ನವಲಗುಂದ: ಮಹದಾಯಿ, ಕಳಸಾ ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ಇಲ್ಲಿನ ಪಕ್ಷಾತೀತ ಹೋರಾಟ ಸಮಿತಿ ನಡೆಸುತ್ತಿರುವ ನಿರಂತರ ಧರಣಿ ಮಂಗಳವಾರ 800ನೇ ದಿನಕ್ಕೆ ಕಾಲಿಟ್ಟಿದ್ದು, ರೈತರು ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಿದರು.
ತಿಂಗಳ ಹಿಂದೆ ಆಮರಣಾಂತ ಉಪವಾಸ ಕೈಗೊಂಡಾಗ ರೈತರ ಸ್ಥಳೀಯ ಮಟ್ಟದ ವಿವಿಧ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದ ಉಪವಿಭಾಗಾಧಿಕಾರಿ ಮಹೇಶ ಕರ್ಜಗಿ ಈವರೆಗೂ ಯಾವುದೇ ಬೇಡಿಕೆ ಈಡೇರಿಸಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪûಾತೀತ ಹೋರಾಟ ಸಮಿತಿ ಅಧ್ಯಕ್ಷ ಲೋಕನಾಥ ಹೆಬಸೂರ ಮಾತನಾಡಿ, ಆಮರಣ ಉಪವಾಸ ಸತ್ಯಾಗ್ರಹ ನಡೆಸುವಾಗ ಒಮ್ಮೆ ಸಚಿವ ವಿನಯ ಕುಲಕರ್ಣಿ ಅವರು ಬಂದು ಭರವಸೆ ನೀಡಿ ಉಪವಾಸ ಅಂತ್ಯಗೊಳಿಸಿದ್ದರು. ಮತ್ತೂಮ್ಮೆ ಉಪವಾಸ ಕೈಗೊಂಡಾಗ ಉಪವಿಭಾಗಾಧಿಕಾರಿ ಮಹೇಶ ಕರ್ಜಗಿ ಭರವಸೆ ನೀಡಿ ಹೋಗಿದ್ದರು.
ಆದರೆ ಈವರೆಗೂ ನಮ್ಮ ಯಾವುದೇ ಬೇಡಿಕೆ ಈಡೇರಿಸಿಲ್ಲ ಎಂದು ಕಿಡಿಕಾರಿದರು. ರೈತರ ಬೆಳೆಹಾನಿ ಸಮಸ್ಯೆ ಕೂಡಲೇ ಬಗೆಹರಿಸುವಂತೆ ಮುಖ್ಯಮಂತ್ರಿಗಳೇ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದರೂ ಸ್ಪಂದಿಸುತ್ತಿಲ್ಲ. ಉಪವಿಭಾಗಾಧಿಕಾರಿಗಳು ಎಂಟು ದಿನದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿಗೆ ಸಭೆ ಕರೆದು ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದ್ದರು.
ಆದರೀಗ ವಿನಾಕಾರಣ ಕಾಲಹರಣ ಮಾಡುತ್ತಿದ್ದಾರೆ. ಸಂಜೆಯೊಳಗೆ ರೈತರ ಸಭೆ ಕರೆಯುವ ದಿನಾಂಕ ಗೊತ್ತು ಪಡಿಸದೆ ಹೋದರೆ ಮತ್ತೆ ನಾಳೆ ರಸ್ತೆ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದರು. ರೈತ ಮುಖಂಡ ರಮೇಶ ನವಲಗುಂದ, ಡಿ.ವಿ. ಕುರಹಟ್ಟಿ, ಮಲ್ಲೇಶ ಉಪ್ಪಾರ, ರವಿಗೌಡ ಪಾಟೀಲ, ಸಿದ್ದಪ್ಪ ಜೆಟ್ಟೆನವರ, ಬರಮಪ್ಪ ಕಾತರಕಿ ಇತರರಿದ್ದರು.
ಪ್ರಯಾಣಿಕರ ಪರದಾಟ: ಎರಡು ಗಂಟೆಗಳ ಕಾಲ ರಸ್ತೆತಡೆ ನಡೆಸಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು. ಅಲ್ಲದೇ ಪ್ರಯಾಣಿಕರು ಮತ್ತು ರೈತ ಹೋರಾಟಗಾರರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಒಂದು ಕಿಮೀನಷ್ಟು ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.