Advertisement

“ಮಹಾಲಕ್ಷ್ಮೀ ಎಕ್ಸ್‌ಪ್ರೆಸ್‌’ರೈಲು ಮರು ಆರಂಭ ಅಭಿವೃದ್ಧಿಗೆ ಪೂರಕ

12:18 AM Jul 21, 2019 | Sriram |

1990ರ ದಶಕದಲ್ಲಿ ಮಂಗಳೂರು-ಅರಸಿಕೆರೆ ಮಾರ್ಗವಾಗಿ ಮೀರಜ್‌ಗೆ ಸಂಚರಿಸುತ್ತಿದ್ದ ‘ಮಹಾಲಕ್ಷ್ಮೀ ಎಕ್ಸ್‌ಪ್ರೆಸ್‌ ಸಂಚಾರ ಮತ್ತೆ ಆರಂಭಿಸುವುದು ಕರಾವಳಿಗರ ಬಹುದಿನಗಳ ಬೇಡಿಕೆ. ಇದಕ್ಕೆ ಪೂರಕವೆಂಬಂತೆ ಮಂಗಳೂರು ಸಂಸದ ನಳಿನ್‌ ಕುಮಾರ್‌ ಕಟೀಲು ಕೇಂದ್ರ ರೈಲ್ವೆ ಖಾತೆ ಸಚಿವ ಪಿಯೂಷ್‌ ಗೋಯಲ್ ಹಾಗೂ ರಾಜ್ಯ ಖಾತೆ ಸಚಿವ ಸುರೇಶ್‌ ಅಂಗಡಿಯವರನ್ನು ಭೇಟಿ ಮಾಡಿ ರೈಲು ಸಂಚಾರವನ್ನು ಶೀಘ್ರ ಆರಂಭಿಸಬೇಕು ಎಂಬ ಬೇಡಿಕೆಯನ್ನು ಮತ್ತೆ ಇಟ್ಟಿದ್ದಾರೆ. ಈ ಬೇಡಿಕೆ ಸಾಕಾರಗೊಂಡರೆ ಮಂಗಳೂರು ನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ರೈಲ್ವೆ ಸೇವೆಗೆ ಹೊಸ ಆಯಾಮ ದೊರಕುವುದು.

Advertisement

ಮಂಗಳೂರಿನಿಂದ ಅರಸಿಕೆರೆ ಮಾರ್ಗವಾಗಿ ಮೀರಜ್‌ಗೆ 1990ರ ದಶಕದಲ್ಲಿ ಸಂಚರಿಸುತ್ತಿದ್ದ ‘ಮಹಾಲಕ್ಷ್ಮೀ ಎಕ್ಸ್‌ಪ್ರೆಸ್‌’ ರೈಲಿನ ಸಂಚಾರವನ್ನು ಮರಳಿ ಪ್ರಾರಂಭಿಸುವಂತೆ ಈಗ ಕರಾವಳಿ ಭಾಗದಲ್ಲಿ ಬೇಡಿಕೆ ಬಲಗೊಳ್ಳುತ್ತಿದೆ. ಈ ಬೇಡಿಕೆ ಹಲವಾರು ವರ್ಷಗಳಿಂದ ಇದೆ. ಮೀರಜ್‌ಗೆ ಹುಬ್ಬಳ್ಳಿ- ಧಾರವಾಡ ಮಾರ್ಗವಾಗಿ ಮಹಾಲಕ್ಷ್ಮೀ ಎಕ್ಸ್‌ಪ್ರೆಸ್‌ ಮರು ಆರಂಭಿಸಬೇಕು ಎಂಬ ಬೇಡಿಕೆಯನ್ನು ಈ ಹಿಂದೆ ನಡೆದಿದ್ದ ದಕ್ಷಿಣ ವಲಯ ಬಳಕೆದಾರರ ಸಲಹಾ ಸಮಿತಿ ಸಭೆಯಲ್ಲೂ ಚರ್ಚೆ ಮಾಡಲಾಗಿತ್ತು. ಆದರೆ ಇದುವರೆಗೆ ಯಾವುದೇ ಪೂರಕ ಸ್ಪಂದನೆ ದೊರಕಿಲ್ಲ. ಇದೀಗ ಮಂಗಳೂರು ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಕೇಂದ್ರ ರೈಲ್ವೆ ಖಾತೆ ಸಚಿವ ಪಿಯೂಷ್‌ ಗೋಯಲ್ ಹಾಗೂ ರಾಜ್ಯ ಖಾತೆ ಸಚಿವ ಸುರೇಶ್‌ ಅಂಗಡಿಯವರನ್ನು ಭೇಟಿ ಮಾಡಿ ರೈಲು ಸಂಚಾರವನ್ನು ಶೀಘ್ರ ಆರಂಭಿಸಬೇಕು ಎಂಬ ಬೇಡಿಕೆಯನ್ನು ಮತ್ತೇ ಮಂಡಿಸಿದ್ದಾರೆ. ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿಕರ ಅಭಿವೃದ್ಧಿ ಸಂಘದ ನಿಯೋಗ ಕೂಡಾ ಇತ್ತೀಚೆಗೆ ಸಚಿವ ಸುರೇಶ್‌ ಅಂಗಡಿಯವರನ್ನು ಭೇಟಿ ಮಾಡಿ ರೈಲು ಸಂಚಾರ ಮರು ಆರಂಭಿಸಬೇಕು ಎಂದು ಮನವಿ ಸಲ್ಲಿಸಿದೆ. ಸಚಿವರಿಂದ ಪೂರಕ ಸ್ಪಂದನೆ ವ್ಯಕ್ತವಾಗಿದ್ದು ಪರಿಶೀಲಿಸಿ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿ ದ್ದಾರೆಂದು ವರದಿಯಾಗಿದೆ. ಈ ಬೇಡಿಕೆ ಸಾಕಾ ರಗೊಂಡರೆ ಮಂಗ ಳೂರು ನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ರೈಲ್ವೆ ಸೇವೆಗೆ ಹೊಸ ಆಯಾಮ ದೊರಕುವುದರ ಜತೆಗೆ ವಾಣಿಜ್ಯ ವ್ಯವಹಾರ ಅಭಿವೃದ್ಧಿಗೂ ಪೂರಕವಾಗಲಿದೆ.

