ದಾವಣಗೆರೆ: ದೇವನಗರಿ ಎಂದೇ ಕರೆಯಲ್ಪಡುವ ದಾವಣಗೆರೆ ಮನೆ, ಶಿವಾಲಯಗಳಲ್ಲಿ ಶುಕ್ರವಾರ ಅತ್ಯಂತ ಭಕ್ತಿ, ಶ್ರದ್ಧಾಪೂರ್ವಕವಾಗಿ ಮಹಾಶಿವರಾತ್ರಿ ಆಚರಿಸಲಾಯಿತು. ಶಿವರಾತ್ರಿಗೆ ಬೇಕಾದ ಹೂವು- ಹಣ್ಣು ಖರೀದಿ ಸಂಜೆಯವರೆಗೆ ಸಹ ಮುಂದುವರೆದಿತ್ತು. ಪ್ರವಾಸಿ ಮಂದಿರ ರಸ್ತೆ, ಹಳೆ ಪಿಬಿ ರಸ್ತೆ, ಗಡಿಯಾರ ಕಂಬ, ಡಾಂಗೇ ಪಾರ್ಕ್, ಮಂಡಿಪೇಟೆ, ಶಾಮನೂರು ರಸ್ತೆ, ವಿನೋಬ ನಗರದ ಮುಖ್ಯ ರಸ್ತೆ… ಹಲವಾರು ಕಡೆ ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳ ಖರೀದಿ ಜೋರಾಗಿತ್ತು.
ಬೆಲೆ ಏರಿಕೆಯ ಬಿಸಿಯ ನಡುವೆಯೂ ಜನರು ಹೂವು-ಹಣ್ಣು ಖರೀದಿಸಿದರು. ಹಬ್ಬಗಳ ಸಾಲಿನಲ್ಲಿ ವಿಶೇಷ ಸ್ಥಾನ ಪಡೆದಿರುವ ಶಿವರಾತ್ರಿ ಅಂಗವಾಗಿ ಗೀತಾಂಜಲಿ ಚಿತ್ರಮಂದಿರ ರಸ್ತೆಯಲ್ಲಿರುವ ಶ್ರೀ ಲಿಂಗೇಶ್ವರ ದೇವಸ್ಥಾನ, ಹೊಂಡದ ವೃತ್ತದ ಸಮೀಪದ ಶ್ರೀ ಪಾತಾಳ ಲಿಂಗೇಶ್ವರ ದೇವಸ್ಥಾನ, ವಿನೋಬ ನಗರ 2ನೇ ಮುಖ್ಯ ರಸ್ತೆಯ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನ, ವಿದ್ಯಾನಗರ ಮುಖ್ಯ ರಸ್ತೆಯಲ್ಲಿರುವ ಶ್ರೀ ಈಶ್ವರ, ಗಣಪತಿ ದೇವಸ್ಥಾನ, ಬಂಬೂ ಬಜಾರ್ ರಸ್ತೆಯಲ್ಲಿರುವ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ, ಜಯದೇವ ವೃತ್ತದಲ್ಲಿರುವ ಶ್ರೀ ಶಂಕರಮಠ, ಹಳೆ ಪಿಬಿ ರಸ್ತೆಯಲ್ಲಿರುವ ಶ್ರೀ ಉಮಾ ಮಹೇಶ್ವರ ದೇವಸ್ಥಾನ, ದೇವರಾಜ ಅರಸು ಬಡಾವಣೆಯಲ್ಲಿರುವ ಶಿವಧ್ಯಾನ ಮಂದಿರದಲ್ಲಿ ರುದ್ರಾಭಿಷೇಕ, ಮಹಾರುದ್ರಾಭಿಷೇಕ, ವಿಶೇಷ ಪೂಜೆ ನಡೆದವು.
ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ದೇವಸ್ಥಾನಕ್ಕೆ ತೆರಳಿದ ಜನರು ದೇವರ ದರ್ಶನ ಪಡೆದು, ವಿಶೇಷ ಪೂಜೆ, ಅಭಿಷೇಕ ಸಲ್ಲಿಸಿದರು. ಹಿರಿಯರು, ಮಕ್ಕಳು, ಮಹಿಳೆಯರು.. ಉರಿ ಬಿಸಿಲ ನಡುವೆಯೂ ಉದ್ದನೆಯ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದುದು ಸಾಮಾನ್ಯವಾಗಿತ್ತು. ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯ ದಾವಣಗೆರೆ ಶಾಖೆಯ ಪದಾಧಿಕಾರಿಗಳು ಶಾಂತಿ ಸದ್ಭಾವನಾ ಯಾತ್ರೆ ನಡೆಸಿದರು.
