ಬೆಂಗಳೂರು: ಕನ್ನಡ ಸಾಹಿತ್ಯ ಮತ್ತು ನಿಘಂಟು ಸೇವೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪ್ರೊ.ಟಿ.ಆರ್.ಮಹಾದೇವಯ್ಯ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ಕಡೆಗಣಿಸಿರುವುದು ಸರಿಯಲ್ಲ ಎಂದು ಹಿರಿಯ ಸಂಶೋಧಕ ಚಿದಾನಂದಮೂರ್ತಿ ಬೇಸರ ವ್ಯಕ್ತಪಡಿಸಿದ್ದಾರೆ.
ಭಾನುವಾರ ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ವಚನ ಜ್ಯೋತಿ ಬಳಗದಿಂದ ಹಮ್ಮಿಕೊಂಡಿದ್ದ ನಿಘಂಟು ತಜ್ಞ ಪ್ರೊ.ಟಿ.ಆರ್.ಮಹಾದೇವಯ್ಯ ಅವರಿಗೆ “ವಚನ ನುಡಿ ನಮನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕನ್ನಡ ನಿಘಂಟು ರಚನೆಯಲ್ಲಿ ಸೇವೆ ಸಲ್ಲಿಸಿರುವ ಮಹಾದೇವರಯ್ಯ ನಿಧನರಾದ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಂತಾಪವನ್ನೂ ಸಲ್ಲಿಸಲಿಲ್ಲ. ಇದು ಸಾಹಿತ್ಯ ಕ್ಷೇತ್ರಕ್ಕೆ ಮಾಡಿದ ಅಪಮಾನ ಎಂದು ಹೇಳಿದರು.
ತನ್ನ ತಪ್ಪು ಅರಿತುಕೊಂಡು ಪರಿಷತ್ತು ಸಂತಾಪ ಸಭೆ ನಡೆಸುವ ಬದಲಿವೆ, ಅರ್ಥಪೂರ್ಣವಾಗಿ ಮಹಾದೇವಯ್ಯ ಅವರ ವಿಚಾರಗಳ ಕುರಿತು ಗೋಷ್ಠಿ ನಡೆಸಬೇಕು. ಅವರು ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಕೊಡುಗೆಗಳನ್ನು ಸ್ಮರಿಸಬೇಕು ಎಂದು ಅವರು, ಮಹಾದೇವಯ್ಯ ಬರೆದ ಚಿಂತನಾ-76 ಕೃತಿಯಲ್ಲಿ ಧರ್ಮದ ಪರಿಕಲ್ಪನೆ, ಆಧುನಿಕ ಜೀವನ ಶೈಲಿಯನ್ನು ಅತ್ಯಂತ ಸರಳವಾಗಿ ಬರೆದಿದ್ದಾರೆ. ನಿನ್ನೆ, ಇಂದು-ನಾಳೆ ಪರಿಕಲ್ಪನೆಯನ್ನು ಅವರ ಬರಹದ ಮೂಲಕ ತಿಳಿಸಿದ್ದಾರೆ ಎಂದರು.
ಬೇಲಿಮಠದ ಶಿವರುದ್ರಸ್ವಾಮಿ ಮಾತನಾಡಿ, ನಾವು ಬದುಕುತ್ತಿರುವ ವ್ಯವಸ್ಥೆ ಹೇಗಿದೆ, ಅದು ಹೇಗಿರಬೇಕು ಎಂಬ ಅಂತರ್ ಲಕ್ಷವನ್ನಿಟ್ಟುಕೊಂಡು ಬದುಕುವುದು ಸಾರ್ಥಕವಾದ ಜೀವನ. ಅದೇ ರೀತಿ ಪ್ರೊ.ಟಿ.ಆರ್.ಮಹಾದೇವಯ್ಯ ಒಂದು ಗುರಿಯನ್ನಿಟ್ಟುಕೊಂಡು ಅದಕ್ಕಾಗಿ ದುಡಿದ ವ್ಯಕ್ತಿ. ಅಕ್ಷರ ಎಂಬುದು ಕಲಿಕೆಯಷ್ಟೇ ಅಲ್ಲ. ಬದುಕಿನಲ್ಲಿ ಯಾವುದು ನಶ್ವರ ಮತ್ತು ಶಾಶ್ವತ ಎಂದೆನಿಸುತ್ತದೆಯೋ ಅದನ್ನು ತಿಳಿಸುತ್ತದೆ.
ಅವಮಾನ, ನೋವು, ಸಂತೋಷ ಎಲ್ಲವನ್ನೂ ಸಕಾರಾತ್ಮಕವಾಗಿ ಸ್ವೀಕರಿಸಿ ಪರಿಪೂರ್ಣವಾದ ಜೀವನವನ್ನು ಮಹಾದೇವಯ್ಯ ನಡೆಸಿದ್ದಾರೆ ಎಂದು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಬಸವ ವೇದಿಕೆ ಅಧ್ಯಕ್ಷ ಡಾ.ಸಿ.ಸೋಮಶೇಖರ್, ತುಮಕೂರು ವಿವಿ ಕುಲಸಚಿವ(ವೌಲ್ಯಮಾಪನ) ಡಾ.ಡಿ.ವಿ.ಪರಶಿವಮೂರ್ತಿ, ಕಿರುತೆರೆ ನಟ ಶಿವಕುಮಾರಾರಾಧ್ಯ, ಬಸವ ವಿದ್ಯಾಭಿವೃದ್ಧಿ ಸಂಘದ ಮಾಜಿ ಅಧ್ಯಕ್ಷ ಎಚ್.ವಿ.ರಾಜಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.