1994ರ ವರೆಗೆ ಚಾಲನೆಯಲ್ಲಿತ್ತು
ಮಂಗಳೂರು-ಹಾಸನ ನಡುವೆ ಮೀಟರ್‌ಗೇಜ್‌ ರೈಲು ಮಾರ್ಗವಿದ್ದ ವೇಳೆ 1994ರ ವರೆಗೆ ಮಹಾಲಕ್ಷ್ಮೀ ಎಕ್ಸ್‌ಪ್ರೆಸ್‌ ಮಂಗಳೂರಿನಿಂದ ಮೀರಜ್‌ಗೆ ಸಕಲೇಶಪುರ, ಅರಸಿಕೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಮಾರ್ಗವಾಗಿ ಸಂಚಾರ ನಡೆಸುತ್ತಿತ್ತು. ಈ ರೈಲು ಮಂಗಳೂರು ಸೆಂಟ್ರಲ್ನಿಂದ ಪ್ರತಿದಿನ ರಾತ್ರಿ 11 ಗಂಟೆಗೆ ಹಾಸನ ಮಾರ್ಗವಾಗಿ ಮೀರಜ್‌ಗೆ ಹೋಗುತ್ತಿತ್ತು. ಮೀರಜ್‌ ಪ್ರಯಾಣಕ್ಕೆ ಒಟ್ಟು 19 ತಾಸು ತಗಲುತ್ತಿತ್ತು. ಮಂಗ ಳೂರು-ಹಾಸನ ರೈಲು ಮಾರ್ಗದ ಬ್ರಾಡ್‌ಗೇಜ್‌ ಪರಿವರ್ತನೆ ಕಾಮಗಾರಿ ಆರಂಭಗೊಂಡ ಬಳಿಕ ಈ ರೈಲು ಸಂಚಾರವನ್ನು ರದ್ದುಪಡಿಸಲಾಗಿತ್ತು. ಆದರೆ ಹಳಿ ಪರಿವರ್ತನೆ ಕಾಮಗಾರಿ ಪೂರ್ಣಗೊಂಡ ಬಳಿಕ ಉಳಿದ ಎಲ್ಲಾ ರೈಲುಗಳ ಸಂಚಾರ ಆರಂಭಗೊಂಡರೂ ಮಹಾಲಕ್ಷ್ಮೀ ಎಕ್ಸ್‌ ಪ್ರಸ್‌ ರೈಲು ಸಂಚಾರ ಆರಂಭಿಸಲಿಲ್ಲ. ಬದಲಿ ಮಹಾಲಕ್ಷ್ಮೀ ಎಕ್ಸ್‌ಪ್ರೆಸ್‌ ಹೆಸರಿನಲ್ಲಿ ಮುಂಬಯಿ ಸಿಎಸ್‌ಟಿ ನಿಲ್ದಾಣದಿಂದ ಕೊಲ್ಲಾಪುರಕ್ಕೆ ಹೊಸ ರೈಲು ಸಂಚಾರ ಆರಂಭಿಸಲಾಯಿತು. ಈಗ ಈ ರೈಲು ಮುಂಬಯಿ ಸಿಎಸ್‌ಟಿ ನಿಲ್ದಾಣದಿಂದ ಕರ್ಜತ್‌, ಲೋನಾವಾಲ, ಪುಣೆ ಜಂಕ್ಷನ್‌, ಸಾಂಗ್ಲಿ, ಮೀರಜ್‌ ಜಂಕ್ಷನ್‌ ಮೂಲಕ ಕೊಲ್ಲಾಪುರಕ್ಕೆ ಸಂಚರಿಸುತ್ತಿದೆ.