ಮೋತಿ ವೀರಪ್ಪ ಕಾಲೇಜು ಮೈದಾನದಿಂದ ಪ್ರಾರಂಭವಾದ ಯಾತ್ರೆಯು ಜಿಲ್ಲಾ ಆಸ್ಪತ್ರೆ, ಪಿಜೆ ಬಡಾವಣೆ ಬ್ರಹ್ಮಕುಮಾರಿಸ್ ರಸ್ತೆ, ಸೇಂಟ್ ಪಾಲ್ಸ್ ರಸ್ತೆ, ಚೇತನಾ ರಸ್ತೆ, ಅಂಬೇಡ್ಕರ್ ವೃತ್ತ, ಜಯದೇವ ವೃತ್ತ, ಪ್ರವಾಸಿ ಮಂದಿರ ರಸ್ತೆ, ಮಹಾತ್ಮಗಾಂಧಿ ವೃತ್ತ, ಅಶೋಕ ಚಿತ್ರಮಂದಿರ, ಕೆ.ಆರ್. ರಸ್ತೆ, ಹಗೇದಿಬ್ಬ ವೃತ್ತ, ಹೊಂಡದ ವೃತ್ತದ ಮೂಲಕ ದೇವರಾಜ ಅರಸು ಬಡಾವಣೆಯ ಶಿವಧ್ಯಾನ ಮಂದಿರದಲ್ಲಿ ಮುಕ್ತಾಯಗೊಂಡಿತು.
12 ದ್ವಾದಶ ಜ್ಯೋತಿರ್ಲಿಂಗಗಳು ಒಳಗೊಂಡಂತೆ 21 ಶಿವಲಿಂಗ, ಸ್ತಬ್ದ ಚಿತ್ರಗಳು ಗಮನ ಸೆಳೆದವು. ಮಹಾಶಿವರಾತ್ರಿ ಎಂದರೆ ಜಾಗರಣೆ ಸಾಮಾನ್ಯ. ಜಾಗರಣೆಯ ಹಿನ್ನೆಲೆಯಲ್ಲಿ ಎಲ್ಲಾ ದೇವಾಲಯಗಳಲ್ಲಿ ರಾತ್ರಿಯಿಡೀ ಶಿವನ ದರ್ಶನ, ವಿಶೇಷ ಪೂಜೆ, ಅಭಿಷೇಕ ನಡೆದವು. ಸಾವಿರಾರು ಸಂಖ್ಯೆಯಲ್ಲಿ ಜನರು ಜಾಗರಣೆ ಮಾಡಿದರು. ಕೆಲವರು ದೇವಾಯಲಗಳಲ್ಲಿ ಭಜನೆ, ಅಭಿಷೇಕ, ಪೂಜಾ ಕಾರ್ಯದಲ್ಲಿ ತೊಡಗುವ ಮೂಲಕ ಜಾಗರಣೆ ಮಾಡಿದರೆ, ಇನ್ನು ಕೆಲವರು ಬ್ಯಾಡ್ಮಿಂಟನ್ ಆಡಿದರು.
ಇನ್ನು ಕೆಲವರು ಅಲ್ಲಲ್ಲಿ ಕುಳಿತು ಲೋಕಾಭಿರಾಮ ಮಾತುಗಳಾಡುತ್ತಾ ಸಮಯ ಕಳೆದರು. ಮತ್ತೆ ಕೆಲವರು ಯಾವುದೇ ಉಸಾಬರಿ ಇಲ್ಲದೆ ನಿದ್ರೆಗೆ ಜಾರಿದ್ದರು. ಹೀಗೆ ಒಬ್ಬೊಬ್ಬರು ಒಂದೊಂದು ವಿಧದಲ್ಲಿ ಜಾಗರಣೆ ಮಾಡಿದರು. ಶಿವರಾತ್ರಿ ಅಂಗವಾಗಿ ವಿವಿಧೆಡೆ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಒಟ್ಟಾರೆಯಾಗಿ ದಾವಣಗೆರೆಯ ಜನತೆ ಸಂಭ್ರಮದಿಂದ ಮಹಾಶಿವರಾತ್ರಿ ಆಚರಿಸಿದರು.