ಬೆಂಗಳೂರು: ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ವಾಟಾಳ್ ನಾಗರಾಜ್ ಜನವರಿ 25ರಂದು ಕರೆ ಕೊಟ್ಟಿರುವ ಕರ್ನಾಟಕ ಬಂದ್ ಗೆ ಕನ್ನಡ ಪರ ಸಂಘಟನೆಗಳಲ್ಲಿಯೇ ತೀವ್ರ ವಿರೋಧ ವ್ಯಕ್ತವಾಗಿದೆ.
ಮಹದಾಯಿ ಹೋರಾಟಕ್ಕೆ ಸಂಬಂಧಿಸಿದಂತೆ ನೀಡಿರುವ ಬಂದ್ ವಿಚಾರದಲ್ಲಿ ವಾಟಾಳ್ ನಾಗರಾಜ್ ಬೆಂಬಲಿಗರು ಹಾಗೂ ಕರ್ನಾಟಕ ಸಂಘಟಗಳ ಒಕ್ಕೂಟದ ನಾಗೇಶ್ ನಡುವೆ ನಡೆದಿದೆ ಎನ್ನಲಾದ ಆಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗುವ ಮೂಲಕ ವೈರಲ್ ಆಗಿದೆ.
ಬಂದ್ ವಿಚಾರದಲ್ಲಿ ಕನ್ನಡ ಪರ ಸಂಘಟನೆಗಳಲ್ಲಿ ಭಿನ್ನಮತ ಭುಗಿಲೆದ್ದಿದೆ. ನಾವು ಮಹದಾಯಿ ವಿಚಾರದಲ್ಲಿನ ಹೋರಾಟಕ್ಕೆ ಬೆಂಬಲ ನೀಡುತ್ತೇವೆ. ಆದರೆ ಕರ್ನಾಟಕ ಬಂದ್ ಗೆ ಬೆಂಬಲ ಇಲ್ಲ ಎಂಬುದು ನಾಗೇಶ್ ಹೇಳಿಕೆ.
ವಾಟಾಳ್ ನಾಗರಾಜ್ ಅವರು ತಮ್ಮ ಪ್ರತಿಷ್ಠೆಗಾಗಿ ಬಂದ್ ಕರೆ ಕೊಟ್ಟಿದ್ದಾರೆ. ನಮ್ಮ ಸಂಘಟನೆಗಳ ಜತೆ ಚರ್ಚಿಸದೇ ನಿರ್ಧಾರ ಘೋಷಿಸಿದ್ದಾರೆ. ಇದಕ್ಕೆ ನಮ್ಮ ಬೆಂಬಲ ಇಲ್ಲ ಎಂದು ನಾಗೇಶ್ ತಿಳಿಸಿದ್ದಾರೆ.
ಜನವರಿ 25ರ ಕರ್ನಾಟಕ ಬಂದ್ ಬೆಂಬಲಿಸುವ ಬಗ್ಗೆ ಇನ್ನೂ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಪ್ರವೀಣ್ ಶೆಟ್ಟಿ (ಕರ್ನಾಟಕ ರಕ್ಷಣಾ ವೇದಿಕೆ) ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ವಾಟಾಳ್ ನಾಗರಾಜ್ ಕರೆ ಕೊಟ್ಟಿರುವ ಬಂದ್ ಅನ್ನು ಬೆಂಬಲಸಿವುದಿಲ್ಲ ಎಂದು ಹೇಳುವಷ್ಟು ದೊಡ್ಡವರು ನಾಗೇಶ್ ಅಲ್ಲ ಎಂದು ತಿರುಗೇಟು ನೀಡಿದ್ದಾರೆ.