ಕೊಪ್ಪಳ: ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಏನೆಲ್ಲಾ ಕ್ರಮ ಕೈಗೊಂಡಿದ್ದರೂ ಮಹಾರಾಷ್ಟ್ರದಿಂದ ಆಗಮಿಸಿದ ಜನರಲ್ಲಿ ಸೋಂಕು ಕಾಣಿಸಿಕೊಂಡು ಜನರನ್ನು ಆತಂಕಕ್ಕೀಡಾಗುವಂತೆ ಮಾಡಿತು. ಪ್ರಸ್ತುತ ಮಹಾರಾಷ್ಟ್ರದಲ್ಲಿ 895 ಜನರ ಪೈಕಿ, ಈ ವರೆಗೂ 511 ಜನರು ಜಿಲ್ಲೆಗೆ ರೈಲು, ಬಸ್‌ಗಳಲ್ಲಿ ಆಗಮಿಸಿದ್ದು, ಇನ್ನೂ 384 ಜನರದ್ದೇ ಜಿಲ್ಲಾಡಳಿತಕ್ಕೆ ದೊಡ್ಡ ಟೆನ್ಷನ್ ಆಗಿದೆ.
ಅವರು ಏಲ್ಲಿದ್ದಾರೋ? ಬಂದಿದ್ದಾರೋ ಇಲ್ಲವೋ? ಮನೆ ಸೇರಿದ್ದಾರೋ ಎನ್ನುವುದು ತಿಳಿಯುತ್ತಿಲ್ಲ. ಹಾಗಾಗಿ ಜಿಲ್ಲಾಡಳಿತ ಅವರ ಪತ್ತೆಗಾಗಿ ಸಿದ್ಧತೆ ನಡೆಸಿದೆ.
ರಾಜ್ಯದಲ್ಲಿ ಲಾಕ್‌ಡೌನ್ ಮುಕ್ತಾಯವಾದ ಬಳಿಕ ಮಹಾರಾಷ್ಟ್ರದ ರಾಜ್ಯದಿಂದಲೇ ಹೆಚ್ಚು ಜನರು ಕರ್ನಾಟಕಕ್ಕೆ ಆಗಮಿಸಿದ್ದಾರೆ. ಅವರಿಂದಲೇ ರಾಜ್ಯದಲ್ಲಿನ ಸೋಂಕಿತರ ಪ್ರಮಾಣವೂ ಅಧಿಕವಾಗಿ ಏರಿಕೆಯಾಗುತ್ತಿದೆ. ಇನ್ನೂ ಜಿಲ್ಲೆಯಲ್ಲೂ ಅದೇ ಟೆನ್ಷನ್ ಶುರುವಾಗಿದೆ. ಮೊದಲೆಲ್ಲ ಅನ್ಯ ರಾಜ್ಯ, ಜಿಲ್ಲೆಯಿಂದ ಬಂದವರನ್ನು ಜಿಲ್ಲೆಗೆ ಕರೆದುಕೊಂಡಿದ್ದು ಈಗ ಹೈರಿಸ್ಕ್ ಏರಿಯಾದಿಂದ ಬರುವ ಜನರಿಗೆ ನಿರ್ಬಂಧ ಹಾಕುತ್ತಿದೆ.
