Advertisement

ಮಹದಾಯಿ; ಮತದಾನ ಬಹಿಷಾರ ಎಚ್ಚರಿಕೆ; ಸಭೆಯಲ್ಲಿ ಒಮ್ಮತದ ನಿರ್ಣಯ

01:47 PM Mar 06, 2024 | Team Udayavani |

ಉದಯವಾಣಿ ಸಮಾಚಾರ
ಧಾರವಾಡ: ಲೋಕಸಭಾ ಚುನಾವಣಾ ಘೋಷಣೆಗೂ ಮುನ್ನ ಮಹದಾಯಿ ಯೋಜನೆಗೆ ಚಾಲನೆ ದೊರೆಯದಿದ್ದಲ್ಲಿ ಲೋಕಸಭಾ ಚುನಾವಣೆ ಮತದಾನ ಬಹಿಷ್ಕರಿಸಲು ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರಕ್ಕೆ ಕುಡಿವ ನೀರು ಪೂರೈಕೆ ಮಾಡುವ ಅಮ್ಮಿನಬಾವಿಯಲ್ಲಿರುವ ಮಲಪ್ರಭಾ ನೀರಿನ ಜಾಕ್‌ ವೆಲ್‌ ಬಂದ್‌ ಮಾಡಲು ರೈತ ಹೋರಾಟಗಾರರು ತೀರ್ಮಾನಿಸಿದ್ದಾರೆ.

Advertisement

ನಗರದಲ್ಲಿ ಮಹದಾಯಿಗಾಗಿ ಮಹಾವೇದಿಕೆ ವತಿಯಿಂದ ನಡೆದ ನಾಲ್ಕು ಜಿಲ್ಲೆಗಳ 9 ತಾಲೂಕಿನ ಮಹದಾಯಿ ಮತ್ತು ಕಳಸಾ-ಬಂಡೂರಿ ಹೋರಾಟಗಾರರ, ರೈತರ ಚಿಂತನಾ ಸಭೆಯಲ್ಲಿ ಮಹದಾಯಿ ಜಾರಿಗಾಗಿ ಹೋರಾಟದ ರೂಪುರೇಷೆ ಬಗ್ಗೆ ಚರ್ಚೆ ಕೈಗೊಂಡು ಒಮ್ಮತದ ನಿರ್ಧಾರ ಪ್ರಕಟಿಸಲಾಯಿತು.

ಮೊದಲ ಹಂತದಲ್ಲಿ ಹು-ಧಾಕ್ಕೆ ನೀರು ಪೂರೈಕೆ ಮಾಡುವ ಅಮ್ಮಿನಬಾವಿಯಲ್ಲಿರುವ ಮಲಪ್ರಭಾ ನೀರಿನ ಜಾಕ್‌ವೆಲ್‌ ಬಂದ್‌ ಮಾಡಲು ನಿರ್ಧರಿಸಲಾಗಿದ್ದು, ಇದರ ಮುಂದಿನ ಭಾಗವಾಗಿ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ, ಅಸಹಕಾರ ಚಳವಳಿ, ತೆರಿಗೆ ತುಂಬದಿರುವುದು ಸೇರಿದಂತೆ ದೆಹಲಿ ಮಾದರಿಯಲ್ಲಿ ಹೋರಾಟ ಕೈಗೊಳ್ಳಲು ನಿರ್ಧರಿಸಲಾಯಿತು. ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸಿದರೂ, ಜೈಲಿಗೆ ಕಳುಹಿಸಿದರೂ ಜಗ್ಗದೇ ಹೋರಾಟ ಮಾಡಲು ನಿರ್ಣಯ ಕೈಗೊಂಡರು.

ಹೋರಾಟಗಾರ ಬಸವರಾಜ ಸಾಬಳೆ ಮಾತನಾಡಿ, ಕೇಂದ್ರದಲ್ಲಿ ಮಾತ್ರವಲ್ಲದೇ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿ ಆಡಳಿತ ಇದ್ದಾಗಲೂ ಮಹದಾಯಿ ಯೋಜನೆ ಜಾರಿಗೆ ತರದೇ ಇರುವುದು ಈ ಭಾಗದ ಜನರ ದುರಂತ. ರಾಜಕಾರಣಿಗಳು ಜನರ ಭಾವನೆಗಳೊಂದಿಗೆ ಆಟವಾಡುತ್ತಿದ್ದಾರೆ ಎಂದು ದೂರಿದರು.

