿಯಲ್ಲಿ ಮೂಡಿ ಬಂದ “ವೇಣುಪುರದಿ ನೆಲೆನಿಂತ ಭುಜಬಲೀಶನೇ’ ಎಂಬ ಹಾಡಿನ ಸಿಡಿ ಬಿಡುಗಡೆ ಮಾಡಲಾಯಿತು.

Advertisement

ವಿಶ್ರಾಂತ ಪ್ರಾಂಶುಪಾಲ ತುಮಕೂರಿನ ಡಾ| ಎಸ್‌.ಪಿ. ಪದ್ಮಪ್ರಸಾದ್‌ ವಿಶೇಷ ಉಪನ್ಯಾಸ ನೀಡಿದರು.

ಶಾಸಕರಾದ ಹರೀಶ್‌ ಪೂಂಜ, ಕೆ. ಪ್ರತಾಪಸಿಂಹ ನಾಯಕ್‌, ಕೆ. ಹರೀಶ್‌ ಕುಮಾರ್‌, ಮಂಜುನಾಥ ಭಂಡಾರಿ, ಮಹಾಮಸ್ತಕಾಭಿಷೇಕ ಸಮಿತಿ ಕಾರ್ಯಾಧ್ಯಕ್ಷ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್‌ ಅಜಿಲ, ಪ್ರ.ಕಾರ್ಯದರ್ಶಿ ವಿ. ಪ್ರವೀಣ್‌ ಕುಮಾರ್‌ ಇಂದ್ರ, ಕೋಶಾಧಿಕಾರಿ ಜಯರಾಜ್‌ ಕಂಬಳಿ, ನೋಡೆಲ್‌ ಅಧಿಕಾರಿ ಮಾಣಿಕ್ಯ ಜೈನ್‌, ಸೇವಾಕರ್ತರಾದ ಸುಲೋಚನಾ ಉಪಸ್ಥಿತರಿದ್ದರು.

ದಿನದ ಸೇವಾಕರ್ತರಾದ ಪೆರಿಂಜೆ ಜೀವಂಧರ್‌ಕುಮಾರ್‌ ಸ್ವಾಗತಿಸಿದರು. ಶಿಕ್ಷಕ ನವೀನ್‌ ಕುಮಾರ್‌ ವಂದಿಸಿದರು. ಪ್ರಾಂಶುಪಾಲ ಡಾ| ಪ್ರಭಾತ್‌ ಬಲ್ನಾಡ್‌ ನಿರೂಪಿಸಿದರು.

ಯುಗಳ ಮುನಿಗಳ ದೀಕ್ಷಾ ಮಹೋತ್ಸವ ರಜತ ಸಂಭ್ರಮ
ರವಿವಾರ ಯುಗಳ ಮುನಿಶ್ರೀಗಳಾದ ಪರಮಪೂಜ್ಯ 108 ಶ್ರೀ ಅಮೋಘಕೀರ್ತಿ ಹಾಗೂ ಪರಮಪೂಜ್ಯ ಅಮರಕೀರ್ತಿ ಮಹಾರಾಜರ ದೀಕ್ಷಾ ಮಹೋತ್ಸವ ರಜತ ಸಂಭ್ರಮದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದು ಬೆಳಗ್ಗೆಯಿಂದಲೇ ಬಾಹುಬಲಿ ಸ್ವಾಮಿಗೆ ಮಜ್ಜನ ನೆರವೇರಿತು.ಬಳಿಕ ಮಂಗಲ ಪ್ರವಚನ ನೀಡಿದ ಅಮೋಘಕೀರ್ತಿ ಮುನಿ ಮಹಾರಾಜರು, ಜೈನರು ಅಲ್ಪಸಂಖ್ಯಾಕರಾಗಿದ್ದು ದೇಶದಲ್ಲಿ ಕೇವಲ 500 ದಿಗಂಬರ ಮುನಿಗಳಿದ್ದಾರೆ; ಅವರಲ್ಲಿ 400 ಮಂದಿ ಬಾಲಬ್ರಹ್ಮಚಾರಿಗಳು. ಅನ್ಯಧರ್ಮೀಯರೇ ಹೆಚ್ಚಾಗಿರುವ ಪ್ರದೇಶದಲ್ಲಿ ಇಂದು ವಿಹಾರ ಮಾಡುವುದು ಕಷ್ಟಸಾಧ್ಯವಾಗಿದೆ. ಮುನಿದೀಕ್ಷೆ ಪಡೆಯಲು ನಂಬಿಕೆ, ಆತ್ಮವಿಶ್ವಾಸ, ಸಾಹಸ ಮತ್ತು ದೃಢಸಂಕಲ್ಪ ಬೇಕಾಗಿದೆ. ಹಾಗಾಗಿ ಮುನಿಗಳ ಬಗ್ಗೆ ಎಂದೂ ಅವಹೇಳನ ಮಾಡಬಾರದು ಎಂದರು. ಈ ವರ್ಷ ಪುಣೆಯಲ್ಲಿ ಚಾತುರ್ಮಾಸ ವ್ರತಾಚರಣೆ ಮಾಡುವುದಾಗಿ ಪ್ರಕಟಿಸಿದರು.