ಕೊಪ್ಪಳ ಜಿಲ್ಲೆಯ ಜನರು ದುಡಿಮೆ ಅರಸಿ ಅನ್ಯ ರಾಜ್ಯಗಳಿಗೆ ಅಧಿಕ ಪ್ರಮಾಣದಲ್ಲಿ ತೆರಳಿದ್ದಾರೆ. ಅದರಲ್ಲೂ ಮಹಾರಾಷ್ಟ್ರ ಭಾಗಕ್ಕೂ ಹೆಚ್ಚು ಸಂಖ್ಯೆಯ ಜನರು ತೆರಳಿದ್ದರು. ಲಾಕ್‌ಡೌನ್ ಘೋಷಣೆಯಾದ ಬಳಿಕ ಜನರು ಅಲ್ಲಿಯೇ ಸಿಲುಕಿ ನಮ್ಮನ್ನ ಜಿಲ್ಲೆಗೆ ಕರೆಯಿಸಿಕೊಳ್ಳಿ, ನಮಗೆ ನೆರವಾಗಿ ಎಂದು ಸೋಸಿಯಲ್ ಮೀಡಿಯಾ ಮೂಲಕ ಜಿಲ್ಲಾಡಳಿತದ ಗಮನ ಸೆಳೆದಿದ್ದರು. ಸರ್ಕಾರ ಸೇವಾ ಸಿಂಧು ಮೂಲಕ ಪಾಸ್ ಪಡೆದು ಜಿಲ್ಲೆಗೆ ಆಗಮಿಸಲು ಅವಕಾಶವನ್ನೂ ಕಲ್ಪಿಸಿ ಕೊಟ್ಟಿತ್ತು. ಈ ಪೈಕಿ ಅಲ್ಲಿ ಸಿಲುಕಿದ್ದ 895 ಜನರು ತಮ್ಮ ಕುಟುಂಬದ ಮಾಹಿತಿಯನ್ನು ಸೇವಾಸಿಂಧುನಲ್ಲಿ ಅರ್ಜಿಯಲ್ಲಿ ಭರ್ತಿ ಮಾಡಿದ್ದರು. ಕೆಲವರು ಅನ್ಯ ಮಾರ್ಗಗಳ ಮೂಲಕವೂ ಪ್ರಯಾಣ ಮಾಡಿದ್ದರು.
ಮಹಾದಿಂದ 511 ಜನ ಆಗಮನ: ಮಹಾರಾಷ್ಟ್ರದಿಂದ ಜಿಲ್ಲೆಗೆ ಈ ವರೆಗು 511 ಜನರು ರೈಲು, ಬಸ್‌ನಲ್ಲಿ, ಸೇವಾ ಸಿಂಧು ಪಾಸ್ ಪಡೆದು ಜಿಲ್ಲೆಗೆ ಬಂದಿದ್ದಾರೆ. ಅವರನ್ನು ಕ್ವಾರೆಂಟೈನ್ ನಡೆಸಿದೆ. ಆದರೆ ಲಾಕ್‌ಡೌನ್ ತೆರವಾದ ಬಳಿಕ 384 ಜನರು ಎಲ್ಲಿದ್ದಾರೆ ಎನ್ನುವುದು ಜಿಲ್ಲಾಡಳಿತಕ್ಕೆ ಮಾಹಿತಿ ಗೊತ್ತಾಗುತ್ತಿಲ್ಲ. ಸೇವಾ ಸಿಂಧು ಅರ್ಜಿಗಳು ರಾಜ್ಯ ನೋಡಲ್ ಆಫಿಸರ್ ಲಾಗಿನ್‌ನಲ್ಲಿ ಇರುವುದರಿಂದ ಪೂರ್ಣ ಮಾಹಿತಿಯೂ ದೊರೆಯುವುದಿಲ್ಲ. ಹೀಗಾಗಿ ಜಿಲ್ಲಾಡಳಿತಕ್ಕೆ ದೊಡ್ಡ ಸಮಸ್ಯೆಯಾಗುತ್ತಿದೆ. ಅವರು ಜಿಲ್ಲೆಗೆ ಕಳ್ಳದಾರಿಯ ಮೂಲಕ ಆಗಮಿಸಿ ತಮ್ಮ ಮನೆ
ಸೇರಿದ್ದಾರೋ? ಅಥವಾ ಇನ್ನೂ ಅಲ್ಲಿಯೇ ಉಳಿದಿದ್ದಾರೋ ಎನ್ನುವುದು ಜಿಲ್ಲಾಡಳಿತಕ್ಕೆ ಸ್ಪಷ್ಟತೆ ತಿಳಿಯುತ್ತಿಲ್ಲ.