ಮಹಾಲಕ್ಷ್ಮೀ ಎಕ್ಸ್‌ಪ್ರೆಸ್‌ನ ಮಹತ್ವ
ಮಹಾಲಕ್ಷ್ಮೀ ಎಕ್ಸ್‌ಪ್ರೆಸ್‌ ರೈಲು ಮಂಗಳೂರನ್ನು ಉತ್ತರ ಕರ್ನಾಟಕ ಭಾಗಕ್ಕೆ ಜೋಡಿಸುತ್ತದೆ. ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಸಾಂಗ್ಲಿ ಹಾಗೂ ಮೀರಜ್‌ ನಡುವೆ ನೇರ ರೈಲು ಸಂಪರ್ಕ ಸಾಧ್ಯವಾಗುತ್ತದೆ. ಜತೆಗೆ ಮಂಗಳೂರು-ಧಾರವಾಡ ನಡುವೆಯೂ ರೈಲ್ವೆ ಪ್ರಯಾಣ ಜಾಲವೇರ್ಪಡುತ್ತದೆ. ಸಾಂಗ್ಲಿ, ಮೀರಜ್‌ ನಡುವೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯವರು ಸೇರಿದಂತೆ ಕನ್ನಡಿಗರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಅಲ್ಲದೆ, ಮಂಗಳೂರು-ಹಾಸನ ಮಾರ್ಗ ಬ್ರಾಡ್‌ಗೇಜ್‌ ಆಗಿರುವುದರಿಂದ ಸುಮಾರು 14 ತಾಸಿನಲ್ಲಿ ಮಂಗಳೂರಿನಿಂದ ಮೀರಜ್‌ಗೆ ಪ್ರಯಾಣಿಸಬಹುದು.

ಪ್ರಸ್ತುತ ಪುಣೆ ಜಂಕ್ಷನ್‌ನಿಂದ ಎರ್ನಾಕುಳಂ ಜಂಕ್ಷನ್‌ನಿಗೆ (ರೈಲು ನಂ.11097) ‘ಪೂರ್ಣ ಎಕ್ಸ್‌ ಪ್ರಸ್‌’ ವಾರಕ್ಕೆ ಒಮ್ಮೆ ಅಂದರೆ ರವಿವಾರ ಸಂಚಾರ ನಡೆಸುತ್ತಿದೆ. ಈ ರೈಲು ಮಂಗಳೂರು ಜಂಕ್ಷನ್‌, ಉಡುಪಿ, ಭಟ್ಕಳ, ಮಡಂಗಾವ್‌ ಜಂಕ್ಷನ್‌, ಕುಲೆಂ, ಬೆಳಗಾಂ , ಮೀರಜ್‌, ಸಾಂಗ್ಲಿ , ಸತಾರ ಮೂಲಕ ಪುಣೆ ಜಂಕ್ಷನ್‌ಗೆ ಹೋಗುತ್ತದೆ. ಆದರೆ ಅರಸಿಕೆರೆ ಮಾರ್ಗವಾಗಿ ಹುಬ್ಬಳ್ಳಿ-ಧಾರವಾಡ ಮೂಲಕ ಮೀರಜ್‌ಗೆ ನೇರ ರೈಲು ಸಂಪರ್ಕ ಕಲ್ಪಿಸಿದರೆ, ಕರಾವಳಿ ಭಾಗದವರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಸುತ್ತಿ ಬಳಸಿ ಸಾಗುವುದು ತಪ್ಪುತ್ತದೆ. ಈ ಕಾರಣಕ್ಕೆ ಮಹಾಲಕ್ಷ್ಮೀ ಎಕ್ಸ್‌ ಪ್ರಸ್‌ ರೈಲು ಸಂಚಾರ ಕರಾವಳಿಗರ ಅದರಲ್ಲೂ ಮುಖ್ಯವಾಗಿ ಮಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪಾಲಿಗೆ ಹೆಚ್ಚು ಮಹತ್ವದ್ದಾಗಿದೆ.