ಪೂಜ್ಯ ಅಮರಕೀರ್ತಿ ಮುನಿಮಹಾರಾಜರು ಆಶೀರ್ವಚನ ನೀಡಿದರು.ಮುನಿಗಳಿಗೆ ಪಿಂಛಿದಾನ ಮತ್ತು ಶಾಸ್ತ್ರದಾನ ಮಾಡಿ ಗೌರವ ಅರ್ಪಿಸಲಾಯಿತು. ಮೂಡುಬಿದಿರೆ ಚಾರುಕೀರ್ತಿ ಭಟ್ಟಾರಕರ ಮಹಾಸ್ವಾಮೀಜಿ, ಮುಕ್ತಿಶ್ರೀ ಮಾತಾಜಿ, ದಿವ್ಯಶ್ರೀ ಮಾತಾಜಿ ಉಪಸ್ಥಿತರಿದ್ದರು.

ತಿಂಗಳ ಬೆಳಕಲಿ ತ್ಯಾಗಿಗೆ
ಕ್ಷೀರಾಭಿಷೇಕ, ಕಲ್ಕಚೂರ್ಣ ಸೋಕಿ ದಾಗ ಬೆಳೊ°ರೆಯ ಹಾಲ್ಗಡಲಲ್ಲಿ ಬಾಹುಬಲಿ ಮಿಂದೆದ್ದ. ದಿನದ
ಸೇವಾಕರ್ತರಾಗಿರುವ ಪೆರಿಂಜೆಗುತ್ತು ಶ್ರೀ ಜೀವಂಧರ ಕುಮಾರ್‌ ಮತ್ತು ಪತ್ನಿ ಸುಲೋಚನಾ ಹಾಗೂ ಮಕ್ಕಳಾದ ವಿಕಾಸ್‌ ಜೈನ್‌, ರಮ್ಯಾ ವಿಕಾಸ್‌ ಮತ್ತು ವಿಶ್ವಾಸ್‌ ಜೈನ್‌, ಶುಭರೇಖಾ ವಿಶ್ವಾಸ್‌ ಮತ್ತು ಮೊಮ್ಮಕ್ಕಳ ನೇತೃತ್ವದಲ್ಲಿ 108 ಕಲಷಾಭಿಷೇಕ, ಗಂಧ, ಚಂದನ, ಇಕ್ಷುರಸ, ಕ್ಷೀರ, ಚಂದನ, ಕೇಸರಿ ಸಹಿತ ಇತರ ದ್ರವ್ಯಗಳಿಂದ ಬಾಹುಬಲಿಗೆ ಮಹಾಮಸ್ತಕಾಭಿಷೇಕ, ಮಹಾ ಪೂಜೆ ನೆರವೇರಿಸಿದರು.ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಭೇಟಿ ನೀಡಿದರು.

