ಬೆಂಗಳೂರು: ಗೋವಾದಲ್ಲಿ ಮೈತ್ರಿಕೂಟ ಅಧಿಕಾರ ಹಿಡಿಯುವುದು ಬಹುತೇಕ ಖಚಿತವಾಗಿರುವುದರೊಂದಿಗೆ ಎರಡು ರಾಜ್ಯಗಳ ಮಧ್ಯೆ ನಡೆಯುತ್ತಿರುವ ಮಹದಾಯಿ ನದಿ ನೀರು ಹಂಚಿಕೆ ವಿವಾದ ಇದೀಗ ಮತ್ತಷ್ಟು ಕಗ್ಗಂಟಾಗುವ ಸಾಧ್ಯತೆಯಿದೆ. ಈ ಬಾರಿ ಬಿಜೆಪಿ ಅಥವಾ ಕಾಂಗ್ರೆಸ್ ಏಕಾಂಗಿಯಾಗಿ ಸರ್ಕಾರ ರಚಿಸಬಹುದೆಂಬ ನಿರೀಕ್ಷೆಯನ್ನು ಅಲ್ಲಿನ ಮತದಾರರು ಹುಸಿಗೊಳಿಸಿದ್ದಾರೆ. ಇದರ ಪರಿಣಾಮ ಹೊಸ ಸರ್ಕಾರ ಬಂದ ಕೂಡಲೇ ಮಹಧಿದಾಯಿ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಕ್ರಮ ಕೈಗೊಳ್ಳುವುದಾಗಿ ಈ ಹಿಂದೆ ಭರವಸೆ ನೀಡಿರುವ ರಾಜ್ಯ ಬಿಜೆಪಿ ನಾಯಕರನ್ನು ಈ ಬೆಳವಣಿಗೆ ಇಕ್ಕಟ್ಟಿಗೆ ಸಿಲುಕಿಸಿದೆ.
ಗೋವಾದಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಸರ್ಕಾರ ರಚನೆಗೆ ಮುಂದಾಗಿರುವುದರಿಂದ ಇದೀಗ ವಿವಾದ ಬಗೆಹರಿಸುವುದು ರಾಜ್ಯ ಬಿಜೆಪಿ ನಾಯಕರ ಹೆಗಲೇರಿದೆ. ಕೇಂದ್ರದಲ್ಲೂ ಬಿಜೆಪಿ ನೇತೃತ್ವದ ಸರ್ಕಾರ ಇರುವುದರಿಂದ ಪ್ರಧಾನಿ ಮತ್ತು ಗೋವಾ ಸಿಎಂ ಮನವೊಲಿಸಿ ಮಾತುಕತೆಗೆ ವೇದಿಕೆ ಸಿದ್ಧಪಡಿಸುವ ಜವಾಬ್ದಾರಿ ರಾಜ್ಯದ ಬಿಜೆಪಿ ನಾಯಕರ ಮೇಲಿದೆ. ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ, ಪರಿಸ್ಥಿತಿ ಭಿನ್ನವಾಗಲಾರದು. ಆ ಪಕ್ಷ ಸಹ ಮಾತುಕತೆ ಮೂಲಕ ವಿವಾದ ಬಗೆಹರಿಸಲು ಒಪ್ಪುತ್ತಿಲ್ಲ.
ಚುನಾವಣೆ ಆತಂಕ: ಮುಂದಿನ ವರ್ಷ ರಾಜ್ಯ ವಿಧಾನಸಭೆ ಚುನಾವಣೆ ಬರುತ್ತಿರುವುದರಿಂದ ಅದಕ್ಕೆ ಮುನ್ನ ವಿವಾದ ಬಗೆಹರಿಸದಿದ್ದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಮೇಲೆ ದುಷ್ಪರಿಣಾಮ ಬೀರುವ ಆತಂಕ ಕಾಣಿಸಿ ಕೊಂಡಿದೆ. ಗೋವಾ ಮತ್ತು ಕೇಂದ್ರದ ಜತೆ ಚರ್ಚಿಸಿ ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳಲು ವೇದಿಕೆ ಸಿದ್ಧಪಡಿಸುಧಿತ್ತೇವೆಂದು ಹೇಳಿದ್ದ ರಾಜ್ಯ ಬಿಜೆಪಿ ನಾಯಕರು ಹೊಸ ರಾಜಕೀಯ ಬೆಳವಣಿಗೆಯಿಂದ ಬೆಚ್ಚಿ ಬೀಳುವಂತಾಗಿದೆ.