ಕವಿಸಂ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ರಾಜಕಾರಣಿಗಳು ರೈತರನ್ನು ಹಾಗೂ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ. ಸಾಮಾನ್ಯ ಜನರು ರೊಚ್ಚಿಗೆದ್ದರೆ ಏನಾಗುತ್ತದೆ ಎಂಬುದನ್ನು ರಾಜಕಾರಣಿಗಳಿಗೆ ಬಿಸಿ ಮುಟ್ಟಿಸಬೇಕಿದ್ದು, ಈ ಹೋರಾಟಕ್ಕೆ ಬೆಂಬಲ ಇದೆ ಎಂದರು. ಮಹದಾಯಿ ಹೋರಾಟಗಾರ ಲೋಕನಾಥ ಹೆಬಸೂರ ಮಾತನಾಡಿ, ಮಹದಾಯಿ ವಿಷಯದಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳು ಬರೀ ಸುಳ್ಳಿನ ಮಾಲೆ ಹಾಕಿದ್ದಾರೆಯೇ ಹೊರತು ಪ್ರಾಮಾಣಿಕ ಕೆಲಸ ಮಾಡಿಲ್ಲ. ಹಸಿರು ಟವೆಲ್‌ ಹಾಕಿ ಶಾಸಕರು, ಮಂತ್ರಿಗಳಾದರು.

Advertisement

ಸ್ವಾರ್ಥಕ್ಕಾಗಿ ಯೋಜನೆ ಬಳಸಿಕೊಂಡು ಈಗ ಮತ್ತೊಂದು ಚುನಾವಣೆಗೆ ಮತ ಕೇಳಲು ಬರುತ್ತಿದ್ದಾರೆ. ಅವರಿಗೆ ನಮ್ಮೂರುಗಳಲ್ಲಿ ಬರದಂತೆ, ಭಾಷಣ ಮಾಡಿ ಮತ ಕೇಳುವುದನ್ನು ತಡೆಯುವ ನಿಟ್ಟಿನಲ್ಲಿ ಹೋರಾಟ ಗಟ್ಟಿಗೊಳಿಸಬೇಕು ಎಂದು ಸಲಹೆ ನೀಡಿದರು. ಚಿಂತಕ ಲಕ್ಷ್ಮಣ ಬಕ್ಕಾಯಿ ಮಾತನಾಡಿದರು. ರಾಮದುರ್ಗದ ಕೃಷ್ಣಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಿವಾನಂದ ಪಾಟೀಲ, ಶಂಕರಗೌಡ ಹಾಗೂ ನರಗುಂದ, ನವಲಗುಂದ, ಬೆಳಗಾವಿ ರೈತ ಮುಖಂಡರು ಪಾಲ್ಗೊಂಡಿದ್ದರು.

ಕಳೆದ ಚುನಾವಣೆ ಸಮಯದಲ್ಲಿ ಮಹದಾಯಿ ಬಗ್ಗೆ ಗೆಜೆಟ್‌ ನೋಟಿಫಿಕೇಶನ್‌ ಆಗಿರುವುದಾಗಿ ಬಿಜೆಪಿ ಮುಖಂಡರು ಸಿಹಿ ಹಂಚಿ ವಿಜಯೋತ್ಸವ ಮಾಡಿದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಮನೆ ಎದುರು ಹೋರಾಟ ನಡೆಸಿದಾಗ ಒಂದು ತಿಂಗಳಲ್ಲಿ ಪರಿಸರ ಇಲಾಖೆಯಿಂದ ಪರವಾನಗಿ ಕೊಡಿಸುವುದಾಗಿ ಭರವಸೆ ನೀಡಿದ್ದರು. ಆರು ತಿಂಗಳಾದರೂ ಯೋಜನೆ ಜಾರಿಗೆ ಬರುತ್ತಿಲ್ಲ. ಟೆಂಡರ್‌ ಕರೆಯುತ್ತಿಲ್ಲ. ಹೀಗಾಗಿ ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಸಜ್ಜಾಗಿದ್ದೇವೆ.
ಬಸವರಾಜ ಸಾಬಳೆ, ಹೋರಾಟಗಾರ

ಹುಬ್ಬಳ್ಳಿ-ಧಾರವಾಡಕ್ಕೆ ಕುಡಿವ ನೀರು ಒದಗಿಸುವುದೇ ಮಹದಾಯಿ ಯೋಜನೆ ಪ್ರಮುಖ ಉದ್ದೇಶ. ಅದಕ್ಕಾಗಿ ರೈತರು ಹೋರಾಟ ಮಾಡುತ್ತಿದ್ದು, ಅವಳಿನಗರ ಜನತೆಯಿಂದ ಹೋರಾಟಕ್ಕೆ ಸ್ಪಂದನೆಯೇ ಇಲ್ಲವಾಗಿದೆ. ಅವಳಿನಗರದ ಜನತೆ ಹೋರಾಟಕ್ಕೆ ಕೈ ಜೋಡಿಸಿದರೆ ಮಾತ್ರ ಜಾಕ್‌ವೆಲ್‌ ಬಂದ್‌ ಮಾಡುವ ತೀರ್ಮಾನದಿಂದ ಹೊರಬರಲಾಗುವುದು.
ಶಂಕರ ಅಂಬಲಿ, ಅಧ್ಯಕ್ಷ, ಮಹದಾಯಿಗಾಗಿ ಮಹಾವೇದಿಕೆ

Advertisement

Udayavani is now on Telegram. Click here to join our channel and stay updated with the latest news.

Next