ಇಂದಿನ ಕಾರ್ಯಕ್ರಮ
ಯುಗಳ ಮುನಿಶ್ರೀಗಳಾದ ಅಮೋಘಕೀರ್ತಿ ಹಾಗೂ ಅಮರಕೀರ್ತಿ ಮಹಾರಾಜರು, ಮೂಡುಬಿದಿರೆ ಡಾ| ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಮಹಾಸ್ವಾಮೀಜಿ, ಕನಕಗಿರಿ ಜೈನ ಮಠದ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಮಹಾಸ್ವಾಮಿಜಿ, ಕಂಬದಹಳ್ಳಿ ಜೈನ ಮಠದ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಅವರ ಪಾವನ ಸಾನಿಧ್ಯದಲ್ಲಿ ಫೆ. 26ರಂದು ದಿನದ ಸೇವಾಕರ್ತರಾದ ಮೂಡು ಬಿದಿರೆ ಕಲ್ಲಬೆಟ್ಟು ಎಕ್ಸಲೆಂಟ್‌ ವಿದ್ಯಾಸಂಸ್ಥೆಯ ಯುವರಾಜ ಜೈನ್‌ ಮತ್ತು ರಶ್ಮಿತಾ ಜೈನ್‌ ಹಾಗೂ ಕುಟುಂಬಸ್ಥರಿಂದ ನಿತ್ಯ ವಿಧಿ ಸಹಿತ ಬೃಹತ್‌ ಯಾಗ ಮಂಡಲ ಯಂತ್ರಾರಾಧನಾ ವಿಧಾನ, ಮಂಟಪ ಪ್ರತಿಷ್ಠೆ, ಅಗ್ರೋದಕ ಮೆರವಣಿಗೆ, ಸಂಜೆ ಜಲಯಾತ್ರಾ ಮಹೋತ್ಸವ ಇತ್ಯಾದಿ ನಡೆದು ಬಳಿಕ ಬಾಹುಬಲಿ ಸ್ವಾಮಿಗೆ 216 ಕಲಶಗಳಿಂದ ಮಹಾಮಸ್ತಕಾಭಿಷೇಕ, ಮಹಾಪೂಜೆ ಜರಗಲಿದೆ.

ಮೈಸೂರು ಒಡೆಯರ್‌ ಭಾಗಿ
ಅಪರಾಹ್ನ 3ಕ್ಕೆ ಮೈಸೂರು ಮಹಾಸಂಸ್ಥಾನದ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್‌ ಮೂಡುಬಿದಿರೆ, ಶಾಸಕ ಉಮಾನಾಥ ಕೋಟ್ಯಾನ್‌, ವಿ.ಪ. ಸದಸ್ಯ ಭೋಜೇಗೌಡ, ಬೆಂಗಳೂರಿನ ಚೀಫ್‌ ಪೋಸ್ಟ್ ಮಾಸ್ಟರ್‌ ಜನರಲ್‌ ಎಸ್‌. ರಾಜೇಂದ್ರ ಕುಮಾರ್‌, ಜಿಲ್ಲಾ ಪೊಲೀಸ್‌ ಅಧೀಕ್ಷಕ ಸಿ.ಬಿ. ರಿಷ್ಯಂತ್‌, ಸೇವಾಕರ್ತರಾದ ಯುವರಾಜ್‌ ಜೈನ, ರಶ್ಮಿತಾ ಜೈನ್‌ ಭಾಗವಹಿಸಲಿದ್ದಾರೆ. ಜಮಖಂಡಿಯ ನಿವೃತ್ತ ಪ್ರಾಧ್ಯಾಪಕ ಡಾ| ಬಿ.ಪಿ. ನ್ಯಾಮಗೌಡ ಜೈನ ಉಪನ್ಯಾಸ ನೀಡಲಿದ್ದಾರೆ.

ಮುಖ್ಯ ವೇದಿಕೆಯಲ್ಲಿ ಸಂಜೆ 6.30ರಿಂದ ಮೂಡುಬಿದಿರೆಯ ಎಕ್ಸಲೆಂಟ್‌ ವಿದ್ಯಾಸಂಸ್ಥೆಯ ಕಲಾವಿದರಿಂದ ಭಗವಾನ್‌ ಶ್ರೀ 1008 ಶಾಂತಿನಾಥ ಭಗವಾನರ ಗರ್ಭಾವತರಣ ಕಲ್ಯಾಣ ಧಾರ್ಮಿಕ ವಿಧಿ ನಡೆಯಲಿದೆ. ರಾತ್ರಿ 8.30ರಿಂದ ಜ್ಞಾನ ಐತಾಳ ನೇತೃತ್ವದಲ್ಲಿ ಹೆಜ್ಜೆನಾದ ನೃತ್ಯ-ಸಂಗೀತ ವೈವಿಧ್ಯ, ವಸ್ತು ಪ್ರದರ್ಶನ ವೇದಿಕೆಯಲ್ಲಿ ಭರತನಾಟ್ಯ, ಭಕ್ತಿ-ಭಾವ-ಸಂಗೀತ ಇತ್ಯಾದಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next