Advertisement
ಹೀಗಿರುವಾಗಲೇ ಮಹಾಲಿಂಗಪುರ ಪಟ್ಟಣದಲ್ಲಿ ಮತ್ತೊಂದು ಗರ್ಭಪಾತ ಪ್ರಕರಣ ಬೆಳಕಿಗೆ ಬಂದು ಮೊದಲಿನಿಂದ ರುಚಿಕಟ್ಟಾದ ಬೆಲ್ಲಕ್ಕೆ ಹೆಸರುವಾಸಿಯಾದ ಮಹಾಲಿಂಗಪುರ ಈಗ ಅಕ್ರಮ ಗರ್ಭಪಾತ ವಿಷಯದಲ್ಲಿ ರಾಜ್ಯದ ಗಮನ ಸೆಳೆಯುತ್ತಿರುವುದು ವಿಷಾದನೀಯ.
ಪಟ್ಟಣದ ಡಬಲ್ ರಸ್ತೆಯಲ್ಲಿರುವ ಡಾ.ರಾಜೇಂದ್ರ ಪಾಟೀಲ ಅವರ ಆಸ್ಪತ್ರೆಯ ಮೇಲೆ ಖಚಿತ ಮಾಹಿತಿಯೊಂದಿಗೆ ಗುರುವಾರ ರಾತ್ರಿ ಬಾಗಲಕೋಟೆ ಡಿಎಚ್‌ಓ ಸುವರ್ಣ ಕುಲಕರ್ಣಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ದಯಾನಂದ ಕರೆನ್ನವರ, ಮುಧೋಳ ಟಿಎಚ್‌ಓ ವೆಂಕಟೇಶ ಮಲಘಾಣ ಅವರು ದಾಳಿ ಮಾಡಿದಾಗ ನೆರೆಯ ಮುಧೋಳ ತಾಲೂಕಿನ ರನ್ನಬೆಳಗಲಿ ಪಟ್ಟಣದ 24 ವರ್ಷದ ಮಹಿಳೆಯ ಗರ್ಭಪಾತವನ್ನು ಮಾಡಿರುವುದು ಖಚಿತವಾದ್ದರಿಂದ ಅಧಿಕಾರಿಗಳು ಪಾಟೀಲ್ ಆಸ್ಪತ್ರೆಯ ಮುಖ್ಯವೈದ್ಯರ ಓಪಿಡಿ, ನೆಲಮಹಡಿಯ ಎರಡನೇ ಓಪಿಡಿ, ಆಪರೇಷನ್ ಥಿಯೇಟರ್, ಸ್ಕ್ಯಾನಿಂಗ್ ಸೆಂಟರ್, ಎಮ್‌ಆರ್‌ಡಿ ರೂಮ್ ಸೀಜ್ ಮಾಡಿದ್ದಾರೆ. 14 ವಾರಗಳ ಭ್ರೂಣದ ಗರ್ಭಪಾತ: 14 ವಾರಗಳ ಭ್ರೂಣವನ್ನು ಡಾ.ಪಾಟೀಲ್ ಅವರು ಗರ್ಭಪಾತ ಮಾಡಿದ್ದಾರೆ. ವಿಚಿತ್ರವೆಂದರೆ ಆ ಮಹಿಳೆಗೆ ಈ ಮೊದಲು ಮೂರು ಹೆಣ್ಣುಮಕ್ಕಳಿದ್ದಾರೆ. ಇದು ನಾಲ್ಕನೇ ಮಗು, ಹೆಣ್ಣು ಮಗು ಎಂದು ಗರ್ಭಪಾತ ಮಾಡಿಸಿದ್ದಾರೆ. ಗರ್ಭಪಾತದ ನಂತರ ಗಂಡು ಎಂದು ಗೊತ್ತಾಗಿದ್ದರಿಂದ ಪ್ರಕರಣವು ಬೆಳಕಿಗೆ ಬಂದಿದೆ. ಗರ್ಭಪಾತ ಮಾಡಿಸಿಕೊಂಡ ಮಹಿಳೆಯ ಪತಿ ನೀಡಿದ ದೂರನ್ನು ಆಧರಿಸಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
Related Articles
Advertisement
ದಾಳಿಯ ವೇಳೆ ಗರ್ಭಪಾತ ಮಾಡಿದ ದಾಖಲೆಗಳು ಪತ್ತೆ : ಮೂರು ತಿಂಗಳ ಹಿಂದೆ ಮಹಾಲಿಂಗಪುರ ಪಟ್ಟಣದಲ್ಲಿ ಆದ ಕವಿತಾ ಬಾಡನವರ ಪ್ರಕರಣದಲ್ಲಿ ಇತ್ತಿಚಿಗೆ ಮೊದಲಿನ ಡಿಎಚ್‌ಓ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಸೇರಿದಂತೆ ನಾಲ್ವರ ತಲೆದಂಡವಾಗಿ, ಅವರ ಜಾಗಕ್ಕೆ ಬಂದಿರುವ ನೂತನ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಡಾ.ರಾಜೇಂದ್ರ ಪಾಟಿಲ್ ಆಸ್ಪತ್ರೆಯ ದಾಳಿಯ ವೇಳೆ ಗರ್ಭಪಾತ ಮಾಡಿದ ಅಗತ್ಯ ದಾಖಲೆಗಳು ದೊರೆತ ಹಿನ್ನಲೆ ಅಧಿಕಾರಿಗಳು ಆಸ್ಪತ್ರೆಯ ಎರಡು ಓಪಿಡಿ, ಸ್ಕ್ಯಾನಿಂಗ್ ಸೆಂಟರ್, ಡೆಲಿವರಿ ಥೇಟರ್ ಸೇರಿದಂತೆ 4 ಕೊಠಡಿಗಳನ್ನು ಸೀಜ್ ಮಾಡಿ ವೈದ್ಯರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಧನ್ವಂತರಿ ಸ್ಕ್ಯಾನಿಂಗ್ ಸೆಂಟರ್ ಸೀಜ್ :