ಮಾತುಕತೆ ಯತ್ನ ವಿಫಲ: ಕಳಸಾ-ಬಂಡೂರಿ ನಾಲಾ ಯೋಜನೆಗೆ ಅನುಕೂಲವಾಗುವಂತೆ ಮಹದಾಯಿ ನದಿಯಿಂದ 7.65 ಟಿಎಂಸಿ ನೀರು ಬಿಡುಗಡೆಗೆ ಕೋರಿ ರಾಜ್ಯ ಮಹದಾಯಿ ನ್ಯಾಯಾಧಿಕರಣದ ಮುಂದೆ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿತ್ತು. ಅಲ್ಲದೆ, ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ನ್ಯಾಯಾಧಿಕರಣ ಸಲಹೆ ಮಾಡಿತ್ತು. ಅದರಂತೆ ಸಿಎಂ ಸಿದ್ದರಾಮಯ್ಯ ಅವರು ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳಲು ಸಹಕರಿಸುವಂತೆ 2016ರ ಸೆಪ್ಟೆಂಬರ್‌ನಲ್ಲಿ ಗೋವಾದ ಆಗಿನ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಶೇಕರ್ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಪತ್ರ ಬರೆದಿದ್ದರು. ಅಲ್ಲದೆ, ಕೇಂದ್ರ ಸರ್ಕಾರಕ್ಕೂ ಪತ್ರ ಬರೆದು ಮೂರೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಅಕ್ಟೋಬರ್‌ನಲ್ಲಿ ದೇವೇಂದ್ರ ಫಡ್ನವಿಸ್ ಸಭೆ ಕರೆದಿದ್ದರಾದರೂ ಕೊನೇ ಕ್ಷಣದಲ್ಲಿ ಲಕ್ಷ್ಮೀಕಾಂತ್ ಪರ್ಶೇಕರ್ ಸಭೆಯಲ್ಲಿ ಭಾಗವಹಿಸಲು ನಿರಾಕರಿಸಿದ್ದರಿಂದ ಸಭೆ ರದ್ದಾಗಿತ್ತು. ಈ ಸಂದರ್ಭದಲ್ಲಿ ರಾಜ್ಯದ ಬಿಜೆಪಿ ನಾಯಕರು ಪ್ರತಿಕ್ರಿಯಿಸಿ, ಗೋವಾ ವಿಧಾನಸಭೆ ಚುನಾವಣೆ ಮುಗಿದ ಬಳಿಕ ನಾವೇ ಮುಂದೆ ನಿಂತು ಮಾತುಕತೆ ಮೂಲಕ ವಿವಾದ ಬಗೆಹರಿಸಲು ವೇದಿಕೆ ಸಿದ್ಧಪಡಿಸುವುದಾಗಿ ಭರವಸೆ ಕೊಟ್ಟಿದ್ದರು. ಆದರೆ, ಈಗ ಮೈತ್ರಿಕೂಟದ ಸರ್ಕಾರ ರಚನೆಯಾಗುವ ಹೊಸ್ತಿಲಲ್ಲಿ ಇರುವುದರಿಂದ ಭರವಸೆ ಈಡೇರುವ ಬಗ್ಗೆ ಬಿಜೆಪಿ ನಾಯಕರಿಗೇ ಅನುಮಾನವಿದೆ.
ಏನಿದು ನಾಲಾ ಯೋಜನೆ?: ಗದಗ, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳ ನೀರಿನ ಸಮಸ್ಯೆ ಬಗೆಹರಿಸಲು ಮಹದಾಯಿ ನದಿಯಿಂದ ಕಳಸಾ ಮತ್ತು ಬಂಡೂರಿ ನಾಲಾ ಮೂಲಕ 7.65 ಟಿಎಂಸಿ ನೀರು ಹರಿಸುವ ಯೋಜನೆ ಇದಾಗಿದೆ. ಮಹದಾಯಿ ನದಿ ಮೂಲಕ ವ್ಯರ್ಥವಾಗಿ ಸಮುದ್ರ ಸೇರುವ ನೀರನ್ನು ಬಳಸಿಕೊಂಡು ಈ ಯೋಜನೆ ಜಾರಿಗೆ ತರಲು ತೀರ್ಮಾನಿಸಿ ಕಾಮಗಾರಿ ಆರಂಭಿಸಲಾಗಿತ್ತು. ಆದರೆ, ಗೋವಾ ಸರ್ಕಾರ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಯೋಜನೆ ನನೆಗುದಿಗೆ ಬಿದ್ದಿದೆ.
ಸಮಸ್ಯೆ ಜಟಿಲವಾಗಿದ್ದೇಕೆ?
