ಬೆಳಗಾವಿ: ಮುಂಬೈ ಕರ್ನಾಟಕದ ನಾಲ್ಕು ಜಿಲ್ಲೆಗಳ 13 ತಾಲೂಕುಗಳ ಜನರ ಕುಡಿಯುವ ನೀರಿಗಾಗಿ ರೂಪಿಸಲಾದ ಕಳಸಾ ಬಂಡೂರಿ ಯೋಜನೆಯನ್ನು ವಿರೋಧಿಸುತ್ತ ಬಂದಿರುವ ಗೋವಾ ಈಗ ಸ್ವತಃ ತಾನೇ ಉಸ್ಗಾಂವ್ ಗಂಜೆಮ್ ಬಳಿ 100 ಕೋಟಿ ರೂ.ವೆಚ್ಚದಲ್ಲಿ ಆಣೆಕಟ್ಟು ನಿರ್ಮಾಣ ಮಾಡಿ ಓಪಾ ನೀರು ಸಂಸ್ಕರಣ ಘಟಕಕ್ಕೆ ನೀರನ್ನು ತಿರುಗಿಸಲು ಮುಂದಾಗಿದೆ.
ಈ ಹೊಸ ಯೋಜನೆಗೆ ಮಂಗಳವಾರ ಗೋವಾದ ಜಲಸಂಪನ್ಮೂಲ ಖಾತೆಯ ಸಚಿವ ವಿನೋದ ಪಾಲೇಕರ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಮಹದಾಯಿ ನದಿಯಿಂದ ನಿತ್ಯ 110 ಎಮ್‌ಎಲ್‌ಡಿ ಕಚ್ಚಾ ನೀರನ್ನು ಎತ್ತಿ ನೀರು ಶುದ್ಧೀಕರಣ ಕೇಂದ್ರಕ್ಕೆ ತಿರುಗಿಸುವ ಯೋಜನೆ ಇದಾಗಿದೆ.
2006ರಲ್ಲಿ ಈ ಯೋಜನೆ ರೂಪಿಸಿದಾಗ 35 ಎಂಎಲ್‌ಡಿ ನೀರನ್ನು ಮಹದಾಯಿಯಿಂದ ಎತ್ತುವ ಉದ್ದೇಶವಿತ್ತು. ಆದರೆ ನವಂಬರ್‌ದಲ್ಲಿ ಗೋವಾದ ವಿವಿಧ ಪ್ರದೇಶಗಳಿಗೆ ಕುಡಿಯುವ ನೀರಿನ ಅಭಾವ ತಲೆದೋರುತ್ತಿರುವ ಹಿನ್ನೆಲೆಯಲ್ಲಿ ವ್ಯರ್ಥವಾಗಿ ಸಮುದ್ರ ಸೇರುವ ನೀರನ್ನು ಬಳಸಲು ಹೊಸ ತಿರುವು ಯೋಜನೆಯನ್ನು ರೂಪಿಸಲಾಗಿದೆ.
ಕಳೆದ ಆ. 14ರಂದು ಮಹದಾಯಿ ನ್ಯಾಯ ಮಂಡಳಿಯು ಗೋವಾಕ್ಕೆ 24 ಟಿಎಮ್‌ಸಿ ನೀರನ್ನು ಹಂಚಿಕೆ ಮಾಡಿದೆ. ಇದಕ್ಕೂ ಮೊದಲೇ ಅದು 9 ಟಿಎಂಸಿ ನೀರನ್ನು ಬಳಸಿಕೊಳ್ಳುತ್ತಿತ್ತು. ಈಗ ಗೋವಾದ ಹೊಸ ಯೋಜನೆಯು ಅದಕ್ಕೆ ಹಂಚಿಕೆಯಾದ ನೀರಿನ ಪರಿಮಿತಿಯೊಳಗೇ ಇದೆಯೊ ಅಥವಾ ಅದನ್ನು ಮೀರಿದೆಯೊ ಎಂಬುದನ್ನು ಕರ್ನಾಟಕ ಸರಕಾರ ಪರಿಶೀಲಿಸಬೇಕು ಎಂದು ಕಳಸಾ ಬಂಡೂರಿ ಹೋರಾಟ ಸಮಿತಿ ಮುಖಂಡ ಅಶೋಕ ಚಂದರಗಿ ಆಗ್ರಹಿಸಿದ್ದಾರೆ.
ನ್ಯಾಯಾಧಿಕರಣದಿಂದ ಕರ್ನಾಟಕಕ್ಕೆ ಹಂಚಿಕೆಯಾದ ಕಳಸಾ ಯೋಜನೆಯ 2.72 ಟಿಎಂಸಿ ನೀರನ್ನು ಬಳಸಿಕೊಳ್ಳಲು ರಾಜ್ಯ ಸರ್ಕಾರ ಇನ್ನೂ ಮುಂದಾಗಿಲ್ಲ. ಅದಕ್ಕೆ ಅವಶ್ಯಕವಾದ ಹಣವನ್ನೂ ಸಹ ಬಜೆಟ್ ನಲ್ಲಿ ಮೀಸಲಿಟ್ಟಿಲ್ಲ. ಈ ಬಗ್ಗೆ ನಮ್ಮ ಭಾಗದ ಜನಪ್ರತಿನಿಧಿಗಳೂ ತುಟಿ ಬಿಚ್ಚಿಲ್ಲ. ಆದರೆ ಗೋವಾ ಸರಕಾರ ಮಾತ್ರ ಮಹಾದಾಯಿ ನೀರನ್ನು ಬಳಸಲು ಮುಂದಾಗಿದೆ ಎಂದು ಅವರು ರಾಜ್ಯ ಸರ್ಕಾರದ ಧೋರಣೆಯನ್ನು ಟೀಕಿಸಿದ್ದಾರೆ.
ಗೋವಾದ ಈ ಹೊಸ ಆಣೆಕಟ್ಟಿನ ಬಗ್ಗೆ ರಾಜ್ಯ ಸರಕಾರ ಮತ್ತು ನ್ಯಾಯವಾದಿಗಳು ಪರಿಶೀಲಿಸಬೇಕು. ಮಹಾದಾಯಿ ನ್ಯಾಯಮಂಡಳಿಯ ತೀರ್ಪಿನ ವಿರುದ್ಧ ಕರ್ನಾಟಕವು ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದು ಆದಷ್ಟು ಬೇಗ ಇಲ್ಲಿನ ಯೋಜನೆಗೆ ಚಾಲನೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.