ಮುಂಬಯಿ : ಪ್ರಧಾನಿ ನರೇಂದ್ರ ಮೋದಿ ಇಂದು ಮಂಗಳವಾರ ಇಲ್ಲಿಗೆ ಸಮೀಪದ ಕಲ್ಯಾಣ್ ನಲ್ಲಿ ನಡೆದಿದ್ದ ಕಲ್ಯಾಣ್ – ಭಿವಂಡಿ ಮೆಟ್ರೋ ಲೈನ್ ಕಾರ್ಯಕ್ರಮದ ಫಡ್‌ಕೆ ಮೈದಾನಕ್ಕೆ 200 ಮೀಟರ್ ದೂರದಲ್ಲಿ ಇರುವ ಶ್ಮಶಾನವನ್ನು ಭದ್ರತೆಯ ಕಾರಣಕ್ಕೆ ಇಂದು ಮುಚ್ಚಲಾದ ಸಂಗತಿ ಇದೀಗ ಬಹಿರಂಗವಾಗಿದೆ.
ಇದೇ ರೀತಿ ಭದ್ರತೆಯ ಕಾರಣಕ್ಕೆ ಪ್ರಧಾನಿ ಮೋದಿ ಕಾರ್ಯಕ್ರಮದ ಪ್ರಯುಕ್ತ ಸಮೀಪದ ವಾದ್ವಾ ಹಾಲ್ ನಲ್ಲಿ ನಡೆಯಲಿದ್ದ ಮೂರು ಮದುವೆ ಕಾರ್ಯಕ್ರಮಗಳನ್ನು ಕೂಡ ರದ್ದು ಪಡಿಸಲಾಯಿತೆಂದು ಗೊತ್ತಾಗಿದೆ.
ಮೋದಿ ಕಾರ್ಯಕ್ರಮ ತಾಣಕ್ಕೆ ಸಮೀಪದ ಶ್ಮಶಾನದ ಉಸ್ತುವಾರಿ ನಡೆಸುತ್ತಿರುವ ಸಿದ್ಧೇಶ್ ಶೇಟೆ ಎಂಬವರಿಗೆ ಸೋಮವಾರ ಮಧ್ಯರಾತ್ರಿ ಫೋನ್ ಕರೆಯೊಂದು ಬಂದಿತ್ತು. “ನಮ್ಮ ಕುಟುಂಬದ ಸದಸ್ಯರೊಬ್ಬರು ತೀರಿಕೊಂಡಿದ್ದಾರೆ; ಅವರ ಶವ ಸಂಸ್ಕಾರಕ್ಕೆ ಮಂಗಳವಾರ ರುದ್ರಭೂಮಿ ದೊರಕಬಹುದೇ ?’ ಎಂದು ಫೋನಿನಲ್ಲಿ ವ್ಯಕ್ತಿಯೊಬ್ಬರು ಕೇಳಿದ್ದರು. ಪ್ರಧಾನಿ ಮೋದಿ ಅವರ ಕಾರ್ಯಕ್ರಮದ ಪ್ರಯುಕ್ತ ಶ್ಮಶಾನ ಮಂಗಳವಾರ ಒಂದು ದಿನ ಮುಚ್ಚಿರುತ್ತದೆ ಎಂದು ಶೇಟೆ ಫೋನ್ ಕರೆ ಮಾಡಿದ ವ್ಯಕ್ತಿಗೆ ಉತ್ತರಿಸಿದ್ದರು.
“ಮೋದಿ ಕಾರ್ಯಕ್ರಮ ತಾಣದಿಂದ ಕೇವಲ 200 ಮೀಟರ್ ದೂರದಲ್ಲಿರುವ ಶ್ಮಶಾನವನ್ನು ಮಂಗಳವಾರದ ಮಟ್ಟಿಗೆ ಮುಚ್ಚುವಂತೆ ಪೊಲೀಸರು ನಮ್ಮನ್ನು ಕೇಳಿಕೊಂಡಿದ್ದರು. ಆ ಪ್ರಕಾರ ನಾವು ಇಂದು ಮಂಗಳವಾರ ಶ್ಮಶಾನವನ್ನು ಮುಚ್ಚಿದ್ದೇವೆ. ಜನರು ಇಲ್ಲಿಂದ ಒಂದೂವರೆ ಕಿ.ಮೀ. ದೂರದಲ್ಲಿರುವ ಬೇಲ್‌ಬಜಾರ್ ಶ್ಮಶಾನದಲ್ಲಿ ಶವ ಸಂಸ್ಕಾರ ನಡೆಸಬಹುದಾಗಿದೆ; ಶ್ಮಶಾನ ಮುಚ್ಚಿರುವ ಬಗ್ಗೆ ನಾವು ಹೊರಗೆ ಬೋರ್ಡ್ ಕೂಡ ಹಾಕಿದ್ದೇವೆ; ಶ್ಮಶಾನದ ಗೇಟಿನ ಬಳಿ ಪೊಲೀಸರನ್ನು ನಿಯೋಜಿಸಿ ಜನರಿಗೆ ಪರ್ಯಾಯ ಸೌಕರ್ಯ ಬಳಸುವಂತೆ ಸೂಚಿಸಬೇಕು ಎಂದು ನಾನು ಅಧಿಕಾರಿಗಳಿಗೆ ಹೇಳಿದ್ದೇನೆ’ ಎಂದು ಶೇಟೆ ಮಾಧ್ಯಮ ಪ್ರಶ್ನೆಗೆ ಉತ್ತರಿಸಿದರು.
2014ರಲ್ಲಿ ಪ್ರಧಾನಿ ಮೋದಿ ಅವರು ಇದೇ ಫಡ್‌ಕೆ ಮೈದಾನದಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗಳ ಪ್ರಚಾರಾಭಿಯಾನ ನಡೆಸಿದ್ದರು.