Advertisement

ಮಹಾಘಟಬಂಧನ್‌ಗೆ ಸಿದ್ಧಾಂತವೇ ಇಲ್ಲ

10:52 AM Mar 06, 2019 | Team Udayavani |

ಚಿಕ್ಕಮಗಳೂರು: ದೇಶದಲ್ಲಿ ಮಹಾ ಘಟಬಂಧನ್‌ ಎಂದು ಮಾತನಾಡುತ್ತಿರುವ ವಿಪಕ್ಷಗಳು ಹೊಂದಿರುವುದು ಎರಡು ಅಂಶಗಳನ್ನು ಮಾತ್ರ. ಅದು ನರೇಂದ್ರ ಮೋದಿ ಅವರ ಭಯ ಹಾಗೂ ದ್ವೇಷ. ಅಲ್ಲಿ ಯಾವುದೇ ಸಿದ್ಧಾಂತವಿಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆದ ಶಾಸಕ ಸಿ.ಟಿ. ರವಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಅವರನ್ನು ಕಂಡರೆ ಭಯ ಕಾಡುತ್ತಿರುವುದು ಏಕೆಂದರೆ ಆ ಪಕ್ಷಗಳ ರಾಜಕೀಯ ಅಸ್ಥಿತ್ವವೇ ಹೋಗಬಹುದೆಂದು. ಇನ್ನು ದ್ವೇಷವಾದರೂ ಮನೆ ಮಾಡಿರುವುದು ಅಕ್ರಮಗಳನ್ನೆಲ್ಲಾ ಹೊರ ತೆಗೆಯುತ್ತಾ ಇರುವುದರಿಂದ ತಮ್ಮ ಬುಡಕ್ಕೆ ಅದು
ಬಂದು ನಿಲ್ಲಬಹುದೆಂಬ ಆತಂಕದಿಂದ ಎಂದು ವಿಶ್ಲೇಷಿಸಿ, ಈ ಪಕ್ಷಗಳಿಗೆ ಗುರಿ ಇಲ್ಲ, ನಾಯಕತ್ವವೂ ಇಲ್ಲ, ಸಾಮಾನ್ಯ ಕಾರ್ಯಕ್ರಮವನ್ನು ಹೊಂದಿಲ್ಲ. ಕೇವಲ ದ್ವೇಷ ಮತ್ತು ಭಯ ಮಾತ್ರ ಇದೆ ಎಂದು ಅಭಿಪ್ರಾಯಪಟ್ಟರು.

ಮೋದಿ ದ್ವೇಷಿಸುತ್ತಿರುವ ಪಕ್ಷಗಳು ಪರಸ್ಪರವಾಗೂ ದ್ವೇಷ ಕಾರಿಕೊಳ್ಳುತ್ತಿವೆ. ಒಟ್ಟಾಗಿದ್ದಾಗ ಮೋದಿ ವಿರುದ್ಧ ದ್ವೇಷ ಹೊರಹಾಕುವ ಈ ನಾಯಕರು ಒಟ್ಟಾಗಿರದಿದ್ದಾಗ ಪರಸ್ಪರರ ವಿರುದ್ಧವೇ ದ್ವೇಷ ವ್ಯಕ್ತಪಡಿಸುತ್ತಾರೆ. ಈಗ ದೇಶದಲ್ಲಿ ರಾಷ್ಟ್ರೀಯ ವಿಚಾರ ಮುನ್ನೆಲೆಗೆ ಬಂದಿದೆ. ಸದ್ಯಕ್ಕೆ ಮೋದಿ
ಅವರಿಗೆ ಸರಿಸಾಟಿಯಾದ ರಾಜಕೀಯ ನೇತೃತ್ವ ಯಾವ ಪಕ್ಷದಲ್ಲೂ ಇಲ್ಲ ಎಂಬುದನ್ನು ಜನ ಅರ್ಥ ಮಾಡಿಕೊಂಡಿದ್ದಾರೆ ಎಂದರು. 

