Advertisement
ಈ ದಿನವನ್ನು ಸಂಕಲ್ಪ ದಿನವನ್ನಾಗಿ ಆಚರಿಸಲು ಹೋರಾಟಗಾರರು ನಿರ್ಧರಿಸಿದ್ದಾರೆ. ಜತೆಗೆ ಸಾಂಕೇತಿಕವಾಗಿ ಬಂದ್ ಆಚರಿಸಿ, ನೀರು ಸಿಗುವವರೆಗೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂಬುದನ್ನು ಸಾಬೀತು ಪಡಿಸಲಿದ್ದಾರೆ.ಸಂಕಲ್ಪ ದಿನಾಚರಣೆ ಹಿನ್ನೆಲೆ ನರಗುಂದ ಬಂದ್ ಆಚರಣೆ ಶಾಂತಿಯುತವಾಗಿ ನಡೆಸಬೇಕು ಎಂದು ಜಿಲ್ಲಾಧಿಕಾರಿ ಮನೋಜ್ ಜೈನ್ ಅವರು ಸ್ಥಳಕ್ಕೆ ಆಗಮಿಸಿ ಹೋರಾಟಗಾರರಿಗೆ ಸೂಚನೆ ನೀಡಿದರು.
ಭಾನುವಾರ 599ನೇ ದಿನದ ಮಹದಾಯಿ, ಕಳಸಾ-ಬಂಡೂರಿ ಹೋರಾಟದ ನಿರಂತರ ಸತ್ಯಾಗ್ರಹದಲ್ಲಿ ಭಾಗಿಯಾದ ರೈತ ಸೇನಾ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಶಂಕರಪ್ಪ ಅಂಬಲಿ ಮಾತನಾಡಿ, ಸರ್ಕಾರಗಳು ಮಹದಾಯಿ ಯೋಜನೆಗೆ ಎಷ್ಟೇ ಅಡ್ಡಿಪಡಿಸಿ, ಕಲ್ಲು ಹಾಕುವ ಕುತಂತ್ರ ನಡೆಸಿದರೂ ನಾವು ಬಗ್ಗುವುದಿಲ್ಲ. ಮಾ.6ರ 600ನೇ ದಿನದಂದು ನೀರು ಪಡೆಯಲು ಹೋರಾಟವನ್ನು ಸಂಕಲ್ಪ ದಿನವಾಗಿ ಆಚರಿಸುತ್ತೇವೆ. ಅಂದು ವೇದಿಕೆಯಲ್ಲಿ ಎಲ್ಲ ಹೋರಾಟಗಾರರು ಹೋರಾಟ ಮುನ್ನಡೆಸುವ ಸಂಕಲ್ಪದ ಪ್ರಮಾಣ ವಚನ ಸ್ವೀಕರಿಸಲಿದ್ದೇವೆ ಎಂದರು. ಕೇಂದ್ರದ ಷಡ್ಯಂತ್ರ:
ರಾಜ್ಯ ಸರ್ಕಾರ ಸಲ್ಲಿಸಿರುವ ಕಸ್ತೂರಿ ರಂಗನ್ ಪರಿಷ್ಕೃತ ವರದಿಯನ್ನು ಕಡೆಗಣಿಸಿರುವ ಕೇಂದ್ರ ಸರ್ಕಾರ ಪಶ್ಚಿಮ ಘಟ್ಟ ಪ್ರದೇಶ ಸಂರಕ್ಷಿತ ಪ್ರದೇಶವೆಂದು ಪರಿಗಣಿಸಿದ್ದು, ಮಹದಾಯಿ ಯೋಜನೆಗೆ ಅಡ್ಡಿಪಡಿಸುವ ಹುನ್ನಾರ ಮಾಡುತ್ತಿದೆ. ಇದು ಕೃಷಿ ಚಟುವಟಿಕೆಯನ್ನು ನಿರ್ಬಂಧಿಧಿಸುವ ಷಡ್ಯಂತ್ರವಾಗಿದೆ ಎಂದು ದೂರಿದರು. ಕಸ್ತೂರಿ ರಂಗನ್ ವರದಿಯನ್ವಯ ಮಹದಾಯಿ ಯೋಜನೆ ಅನುಷ್ಠಾನಗೊಂಡರೆ ಆ ಭಾಗಕ್ಕೆ ಯಾವುದೇ ಧಕ್ಕೆಯಾಗಲಾರದು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೇಂದ್ರದ ಘೋಷಣೆಗೆ ಆಕ್ಷೇಪಣೆ ಸಲ್ಲಿಸಬೇಕು ಎಂದು ಮಹದಾಯಿ ಹೋರಾಟಗಾರರು ಒತ್ತಾಯಿಸಿದರು.