Advertisement

ನಾಡಿದ್ದು ಬಾಹುಬಲಿಗೆ ಮಾಲಾ ಮೆರವಣಿಗೆ

02:07 PM Feb 14, 2018 | Team Udayavani |

ಶ್ರವಣಬೆಳಗೊಳ: ಮಹಾಮಸ್ತಕಾಭಿಷೇಕ ಮಹೋತ್ಸವದ ಅಂಗವಾಗಿ ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ವಿಂಧ್ಯಗಿರಿ ಸುತ್ತ ವಿವಿಧ ಕಲಾ ತಂಡಗಳು, ಸ್ತಬ್ಧ ಚಿತ್ರಗಳೊಂದಿಗೆ ಬೃಹತ್‌ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರವಣಬೆಳಗೊಳದ ಜೈನಮಠದ ಪೀಠಾಧ್ಯಕ್ಷ ಶ್ರೀ
ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

Advertisement

ಶ್ರವಣಬೆಳಗೊಳದ ಆದಿಕವಿಪಂಪ ಗ್ರಂಥಾಲಯದ ಕಟ್ಟಡದಲ್ಲಿರುವ ಮಾಧ್ಯಮ ಕೇಂದ್ರದಲ್ಲಿ ಮಹಾಮಸ್ತಕಾಭಿಷೇಕ ಮಹೋತ್ಸವ ಆಚರಣೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಂಧ್ಯಗಿರಿ ಬೆಟ್ಟದ ಸುತ್ತಲೂ 5 ಕಿ.ಮೀ. ವ್ಯಾಪ್ತಿಯಲ್ಲಿ ಬಾಹುಬಲಿ ಸ್ವಾಮಿಗೆ ಮಾಲೆ ಹಾಕುವ ಮಾದರಿಯಲ್ಲಿ ಮೆರವಣಿಯ ಆಯೋಜನೆ ಮಾಡಲಾಗುವುದು ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ 200ಕ್ಕೂ ಹೆಚ್ಚು ಕಲಾ ತಂಡಗಳ ವಾದ್ಯಮೇಳ, ಸ್ತಬ್ಧ ಚಿತ್ರಗಳ ಮೆರವಣಿಗೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಫೆ.7 ರಿಂದ ನಡೆಯುತ್ತಿರುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಗಮನ ಸೆಳೆಯುತ್ತಿವೆ ಎಂದರು. ಮೆರವಣಿಗೆಯಲ್ಲಿ ಸ್ತಬ್ಧ ಚಿತ್ರಗಳು, 24 ತೀರ್ಥಂಕರರ ಪಲ್ಲಕ್ಕಿ ಉತ್ಸವಗಳು, 6 ಶಾಸ್ತ್ರಗ್ರಂಥಗಳು,
ಧರ್ಮ ಧ್ವಜ ಹಾಗೂ ಕಲಸವನ್ನೊತ್ತ ಶ್ರಾವಕ ಶ್ರಾವಕಿಯರು ಸೇರಿ 8 ರಥ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಿಂದಲೂ ಬೆಳ್ಳಿ ಪಲ್ಲಕ್ಕಿ ರಥಗಳು ಆಗಮಿಸಲಿದ್ದು ವಿವಿಧ ಕಲಾ ತಂಡಗಳು ಸೇರಿ 200ಕ್ಕೂ ಹೆಚ್ಚು ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ.

ಈ ಬಾರಿ ರಾಜ್ಯಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿಂದ ಹಾಗೂ ಕರ್ನಾಟಕದ ಹಲವಾರು ಗ್ರಾಮಗಳಿಂದ ಧವಸ ಧಾನ್ಯಗಳು ಹೆಚ್ಚಿನ ಪ್ರಮಾಣದಲ್ಲಿ ದಾನಿಗಳಿಂದ ಬರುತ್ತಿದೆ ಎಂದು ಶ್ರೀಗಳು ಹೇಳಿದರು.

ಶಿವನಿಗೆ ಜೈನಮಠದಿಂದ ಪೂಜೆ
ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೂ ಮೊದಲು ಮಠದ ಪದ್ಧತಿಯಂತೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಪಟ್ಟಣದ ಅಕ್ಕನ ಬಸದಿ ಪಕ್ಕದಲ್ಲಿರುವ ಶಿವನ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಶ್ರವಣಬೆಳಗೊಳದ ಶೈವ ಸಮುದಾಯದ ಅಕ್ಕತಂಗಿಯರಿದ್ದು, ಅಕ್ಕ ಜೈನ ಮತ ಅವಲಂಬಿಸುತ್ತಾರೆ. ತಂಗಿ ಶೈವ ಮತದಲ್ಲಿಯೇ ಉಳಿಯುತ್ತಾರೆ. ಬಳಿಕ ತಂಗಿಗಾಗಿ ಅಕ್ಕ ಶಿವ ದೇವಾಲಯ ಕಟ್ಟಿಸಿದರೆ ತಂಗಿಯು ಅಕ್ಕನಿಗಾಗಿ ಶಿವನ ದೇಗುಲದ ಪಕ್ಕದಲ್ಲಿಯೇ ಬಸದಿ ಕಟ್ಟಿಸಿಕೊಡುತ್ತಾರೆ.

Advertisement

ಶ್ರೀಮಠವು ಅಕ್ಕನ ಬಸದಿ ಹಾಗೂ ಶಿವನ ದೇವಾಲಯ ಎರಡನ್ನೂ ನಿರ್ವಹಣೆ ಮಾಡುತ್ತಿದ್ದು, ಪ್ರತಿ ಮಹಾಮಸ್ತಕಾಭಿಷೇಕ ಆರಂಭಕ್ಕೂ ಮುನ್ನ ಶಿವನಿಗೆ ಪೂಜೆ ಸಲ್ಲಿಸುವುದನ್ನು ಶ್ರೀಮಠ ಪಾಲಿಸಿಕೊಂಡು ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next