ಶುಕ್ರವಾರ ಸಂಜೆ ಮತ್ತೆ ಮಹಾಲಿಂಗಪುರಕ್ಕೆ ಬಂದ ಬಾಗಲಕೋಟೆ ಡಿಎಚ್‌ಓ ಡಾ.ಸುವರ್ಣ ಕುಲಕರ್ಣಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ದಯಾನಂದ ಕರೆನ್ನವರ ಅವರು ಪಾಟೀಲ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿಸಿಕೊಂಡ ಮಹಿಳೆಯು ಆ.30 ರಂದು ಧನ್ವಂತರಿ ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಗರ್ಭಪತ್ತೆ ಮಾಡಿಕೊಂಡಿರುವದರಿಂದ ಅಧಿಕಾರಿಗಳು ಶುಕ್ರವಾರ ಸಂಜೆ 5 ರಿಂದ ರಾತ್ರಿ 8 ಗಂಟೆವರೆಗೂ ಸ್ಕ್ಯಾನಿಂಗ್ ಸೆಂಟರ್‌ನ ವೈದ್ಯರ ಮತ್ತು ಸಿಬ್ಬಂದಿ ವಿಚಾರಣೆ ನಡೆಸಿ, ಪ್ರಾಥಮಿಕ ತನಿಖೆಯಲ್ಲಿ ಲೋಪದೋಷಗಳು ಕಂಡು ಬಂದ ಕಾರಣ, ಧನ್ವಂತರಿ ಸ್ಕ್ಯಾನಿಂಗ್ ಸೆಂಟರ್‌ನ್ನು ಸೀಜ್ ಮಾಡಿದ್ದಾರೆ. ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ದಯಾನಂದ ಕರೆನ್ನವರ, ಸ್ಥಳಿಯ ಸಮುದಾಯ ಆರೋಗ್ಯ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಸಿ.ಎಂ.ವಜ್ಜರಮಟ್ಟಿ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿ ಇದ್ದರು.
ಕಳೆದ 5-6 ದಿನಗಳಿಂದ ಸ್ಟ್ರೀಂಗ್ ಆಪರೇಶನ್ ಮಾಡಿದ್ದರಿಂದ ಮಹಾಲಿಂಗಪುರದ ಪಾಟೀಲ್ ಆಸ್ಪತ್ರೆಯಲ್ಲಿ ಗರ್ಭಪಾತ ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಗುರುವಾರ ರಾತ್ರಿ ಪಾಟೀಲ್ ಆಸ್ಪತ್ರೆಯನ್ನು ಸೀಜ್ ಮಾಡಿ, ಪ್ರಕರಣ ದಾಖಲಿಸಿಕೊಂಡು ಸರ್ಕಾರ ಮತ್ತು ಇಲಾಖೆಯ ಮೇಲಾಧಿಕಾರಿಗಳಿಗೆ ಮಾಹಿತಿ ಕಳಿಸಿಲಾಗಿದೆ. ಪಾಟೀಲ್ ಆಸ್ಪತ್ರೆಯಲ್ಲಿ ಗರ್ಭಪಾತವಾದ ಮಹಿಳೆಯು ಆ.30 ರಂದು ಧನ್ವಂತರಿ ಸೆಂಟರ್‌ನಲ್ಲಿ ಸ್ಕ್ಯಾನಿಂಗ್ ಮಾಡಿಸಿದ್ದಾರೆ. ಅದಕ್ಕಾಗಿ ಇಲ್ಲಿ ವಿಚಾರಣೆ ನಡೆಸಿ, ಪ್ರಾಥಮಿಕ ತನಿಖೆಯಲ್ಲಿ ಸ್ಕ್ಯಾನಿಂಗ್ ಸೆಂಟರ್‌ನಲ್ಲಿನ ಲೋಪದೋಷಗಳ ಹಿನ್ನಲೆ ಸ್ಕ್ಯಾನಿಂಗ್ ಸೆಂಟರ್ ನ್ನು ಸೀಜ್ ಮಾಡಿ, ಪ್ರಕರಣ ದಾಖಲಿಸಿಕೊಂಡಿದ್ದೇವೆ. ನ್ಯಾಯಾಲಯದ ವಿಚಾರಣೆಯಲ್ಲಿ ಸತ್ಯಾಸತ್ಯತೆ ತಿಳಿಯುತ್ತದೆ. ಪಟ್ಟಣದಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು. ಸಾರ್ವಜನಿಕರು ಗಂಡು ಹೆಚ್ಚು, ಹೆಣ್ಣು ಕಡಿಮೆ ಎಂಬ ಭೇದಭಾವ ಬಿಟ್ಟಾಗ ಮಾತ್ರ ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ಸಾಧ್ಯ. ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಾಗಿದ್ದು ಅಗತ್ಯವಾಗಿದೆ.
– ಡಾ. ಸುವರ್ಣ ಕುಲಕರ್ಣಿ. ಡಿಎಚ್‌ಓ , ಬಾಗಲಕೋಟೆ.