ಮೈಸೂರು: ಕಷ್ಟಪಟ್ಟು, ಶ್ರದ್ದೆಯಿಂದ ಓದಿದರೆ ಸಾಧನೆ ಕಷ್ಟವಲ್ಲ ಎಂಬುದನ್ನು ಚಾಮರಾಜನಗರ ತಾಲೂಕಿನ ನಾಗವಳ್ಳಿ ಗ್ರಾಮದ ಪಿ. ಮಹದೇವಸ್ವಾಮಿ ಸಾಧಿಸಿ ತೋರಿಸಿದ್ದಾರೆ.
ಓದುವ ಹಂಬಲವಿದ್ದರೂ ಸೂಕ್ತ ಸೌಲಭ್ಯಗಳಿಲ್ಲದೆ, ಬಿಡುವಿನ ವೇಳೆಯಲ್ಲಿ ಗಾರೆ ಕೆಲಸ, ಪೇಂಟಿಂಗ್ ಮಾಡಿಕೊಂಡು ಓದಿ, 14 ಚಿನ್ನದ ಪದಕ ಹಾಗೂ 3 ನಗದು ಬಹುಮಾನವನ್ನು ಮೈಸೂರು ವಿಶ್ವವಿದ್ಯಾಲಯದ 102ನೇ ಘಟಿಕೋತ್ಸವದಲ್ಲಿ ಪಡೆದುಕೊಂಡಿದ್ದಾರೆ.
ನಾಗವಳ್ಳಿ ಗ್ರಾಮದ ದಿ.ಪುಟ್ಟಬಸವಯ್ಯ ಮತ್ತು ನಾಗಮ್ಮ ಅವರ ಪುತ್ರ, ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದ ವಿದ್ಯಾರ್ಥಿ ಪಿ.ಮಹದೇವಸ್ವಾಮಿ ಅವರ ತಂದೆ 20 ವರ್ಷದ ಹಿಂದೆಯೇ ಮೃತಪಟ್ಟಿದ್ದರು. ತಂದೆ ನಿಧನಾ ನಂತರ ತಾಯಿ ಹಾಗೂ ಅಣ್ಣ ಕುಟುಂಬದ ಜವಾಬ್ದಾರಿ ಹೊತ್ತುಕೊಂಡರು. ಈ ಸಮಯದಲ್ಲಿ ಕಾಲೇಜಿಗೆ ಸೇರಿದ ಮಹದೇವಸ್ವಾಮಿ ರಜೆ ದಿನಗಳಲ್ಲಿ ಗಾರೆ ಕೆಲಸ, ಕೂಲಿ ಕೆಲಸ ಮಾಡುತ್ತಿದ್ದರು. ಎಂಎ ಕನ್ನಡದಲ್ಲಿ 2200 ಅಂಕಗಳಿಗೆ 1963 ಅಂಕ ಪಡೆದು, ಸಾಧಿಸುವ ಛಲವಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ನಿರೂಪಿಸಿದ್ದಾರೆ.
14 ಚಿನ್ನದ ಪದಕ ಬಂದಿರುವುದು ತುಂಬಾ ಖುಷಿಯಾಗಿದೆ. ನನ್ನ ಈ ಸಾಧನೆಗೆ ಪೋಷಕರು, ಅಧ್ಯಾಪಕರೇ ಕಾರಣ. ಕೆ-ಸೆಟ್ ಪಾಸ್ ಆಗಿದೆ. ಪಿಎಚ್‌ಡಿ ಮಾಡುತ್ತೇನೆ. ಯುಪಿಎಸ್ಸಿ, ಕೆಪಿಎಸ್ಸಿ ಪರೀಕ್ಷೆ ತೆಗೆದುಕೊಂಡು ಒಳ್ಳೆಯ ಉದ್ಯೋಗ ಪಡೆಯಬೇಕೆಂಬ ಆಸೆಯಿದೆ. ಯುಪಿಎಸ್ಸಿ ಪರೀಕ್ಷೆ ಕಠಿಣವಾಗಿರುವುದರಿಂದ ಉಚಿತವಾಗಿ ತರಬೇತಿ ಸಿಕ್ಕರೆ ಅನುಕೂಲವಾಗುತ್ತದೆ.
–ಪಿ.ಮಹದೇವಸ್ವಾಮಿ, ಚಿನ್ನದ ಪದಕ ವಿಜೇತ ವಿದ್ಯಾರ್ಥಿ.
ನನ್ನ ಪತಿ 20 ವರ್ಷದ ಹಿಂದೆಯೇ ಮೃತಪಟ್ಟರು. 6 ಮಕ್ಕಳನ್ನು ಸಾಕುವ ಜವಾಬ್ದಾರಿ ನನ್ನ ಮೇಲೆ ಬಿತ್ತು. ನಮಗೆ ಯಾರ ಬೆಂಬಲವೂ ಇರಲಿಲ್ಲ. ಕೂಲಿ ಕೆಲಸ ಮಾಡಿ ಅವರನ್ನು ಸಾಕಿದ್ದೇನೆ. ಅವರೂ ಅಷ್ಟೇ ಕಷ್ಟಪಟ್ಟು ಓದಿದ್ದಾರೆ. ಮಹದೇವಸ್ವಾಮಿ ಓದಿನೊಂದಿಗೆ ಗಾರೆ ಕೆಲಸವನ್ನೂ ಮಾಡುತ್ತಿದ್ದ. ಬೆಳಗ್ಗೆ 4 ಗಂಟೆಗೇ ಎದ್ದು ಓದುತ್ತಿದ್ದ. ಕಷ್ಟ ಬಿದ್ದಿರುವುದಕ್ಕೆ ಇಂದು ಈ ಸಾಧನೆ ಮಾಡಿದ್ದಾನೆ. ಇದೇ ರೀತಿ ಓದಿ ತಹಶೀಲ್ದಾರ್ ಆಗಲಿ.
–ನಾಗಮ್ಮ, ಚಿನ್ನದ ಪದಕ ವಿಜೇತ ಮಹದೇವಸ್ವಾಮಿ ತಾಯಿ.