ಮುಂಬೈ: ಮಹಾರಾಷ್ಟ್ರದ ಬುಲ್ದಾನ ಜಿಲ್ಲೆಯ ಲೋನಾರ್ ತಾಲೂಕಿನ ಸುಲ್ತಾನ್‌ಪುರ ಗ್ರಾಮಸ್ಥರು ತಮ್ಮ ಗ್ರಾಮದ ಹೆಸರನ್ನು ಬದಲಿಸಿ “ರಾಹುಲ್ ನಗರ’ ಎಂದು ಮರುನಾಮಕರಣ ಮಾಡಿದ್ದಾರೆ. ವಿಶೇಷವೆಂದರೆ, 26/11ರ ಮುಂಬೈ ದಾಳಿಗೆ 14 ವರ್ಷ ಪೂರ್ಣಗೊಳ್ಳುತ್ತಿದ್ದಂತೆಯೇ ಸ್ಥಳೀಯರು ಇಂಥದ್ದೊಂದು ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ.
2008ರಲ್ಲಿ ನಡೆದ ಮುಂಬೈ ದಾಳಿ ಸಂದರ್ಭದಲ್ಲಿ ಉಗ್ರರೊಂದಿಗೆ ಹೋರಾಡುತ್ತಾ ಪ್ರಾಣಾರ್ಪಣೆ ಮಾಡಿದ ಮಹಾರಾಷ್ಟ್ರ ರಾಜ್ಯ ಮೀಸಲು ಪೊಲೀಸ್ ಪಡೆ(ಎಸ್‌ಆರ್‌ಪಿಎಫ್)ಯ ಕಾನ್ಸ್‌ಟೆಬಲ್ ರಾಹುಲ್ ಶಿಂಧೆ ಸ್ಮರಣಾರ್ಥ ಗ್ರಾಮಸ್ಥರು ತಮ್ಮ ಗ್ರಾಮಕ್ಕೆ “ರಾಹುಲ್ ನಗರ’ ಎಂದು ಹೆಸರಿಟ್ಟಿದ್ದಾರೆ. ರಾಹುಲ್ ಶಿಂಧೆ ಅವರು ಮೂಲತಃ ಸುಲ್ತಾನಪುರದವರೇ ಆಗಿದ್ದಾರೆ.
14 ವರ್ಷಗಳ ಹಿಂದೆ ಪಾಕ್ ಉಗ್ರರು ಮುಂಬೈನ ತಾಜ್ ಮಹಲ್ ಪ್ಯಾಲೆಸ್ ಹೋಟೆಲ್‌ಗೆ ನುಗ್ಗಿದ ಸಂದರ್ಭದಲ್ಲಿ ಹೋಟೆಲ್ ಒಳಗೆ ಪ್ರವೇಶಿಸಿದ ಮೊದಲ ಪೊಲೀಸ್ ತಂಡದಲ್ಲಿ ರಾಹುಲ್ ಇದ್ದರು. ಈ ವೇಳೆ ಉಗ್ರರು ಹಾರಿಸಿದ ಗುಂಡು ರಾಹುಲ್ ಅವರ ಹೊಟ್ಟೆ ಭಾಗಕ್ಕೆ ತಾಗಿ, ಅವರು ಹುತಾತ್ಮರಾದರು. ದೇಶಕ್ಕಾಗಿ ಪ್ರಾಣ ಸರ್ಮಪಿಸಿದ ರಾಹುಲ್ ಅವರ ಗೌರವಾರ್ಥ ಕೇಂದ್ರ ಸರ್ಕಾರ ಮರಣೋತ್ತರವಾಗಿ “ರಾಷ್ಟ್ರಪತಿಗಳ ಪೊಲೀಸ್ ಪದಕ’ ನೀಡಿ ಗೌರವಿಸಿತು.
ಉಗ್ರರ ದಾಳಿಯ ಸಂಚುಕೋರರಿಗೆ ನಿರ್ಬಂಧ ವಿಧಿಸುವ ನಮ್ಮ ಪ್ರಯತ್ನವನ್ನು ಈ ಹಿಂದೆ ರಾಜಕೀಯ ಕಾರಣಗಳಿಗಾಗಿ ಬ್ಲಾಕ್ ಮಾಡಲಾಗುತ್ತಿತ್ತು. ಈಗಲೂ ಈ ಉಗ್ರರು ಮುಕ್ತವಾಗಿ ಓಡಾಡಿಕೊಂಡಿದ್ದು, ನಮ್ಮ ದೇಶದ ಮೇಲೆ ದಾಳಿಯಲ್ಲಿ ತೊಡಗಿದ್ದಾರೆ.
– ರುಚಿರಾ ಕಂಬೋಜ್, ವಿಶ್ವಸಂಸ್ಥೆಯಲ್ಲಿನ ಭಾರತೀಯ ಕಾಯಂ ಪ್ರತಿನಿಧಿ