ನೊಂದಾಯಿಸಿಕೊಂಡ ಜನರ ಪತ್ತೆಕಾರ್ಯ: ಸೇವಾಸಿಂಧುವಿನಲ್ಲಿ ನೋಂದಣಿ ಮಾಡಿಕೊಂಡ ಒಬ್ಬೊಬ್ಬರ ಅರ್ಜಿಯನ್ನು ಪರಿಶೀಲನೆ ಮಾಡಿ, ದಾಖಲೆ ತೆಗೆದು ಅವರು ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಕ್ವಾರೆಂಟೈನ್ ಮುಗಿದಿದೆಯೇ ಎನ್ನುವ ಶೋಧ ಕಾರ್ಯಕ್ಕೆ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಜಿಲ್ಲೆಗೆ ಆಗಮಿಸಿದವರನ್ನು ಬಿಟ್ಟು ಇನ್ನುಳಿದ 384 ಜನರದ್ದೆ ದೊಡ್ಡ ಟೆನ್ಷನ್ ಆಗಿದೆ. ಕಳ್ಳದಾರಿಯಲ್ಲಿ ಊರು ಸೇರಿದರೆ ಪತ್ತೆ ಮಾಡುವುದು ತುಂಬ ಕಷ್ಟವಾಗಲಿದೆ. ಒಂದು ವೇಳೆ ಬಸ್, ರೈಲಿನ ಮೂಲಕ ಜಿಲ್ಲೆಗೆ ಆಗಮಿಸಿದರೆ ನಮಗೆ ಆಯಾ ಜಿಲ್ಲಾಧಿಕಾರಿಗಳಿಂದ ಮಾಹಿತಿ ರವಾನೆಯಾಗಲಿದೆ. ಆಗ ಅವರನ್ನು ಕ್ವಾರೆಂಟೈನ್ ಮಾಡಲು ಸುಲಭವಾಗಲಿದೆ. ಕಳ್ಳ ದಾರಿ ಹಿಡಿದರೆ ಪತ್ತೆ ಕಾರ್ಯ ಕಷ್ಟದ ಕೆಲಸ ಎನ್ನುತ್ತಿದೆ ಜಿಲ್ಲಾಡಳಿತ.
ಯಲಬುರ್ಗಾದ 127 ಜನ ಇದ್ದಾರೆ: ಇನ್ನೂ ಯಲಬುರ್ಗಾ ತಾಲೂಕಿನಲ್ಲಿ 127 ಜನರು ಮಹಾರಾಷ್ಟ್ರದಲ್ಲಿ ಸಿಲುಕಿಕೊಂಡಿದ್ದಾರೆ. ವಿವಿಧ ಗ್ರಾಮಗಳ ಮುಖಂಡರು ಶಾಸಕ ಹಾಲಪ್ಪ ಆಚಾರ್ ಮೂಲಕ ಜಿಲ್ಲಾಡಳಿತದ ಗಮನಕ್ಕೂ ತಂದಿದ್ದಾರೆ. ಜಿಲ್ಲಾಡಳಿತ ಮಾತ್ರ ಅವರನ್ನು ವಾಪಾಸ್ ಕರೆಯಿಸಿಕೊಳ್ಳುವ ಪ್ರಯತ್ನ ನಡೆಸಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.
ಮಹಾರಾಷ್ಟ್ರದಿಂದ 895 ಜನರ ಪೈಕಿ, 511 ಜನರು ಜಿಲ್ಲೆಗೆ ಆಗಮಿಸಿದ್ದಾರೆ. ಇನ್ನುಳಿದವರು ಎಲ್ಲಿದ್ದಾರೆ ಎನ್ನುವ ಮಾಹಿತಿ ನಮಗೆ ತಿಳಿಯುತ್ತಿಲ್ಲ. ಅವರು ಊರು ಸೇರಿದ್ದಾರೋ ಅಥವಾ ಅಲ್ಲಿಯೇ ಇದ್ದಾರೋ ಎನ್ನುವುದನ್ನು ಪತ್ತೆ ಮಾಡಬೇಕಿದೆ. ಸೇವಾಸಿಂಧುವಿನಲ್ಲಿ ಅವರು ಸಲ್ಲಿಸಿದ ಒಂದೊಂದೆ ಅರ್ಜಿಯನ್ನು ಪರಿಶೀಲನೆ ಮಾಡಿ ಅರ್ಜಿದಾರರನ್ನು ಸಂಪರ್ಕಿಸಿ ಮಾಹಿತಿ ಪಡೆಯುವ ಕಾರ್ಯ ಆರಂಭಿಸುತ್ತಿದ್ದೇವೆ.
ಸುನೀಲ್ ಕುಮಾರ, ಕೊಪ್ಪಳ ಜಿಲ್ಲಾಧಿಕಾರಿ
ದತ್ತು ಕಮ್ಮಾರ