Advertisement

ಮಂಗಳೂರಿನಿಂದ ಗುಲ್ಬರ್ಗಾಕ್ಕೆ ರೈಲು ಸಂಚಾರ ಆರಂಭಿಸಬೇಕು ಎಂಬ ಬೇಡಿಕೆಯೂ ವ್ಯಕ್ತವಾಗಿದೆ.

ಗುಲ್ಬರ್ಗಾದಿಂದ ವಾಡಿ – ಯಾದಗಿರಿ – ರಾಯಚೂರು -ಗುಂಟಕಲ್, ಬಳ್ಳಾರಿ, ಚಿಕ್ಕಮಗಳೂರು- ಬೀರೂರ, ಕಡೂರು, ಅರಸೀಕೆರೆ, ಹಾಸನ- ಸಕಲೇಶಪುರ –

ಸುಬ್ರಹ್ಮಣ್ಯ ರಸ್ತೆ, ಪುತ್ತೂರು, ಬಂಟ್ವಾಳ ಮೂಲಕ ಮಂಗಳೂರಿಗೆ ಸಂಚಾರ ನಡೆಸಬಹುದಾಗಿದೆ. ರೈಲ್ವೇ ಇಲಾಖೆ ಈ ಸಲಹೆಯನ್ನು ಪರಿಶೀಲಿಸಿ ಸಾಧ್ಯತೆಯ ನಿಟ್ಟಿನಲ್ಲಿ ಕಾರ್ಯೋನ್ಮುಖವಾದರೆ ಉತ್ತರ ಕರ್ನಾಟಕದ ನಗರಗಳಿಗೆ ಮಂಗಳೂರುನಿಂದ ರೈಲ್ವೆ ಸಂಪರ್ಕ ಜಾಲ ವಿಸ್ತರಣೆಗೊಳ್ಳುತ್ತದೆ.

ಜಿಲ್ಲೆಯ ಅಭಿವೃದ್ಧಿಗೆ ಪೂರಕ

‘ಮಹಾಲಕ್ಷ್ಮೀ ಎಕ್ಸ್‌ಪ್ರೆಸ್‌’ ರೈಲು ಮರು ಆರಂಭಗೊಂಡರೆ ದ.ಕನ್ನಡ ಜಿಲ್ಲೆ¿ ರೈಲ್ವೆ ಜಾಲ ಹುಬ್ಬಳಿ-ಧಾರವಾಡದ ಜತೆಗೆ ಸಂಪರ್ಕ ಸಾಧಿಸುತ್ತದೆ. ಈಗಾಗಲೇ ವಾಣಿಜ್ಯ ನಗರವಾಗಿ ಗುರುತಿಸಿಕೊಂಡಿರುವ ಹುಬ್ಬಳಿ-ಧಾರವಾಡ ನಗರಗಳ ಜತೆ ಹೆಚ್ಚಿನ ವಾಣಿಜ್ಯ ವ್ಯವಹಾರಕ್ಕೆ ಪೂರಕವಾಗಲಿದೆ. ಇದಲ್ಲದೆ ಶಿಕ್ಷಣ, ಆರೋಗ್ಯ ಸೇವೆ ಮುಂತಾದ ಕಾರಣಗಳಿಂದ ಆ ಭಾಗದಿಂದ ಗಣನೀಯ ಪ್ರಮಾಣದಲ್ಲಿ ವಿದ್ಯಾರ್ಥಿಗಳು, ಜನರು ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಈ ನಗರಗಳ ನಡುವೆ ರೈಲು ಸಂಚಾರವೇರ್ಪಡುವುದು ದ.ಕನ್ನಡ ಜಿಲ್ಲೆಯ ಅಭಿವೃದ್ದಿ ನಿಟ್ಟಿನಲ್ಲಿ ಇದೊಂದು ಮಹತ್ತರ ಹೆಜ್ಜೆಯಾಗಿ ದಾಖಲಾಗಲಿದೆ.

-ಕೇಶವ ಕುಂದರ್‌
Advertisement

Udayavani is now on Telegram. Click here to join our channel and stay updated with the latest news.

Next