ಗೋವಾದ ಭಾವಿ ಮುಖ್ಯಮಂತ್ರಿ ಎಂದೇ ಬಿಂಬಿಸಲಾಗಿರುವ ಮನೋಹರ್ ಪರಿಕ್ಕರ್ ಮೊದಲಿನಿಂದಲೂ ಮಹದಾಯಿ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಲು ವಿರೋಧಿಸುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಕಳೆದ ಅಕ್ಟೋಬರ್‌ನಲ್ಲಿ ಮಾತುಕತೆ ರದ್ದಾಗಿತ್ತು. ಜತೆಗೆ ಈಗ ಅಲ್ಲಿ ಬಿಜೆಪಿ ಸರ್ಕಾರಕ್ಕೆ ಬೆಂಬಲ ಸೂಚಿಸುತ್ತಿರುವ ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷ (ಎಂಜಿಪಿ) ಹಾಗೂ ಗೋವಾ ಫಾರ್ವರ್ಡ್ ಪಕ್ಷ (ಜಿಎಫ್ಪಿ) ಕೂಡ ಮಾತುಕತೆಗೆ ಸಿದ್ಧವಿಲ್ಲ. ಹೀಗಾಗಿ ಸರ್ಕಾರ ಉಳಿಸಿಕೊಳ್ಳಬೇಕಾದರೆ ಗೋವಾ ಬಿಜೆಪಿ ಮಿತ್ರಪಕ್ಷಗಳ ಮಾತು ಕೇಳಲೇಬೇಕಾದ ಸ್ಥಿತಿಯಲ್ಲಿದೆ. ಇನ್ನೊಂದೆಡೆ, ಅಲ್ಲಿ ಅತಿ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ಕೂಡ ಮಾತುಕತೆಗೆ ವಿರೋಧ ವ್ಯಕ್ತಪಡಿಸುತ್ತಿದೆ. ಒಂದು ವೇಳೆ ಈ ಪಕ್ಷ ಅಧಿಕಾರಕ್ಕೆ ಬಂದರೂ ಮಹದಾಯಿ ಬಿಕ್ಕಟ್ಟು ಬಗೆಹರಿಯದು. ಹಿಂದೆ ಮಾತುಕತೆ ಮೂಲಕ ಮಹದಾಯಿ ವಿವಾದ ಬಗೆಹರಿಸಿಕೊಳ್ಳಬಾರದೆಂಬ ನಿರ್ಣಯವನ್ನು ಅಲ್ಲಿನ ವಿಧಾನಸಭೆಯಲ್ಲಿ ಮಂಡಿಸಿದ್ದ ಕಾಂಗ್ರೆಸ್ ಅದು ಅಂಗೀಕಾರವಾಗುವಂತೆ ನೋಡಿಕೊಂಡಿತ್ತು. ಒಂದು ವೇಳೆ ಬಿಜೆಪಿ ವರಿಷ್ಠರ ಮಾತಿನಂತೆ ಗೋವಾದ ಬಿಜೆಪಿ ಮಾತುಕತೆಗೆ ಒಪ್ಪಿಕೊಂಡರೂ ವಿಧಾನಸಭೆಯಲ್ಲಿ ಈ ಹಿಂದೆ ಅಂಗೀಕಾರವಾಗಿದ್ದ ನಿರ್ಣಯಕ್ಕೆ ಪ್ರತಿಯಾಗಿ ಮತ್ತೂಂದು ನಿರ್ಣಯ ಕೈಗೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಹಕ್ಕುಚ್ಯುತಿ ಆತಂಕವಿದೆ. ಆದರೆ, ಮಾತುಕತೆ ನಿರ್ಣಯ ಕೈಗೊಳ್ಳಲು ಮುಂದಾದರೆ ಕಾಂಗ್ರೆಸ್ ಜತೆಗೆ ಮಿತ್ರಪಕ್ಷಗಳೂ ತಿರುಗಿ ಬೀಳುವ ಸಾಧ್ಯತೆ ಇದೆ.
ಕಾಂಗ್ರೆಸ್ ಮತ್ತು ಬಿಜೆಪಿ ಒಂದಾಗಿ ಕೆಲಸ ಮಾಡಿದರೆ ಮಾತ್ರ ಮಹದಾಯಿ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಸಾಧ್ಯ. ಪರ್ರಿಕರ್ ಮನವೊಲಿಸಲು ಬಿಜೆಪಿ ಪ್ರಯತ್ನಿಸಲಿದೆ.
– ಜಗದೀಶ ಶೆಟ್ಟರ್, ವಿಧಾನಸಭೆ ಪ್ರತಿಪಕ್ಷ ನಾಯಕ