ನವದೆಹಲಿ:ಖನಿಜ ಸಂಪತ್ತು ಹೊಂದಿರುವ ಜಾರ್ಖಂಡ್ ನಲ್ಲಿ ಈ ಬಾರಿ ಮಹಾಘಟಬಂಧನ್ ಅಧಿಕಾರದ ಗದ್ದುಗೆ ಏರಲಿದೆ ಎಂದು ಜಾರ್ಖಂಡ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಂಜಯ್ ಪಾಸ್ವಾನ್ ಸೋಮವಾರ ಭವಿಷ್ಯ ನುಡಿದಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಂಡಿಲ್ಲ ಎಂದು ಪಾಸ್ವಾನ್ ಆರೋಪಿಸಿದ್ದಾರೆ.
ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಯಾಕೆ ಪ್ರಾದೇಶಿಕ ಪಕ್ಷವಾದ ಜಾರ್ಖಂಡ್ ಮುಕ್ತಿ ಮೋರ್ಚಾದಂತೆ ಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ ಎಂಬ ಪ್ರಶ್ನೆಗೆ ಪಾಸ್ವಾನ್ ಈ ಪ್ರತಿಕ್ರಿಯೆ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷ ಯಾವತ್ತೂ ಮೈತ್ರಿಧರ್ಮವನ್ನು ನಂಬುತ್ತದೆ. ಹೇಗೆ ಆಲೋಚಿಸಿದರೂ ಕೂಡಾ ನಾವು ಬಲಿಷ್ಠರಾಗಿದ್ದೇವೆ. ನಾವು ಸ್ಪರ್ಧಿಸುತ್ತಿದ್ದೇವೆ. ನಾವು(ಜೆಎಂಎಂ, ಕಾಂಗ್ರೆಸ್ ಮತ್ತು ರಾಷ್ಟ್ರೀಯ ಜನತಾ ದಳ) ಒಂದೇ ರೀತಿಯಲ್ಲಿ ನಮ್ಮ ಸಿದ್ಧಾಂತವನ್ನು ಹಂಚಿಕೊಂಡಿದ್ದೇವೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ನಾವು ಬಿಜೆಪಿಗೆ ಹೆದರಿದ್ದೇವೆ ಅಂತ ತಿಳಿದುಕೊಂಡಿದ್ದರೆ. ಇದು ಅವರ ತಪ್ಪು ತಿಳಿವಳಿಕೆಯಾಗಲಿದೆ. ಕಳೆದ ಐದು ವರ್ಷಗಳ ಬಿಜೆಪಿ ಆಡಳಿತವನ್ನು ಜಾರ್ಖಂಡ್ ಜನತೆ ನೋಡಿದ್ದಾರೆ. ನಿಜ ಸಂಗತಿ ಏನೆಂದರೆ ಬಿಜೆಪಿಯೇ ಹೆದರಿದೆ. ಐದು ಹಂತಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿ ಸೋಲುವ ಭೀತಿ ಆವರಿಸಿಕೊಂಡಿದೆ ಎಂದು ಪಾಸ್ವಾನ್ ತಿಳಿಸಿದ್ದಾರೆ.
ಜಾರ್ಖಂಡ್ ರಾಜ್ಯದಿಂದ ನಕ್ಸಲಿಸಂ ಅನ್ನು ಕಿತ್ತೊಗೆಯುವುದಾಗಿ ಬಿಜೆಪಿ ಹೇಳಿತ್ತು. ಒಂದು ವೇಳೆ ನಕ್ಸಲೀಯರನ್ನು ಮಟ್ಟ ಹಾಕಿದ್ದರೆ ರಾಜ್ಯದಲ್ಲಿ ಐದು ಹಂತಗಳಲ್ಲಿ ಚುನಾವಣೆ ಯಾಕೆ ನಡೆಯಬೇಕಿತ್ತು ಎಂದು ಪಾಸ್ವಾನ್ ಪ್ರಶ್ನಿಸಿದ್ದಾರೆ.