Advertisement

MahaKalipadpu: ನಿರ್ಲಕ್ಷ್ಯಕ್ಕೆ ಒಳಗಾಗಿದೆ ಶೆಟ್ಟಿಬೆಟ್ಟು ಮೊಲಿ ಕೆರೆ

07:06 PM Sep 11, 2024 | Team Udayavani |

ಮಹಾಕಾಳಿಪಡ್ಪು: ಜಪ್ಪಿನಮೊಗರು ಮಹಾಕಾಳಿಪಡ್ಪುವಿನ ಪುರಾತನ ಶೆಟ್ಟಿ ಬೆಟ್ಟಿನ ಮೊಲಿ ಕೆರೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನವೀಕರಣಗೊಂಡರೂ ಕೆರೆಯ ಪರಿಸರದ ಸಂರಕ್ಷಣೆಗೆ ಪೂರಕವಾದ ಅಭಿವೃದ್ಧಿ ಕಾರ್ಯಗಳನ್ನು ನಡೆಸದ ಕಾರಣ ಪಾಚಿಗಟ್ಟಿದೆ. ಕೆರೆಯ ನೀರೂ ಪೂರ್ಣ ಕಲುಷಿತಗೊಂಡಿದೆ.

Advertisement

ಕೆರೆಯ ವ್ಯಾಪ್ತಿಯ ಸ್ಥಳೀಯ ಪ್ರದೇಶಗಳಲ್ಲಿ ಒಳಚರಂಡಿ ಸಂಪರ್ಕ ವ್ಯವಸ್ಥೆ ಕಲ್ಪಿಸದೆ ಕೆರೆಯ ಅಭಿವೃದ್ಧಿ ಮಾಡಿರುವ ಕಾರಣ ಕೆರೆಯ ನೀರಿನ ಮೇಲೆ ಪರಿಣಾಮ ಬೀರಿದೆ. ಸ್ಮಾರ್ಟ್‌ಸಿಟಿ ವತಿಯಿಂದ ಈ ಪ್ರದೇಶದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ರಸ್ತೆಯ ಕಾಮಗಾರಿ ಸ್ಥಳೀಯವಾಗಿ ನಡೆಯುತ್ತಿದ್ದರೂ ವ್ಯವಸ್ಥಿತ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಯಾವುದೇ ಆದ್ಯತೆ ಈ ವರೆಗೆ ನೀಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಧಾರ್ಮಿಕ ಮಹತ್ವವನ್ನು ಪರಿಗಣಿಸಿಲ್ಲ
ಈ ಹಿಂದಿನ ಕಾಲದಲ್ಲಿ ಸ್ಥಳೀಯ ಪ್ರದೇಶಕ್ಕೆ ಜಲಮೂಲವಾಗಿತ್ತು. ಪುರಾತನ ರಾಜಮನೆತನದವರು ಕೆರೆಯ ಪರಿಸರದಲ್ಲಿರುವ ದೈವಿಕ ಶಕ್ತಿ ಸಾನ್ನಿಧ್ಯಗಳನ್ನು ಆರಾ ಧಿಸಿಕೊಂಡು ಬಂದಿದ್ದು, ಐತಿಹಾಸಿಕ ಮಹತ್ವವನ್ನು ಹೊಂದಿದೆ. ಕೆರೆಯ ಸಂರಕ್ಷಣೆಗೆ ಮತ್ತು ವಿಶೇಷವಾಗಿ ಪರಿಸರದ ಧಾರ್ಮಿಕ ಮಹತ್ವಕ್ಕೆ ಆದ್ಯತೆ ನೀಡದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ ಎನ್ನುವುದು ಸ್ಥಳೀಯರ ಆರೋಪ.

ಮನವಿ ಸಲ್ಲಿಸಿದರೂ ಪ್ರಯೋಜನವಿಲ್ಲ
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಟ್ಟ ಶೆಟ್ಟಿಬೆಟ್ಟು ಪ್ರದೇಶದಲ್ಲಿ ವ್ಯವಸ್ಥಿತವಾದ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಮನವಿ ಸಲ್ಲಿಸಿದ್ದರೂ ಸಂಬಂಧಪಟ್ಟ ಇಲಾಖೆಗಳು ನಿರ್ಲಕ್ಷ್ಯ ವಹಿಸಿವೆ. ಹಲವಾರು ಬಾರಿ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರತೀ ಬಾರಿ ಒಂದು ಇಲಾಖೆಯಿಂದ ಇನ್ನೊಂದು ಇಲಾಖೆಗೆ ಮನವಿ ವರ್ಗಾವಣೆಯಾಗಿರುವ ವಿಚಾರಗಳ ಪ್ರತಿ ಕೈ ಸೇರಿರುವುದು ಬಿಟ್ಟರೆ ಯಾವುದೇ ರೀತಿ ಕಾರ್ಯಗಳು ಜಾರಿಗೆ ಬಂದಿಲ್ಲ ಎನ್ನುತ್ತಾರೆ ಸ್ಥಳೀಯರು.

ಕೆರೆಯ ರಕ್ಷಣೆಗೆ ಆದ್ಯತೆ ನೀಡಿ
ಸುಮಾರು 92 ಸೆಂಟ್ಸ್‌ ವಿಸ್ತೀರ್ಣ ಹೊಂದಿದ್ದ ಕೆರೆಯು ಒತ್ತುವರಿ ಹಾಗೂ ಆಡಳಿತದ ನಿರ್ಲಕ್ಷ್ಯದಿಂದ ತನ್ನ ಬಹುತೇಕ ಭೂಭಾಗಗಳನ್ನು ಕಳೆದುಕೊಂಡಿದೆ. ಈ ಬಗ್ಗೆ ಕಠಿನ ಕ್ರಮಗಳನ್ನು ಕೈಗೊಂಡು ಒತ್ತುವರಿಯನ್ನು ತೆರವುಗೊಳಿಸಿ ಕೆರೆಯ ಸುತ್ತಲೂ ಸುರಕ್ಷತಾ ಬೇಲಿ ಅಳವಡಿಸಬೇಕು. ಕೆರೆಯ ಭೂ ಪ್ರದೇಶದ ವ್ಯಾಪ್ತಿಗೆ ಗಡಿ ಕಲ್ಲನ್ನು ಹಾಕುವುದರ ಜತೆಗೆ ಭವಿಷ್ಯದ ಹಿತದೃಷ್ಟಿಯಿಂದ ಕೆರೆಗಳ ಸಂರಕ್ಷಣೆಗೆ ಹೈಕೋರ್ಟ್‌ ಸೂಚಿತ 30 ಮೀ. ಬಫರ್‌ ಜೋನ್‌ ನಿಗದಿಪಡಿಸಲು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next