ಪಣಜಿ: ಮಹದಾಯಿ ನದಿ ನೀರು ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಗೋವಾ ಸರ್ಕಾರ ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಮುಂದಾಗಿದೆ. ಕರ್ನಾಟಕಕ್ಕೆ ಮಹದಾಯಿ ನದಿ ನೀರನ್ನು ತಿರುಗಿಸಲು ಅನುಮತಿ ನೀಡಿರುವ ಮಹದಾಯಿ ನ್ಯಾಯಾಧಿಕರಣ ತೀರ್ಪನ್ನು ಪ್ರಶ್ನಿಸಿ ಗೋವಾ ಸರ್ಕಾರ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ವಿಶೇಷ ಅರ್ಜಿ ಸಲ್ಲಿಸಲಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಗೋವಾ ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದಾರೆ.
ಮಹದಾಯಿ ನದಿ ನೀರನ್ನು ಮಲಪ್ರಭಾ ಜಲಾನಯನ ಪ್ರದೇಶಕ್ಕೆ ತಿರುಗಿಸುವುದರ ವಿರುದ್ಧ ತಡೆಯಾಜ್ಞೆಗಾಗಿ ಕರ್ನಾಟಕದ ವಿರುದ್ಧ ಈಗಾಗಲೇ ನ್ಯಾಯಮಂಡಳಿ ಮುಂದೆ ಅಸಹಕಾರ ಅರ್ಜಿ ಸಲ್ಲಿಸಿದೆ. ಕರ್ನಾಟಕವು ನ್ಯಾಯಮಂಡಳಿ ತೀರ್ಪು ಉಲ್ಲಂಘನೆ ವಿರುದ್ಧ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ನ್ಯಾಯಮಂಡಳಿ ಆದೇಶ ಪ್ರಶ್ನಿಸಿ ಶುಕ್ರವಾರ ಸುಪ್ರೀಂಕೋರ್ಟ್‌ನಲ್ಲಿ ಎಲ್‌ಎಲ್‌ಪಿ ದಾಖಲಿಸಲಾಗುವುದು ಎಂದರು.
ಒಂದೆಡೆ ಕರ್ನಾಟಕ ಮಹದಾಯಿ ನದಿ ನೀರನ್ನು ಪಡೆದುಕೊಳ್ಳಲು ಕಳೆದ ಅನೇಕ ವರ್ಷಗಳಿಂದ ಹರಸಾಹಸ ಪಡುತ್ತಿದೆ. ಮಹದಾಯಿ ನದಿ ನೀರು ಲಭಿಸಿದರೆ ಉತ್ತರ ಕರ್ನಾಟಕದ ಹೆಚ್ಚಿನ ಪ್ರಮಾಣದ ನೀರಿನ ದಾಹ ನೀಗಲಿದೆ. ಆದರೆ ಗೋವಾ ಸರ್ಕಾರ ಮಾತ್ರ ಕರ್ನಾಟಕಕ್ಕೆ ಮಹದಾಯಿ ನದಿ ನೀರಿನ ಒಂದು ತೊಟ್ಟು ಕೂಡ ತಿರುಗಿಸಲು ಅವಕಾಶ ನೀಡಬಾರದು ಎಂಬಂತೆ ಸತತ ಹೋರಾಟ ನಡೆಸುತ್ತಲೇ ಇದೆ. ಇದೀಗ ಗೋವಾ ಸರ್ಕಾರ ಕರ್ನಾಟಕದ ವಿರುದ್ಧ ಮತ್ತೆ ಸುಪ್ರೀಂ ಮೆಟ್ಟಿಲೇರಲು ಮುಂದಾಗಿದೆ.
ಗೋವಾದಲ್ಲಿ ನೀರಿನ ಸಮಸ್ಯೆ: ಕಳೆದ ಕೆಲ ವರ್ಷಗಳಿಂದ ಗೋವಾದಲ್ಲಿ ಕುಡಿಯುವ ನೀರು ಸಮರ್ಪಕ ಪೂರೈಕೆಗೆ ಸರ್ಕಾರ ಹರಸಾಹಸ ಪಡುತ್ತಿದೆ. ರಾಜ್ಯದಲ್ಲಿ ತಲೆದೋರುತ್ತಿರುವ ನೀರಿನ ಸಮಸ್ಯೆ ಪರಿಹಾರಕ್ಕೆ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದ ಸರ್ಕಾರ ಹಲವು ಯೋಜನೆ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಮಹದಾಯಿ ನದಿ ನೀರನ್ನು ಕೂಡ ಶೇಕಡಾವಾರು ಪ್ರಮಾಣದಲ್ಲಿ ಕುಡಿಯುವ ನೀರಿಗೆ ಬಳಸಿಕೊಳ್ಳಲು ಯೋಜನೆ ರೂಪಿಸಿದೆ. ಇವೆಲ್ಲ ಕಾರಣಗಳಿಂದ ಗೋವಾ ಸರ್ಕಾರ ಇದೀಗ ಮತ್ತೆ ಮಹದಾಯಿ ನದಿ ನೀರು ಹಂಚಿಕೆ ಪ್ರಕರಣದಲ್ಲಿ ಹೋರಾಟಕ್ಕೆ ಮುಂದಾಗಿದೆ.