ರಾಷ್ಟ್ರೀಯ ವಿಚಾರ ಒಂದೊಮ್ಮೆ ದೇಶದಲ್ಲಿ ಮುನ್ನೆಲೆಗೆ ಬಂದರೆ ಜಾತಿ, ಕುಟುಂಬ, ಭಾಷೆ, ಪ್ರಾದೇಶಿಕತೆ ಗೌಣವಾಗುತ್ತದೆ. ದೇಶ ಈಗ ಸಮಾನಾಂತರ ಭಾವನೆ ಹೊಂದಿದೆ. ದೇಶಭಕ್ತಿ ಸುಪ್ತಾವಸ್ಥೆಯಿಂದ ಜಾಗೃತಾವಸ್ಥೆಗೆ ಬಂದು ನಿಂತಿದೆ. ಹಾಗಾಗಿ ಮತದಾರ ದೇಶಕ್ಕೆ ಯಾವುದು ಬೇಕು, ಎಂಥಾ ನಾಯಕತ್ವ ಇರಬೇಕು ಎಂಬ ಬಗ್ಗೆ ಚೆನ್ನಾಗಿ ಯೋಚಿಸಿ ಮತ ಹಾಕಲು ಮುಂದಾಗುತ್ತಾನೆ. ಆ ಹಿನ್ನೆಲೆಯಲ್ಲಿ ಮತದಾರನ ಆಯ್ಕೆ ಮೋದಿ ಮಾತ್ರ ಎಂದು ವಿವರಿಸಿದರು.
 
ಸೈನ್ಯಕ್ಕೆ ಪೂರ್ಣ ಶ್ರೇಯ: ಮೊನ್ನೆ ನಡೆದ ವೈಮಾನಿಕ ದಾಳಿಯ ಬಗ್ಗೆ ಕಾಂಗ್ರೆಸ್‌ ಸೇರಿದಂತೆ ಅನೇಕ ವಿಪಕ್ಷ ಮುಖಂಡರು ಸಾಕ್ಷಿ ಕೇಳುತ್ತಿದ್ದಾರೆ. ತಾಯಿಯ ಬಗ್ಗೆ ಅನುಮಾನವಿರುವವರು ಮಾತ್ರ ತಂದೆ ಯಾರೆಂದು ಕೇಳುತ್ತಾರೆ. ಸೈನಿಕರ ಮೇಲೆ ನಂಬಿಕೆ, ದೇಶಭಕ್ತಿ ಪ್ರಶ್ನಾತೀತ. ಅವೆರಡನ್ನು ಹೊಂದಿರುವವರು ಈ ಪ್ರಶ್ನೆ ಕೇಳುವುದಿಲ್ಲ. ಸೈನ್ಯದ ಬಗ್ಗೆ ಅನುಮಾನಿಸುವವನು ಹೆತ್ತ ತಾಯಿಯನ್ನು ಅನುಮಾನಿಸುತ್ತಾನೆ. ಆಗಿರುವ ದಾಳಿಯ ಶ್ರೇಯಸನ್ನು ಪೂರ್ಣವಾಗಿ ಸೈನ್ಯಕ್ಕೆ ಮೊದಲು ನೀಡಬೇಕು. ನಂತರ ಆ ನಿರ್ಧಾರಕ್ಕೆ ಪೂರ್ಣವಾಗಿ ಬೆಂಬಲಿಸಿದ ಕೀರ್ತಿ ರಾಜಕೀಯ ನೇತೃತ್ವಕ್ಕೆ ಸಲ್ಲುತ್ತದೆ ಎಂದರು.

ದೇಶದಲ್ಲಿ ಎಂದೂ ಸಹ ಸೈನ್ಯದ ತಾಕತ್ತು ಕಡಿಮೆಯಾಗಿಲ್ಲ. 1948ರಲ್ಲಿ ನಡೆದ ಯುದ್ಧದಿಂದ ಹಿಡಿದು ಕಾರ್ಗಿಲ್‌ ಯುದ್ಧದವರೆಗೆ ಸೈನ್ಯದ ಸಾಮರ್ಥ್ಯ ಸಾಬೀತಾಗಿದೆ. ರಾಜಕೀಯ ನೇತೃತ್ವ ಮಾತ್ರ ಕೆಲವೊಮ್ಮೆ ಕಠಿಣ ನಿರ್ಧಾರದ ಮೂಲಕ ಸಮರ್ಥವೆನಿಸಿದ್ದರೆ ಕೆಲವೊಮ್ಮೆ ದುರ್ಬಲ ಅಸಹಾಯಕ ನಾಯಕತ್ವದಿಂದ ತೊಂದರೆಯಾಗಿದೆ. ಆದರೆ ಇಂದು ದೇಶದಲ್ಲಿರುವ ನಾಯಕತ್ವ ಅಸಹಾಯಕ ನಾಯಕತ್ವವಲ್ಲ. ಹಾಗಾಗಿ ಈ ದಾಳಿಯ ಕೀರ್ತಿ ಸೈನ್ಯ ಮತ್ತು ನಾಯಕತ್ವ ಎರಡಕ್ಕೂ ಸಂದಾಯವಾಗುತ್ತದೆ. ಮೋದಿ ಅವರನ್ನು ಟೀಕಿಸುವ ಭರದಲ್ಲಿ ಕೆಲವು ವಿಪಕ್ಷ ನಾಯಕರು ಸೇನೆ ಮಾಡಿದ ದಾಳಿಯನ್ನು ವಿರೋಧಿಸುವ ಮೂಲಕ ಸೈನ್ಯಕ್ಕೂ ಅಪಮಾನ ಮಾಡುತ್ತಿದ್ದಾರೆ,  ಪ್ರಧಾನಮಂತ್ರಿಯನ್ನು ಅವಮಾನಿಸುತ್ತಿದ್ದಾರೆ ಎಂದು ದೂರಿದರು.

Advertisement

ಲೋಕಾ ಚುನಾವಣೆಗೆ ಸಿದ್ಧತೆ
ಲೋಕಸಭೆ ಚುನಾವಣೆಗೆ ಬಿಜೆಪಿ ಸಿದ್ಧತೆ ನಡೆಸಿದೆ. ಮತಗಟ್ಟೆ ಸಭೆಗಳು ಮುಕ್ತಾಯವಾಗಿದೆ. ಕಾರ್ಯಕರ್ತರ ಮನೆಗಳ ಮೇಲೆ ಪಕ್ಷದ ಧ್ವಜಾರೋಹಣ ಕಾರ್ಯಕ್ರಮದ ಮೂಲಕ ನಮ್ಮ ಮನೆ ಬಿಜೆಪಿ ಮನೆ ಆರಂಭವಾಗಿದೆ. ಪಕ್ಷ ಮತದಾರರನ್ನು ತಲುಪಲು ಎಲ್ಲಾ ರೀತಿಯಲ್ಲಿ ಕಾರ್ಯೋನ್ಮುಖವಾಗಿದೆ ಎಂದರು.

ಚಿಕ್ಕಮಗಳೂರು ನಗರದಲ್ಲಿ 24ಗಿ7 ಕುಡಿಯುವ ನೀರು ನೀಡುವ ವ್ಯವಸ್ಥೆಗಾಗಿ ಈಗಾಗಲೇ ಅಗೆದಿರುವ ರಸ್ತೆಗಳನ್ನು ಮನೆ ಸಂಪರ್ಕ ಕಲ್ಪಿಸಿದಾಕ್ಷಣ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ಈಗ ಈ ರಸ್ತೆಗಳನ್ನು ದುರಸ್ತಿ ಮಾಡಿದರೆ ಮತ್ತೆ ಮನೆಗೆ ಸಂಪರ್ಕ ನೀಡುವಾಗ ಅಗೆಯಬೇಕಾಗುತ್ತದೆ ಎಂದು ಶಾಸಕರು ತಿಳಿಸಿದರು.

ಈಗಾಗಲೇ ಗುತ್ತಿಗೆದಾರರಿಗೆ ನಗರದಲ್ಲಿ ಸಾಧ್ಯವಾದಷ್ಟು ಜೆಸಿಬಿ ಬಳಸದೆ ಕಟಿಂಗ್‌ ಮಿಷನ್‌ ಬಳಸಲು ಸೂಚಿಸಲಾಗಿದೆ. ಸಣ್ಣ ವೈಬ್ರೇಟರ್‌ ಬಳಸಲು ಹೇಳಲಾಗಿದೆ. ಆದಷ್ಟು ಬೇಗ ಕಾಮಗಾರಿಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ನೂತನ ಜಿಲ್ಲಾಧಿಕಾರಿಗಳಿಗೂ ಆಗಾಗ ಪ್ರಗತಿ ಬಗ್ಗೆ ಸಭೆ ನಡೆಸಿ ಕಾಮಗಾರಿ ತ್ವರಿತ ಗತಿಯಲ್ಲಿ ನಡೆಯುವಂತೆ ನೋಡಿಕೊಳ್ಳಬೇಕೆಂದು ಹೇಳಲಾಗಿದೆ ಎಂದರು. ಈ ಕಾಮಗಾರಿಯನ್ನು 2020ರ ಮೇ ಅಥವಾ ಜೂನ್‌ ತಿಂಗಳಲ್ಲಿ ಮುಗಿಸಬೇಕೆಂಬ ಗುರಿ ಹೊಂದಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next