ಉಡುಪಿ: ಶ್ರೀ ಕೃಷ್ಣಾಷ್ಟಮಿ ಪ್ರಯುಕ್ತ ಶ್ರೀ ಕೃಷ್ಣಮಠ, ಪರ್ಯಾಯ ಪುತ್ತಿಗೆ ಮಠದಿಂದ ನಡೆಯುತ್ತಿರುವ ಶ್ರೀಕೃಷ್ಣ ಮಾಸೋತ್ಸವ, ಸಪ್ತೋತ್ಸವದ ಪ್ರಯುಕ್ತ ಶುಕ್ರವಾರ ಗೀತಾ ಮಂದಿರದಲ್ಲಿ 108 ಬಗೆಯ ಲಡ್ಡುಗಳನ್ನು ಒಳಗೊಂಡ ಲಡ್ಡುತ್ಸವ ಅದ್ದೂರಿಯಾಗಿ ನಡೆಯಿತು.
ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶತೀರ್ಥ ಶ್ರೀಪಾದರು 108 ಬಗೆಯ ಲಡ್ಡುಗಳನ್ನು ಶ್ರೀ ಕೃಷ್ಣನಿಗೆ ಅರ್ಪಿಸಿ, ಮಂಗಳಾರತಿ ಬೆಳಗಿದರು.
ಅನಂತರ ಗೀತಾಮಂದಿರದ ಮೊದಲ ಮಹಡಿಯಲ್ಲಿ ರೂಪಿಸಿದ್ದ 3ಡಿ ಪ್ರಿಂಟಿಂಗ್‌ನಲ್ಲಿರುವ ಕ್ಷೀರ ಸಾಗರದಲ್ಲಿ ಶ್ರೀ ಕೃಷ್ಣನ ರೂಪವನ್ನು ಶ್ರೀಪಾದರು ಅನಾವರಣಗೊಳಿಸಿದರು. ಗೀತಾ ಮಂದಿರದ ನೆಲಮಹಡಿಯಲ್ಲಿ ಬೃಹತ್ ಲಡ್ಡು ಕಲಾಕೃತಿಯ ಎದುರು ಯತಿತ್ರಯರು ದೀಪ ಬೆಳಗಿಸಿ ಲಡ್ಡುತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದರು.
ಅನಂತರ ಮಹಿಳೆಯರು ತಟ್ಟೆಯಲ್ಲಿ 108 ಲಡ್ಡುಗಳನ್ನು ಹಿಡಿದು ಚಂಡೆ ವಾದನದೊಂದಿಗೆ ರಥಬೀದಿಗೆ ಒಂದು ಸುತ್ತು ಬಂದರು. ಈ ವೇಳೆ ಯತಿತ್ರಯರು ರಥಬೀದಿ ಸುತ್ತಿ ರಾಜಾಂಗಣಕ್ಕೆ ಬಂದರು. ರಾಜಾಂಗಣದಲ್ಲಿ ವಿಶೇಷ ಪೂಜೆಯೊಂದಿಗೆ ಸ್ವಾಗತಿಸಲಾಯಿತು.
ರಾಜಾಂಗಣದಲ್ಲಿ ಲಡ್ಡಿನೊಳಗಿದ್ದ ಶ್ರೀ ಕೃಷ್ಣನನ್ನು ಅನಾವರಣಗೊಳಿಸಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಭಗವಂತನಿಗೆ ವೈಭವಗಳ ಸಮರ್ಪಣೆ ಮಾಡಬೇಕು. ವೇದಾಂತ, ಧಾರ್ಮಿಕ ಜೀವನ ಎಂದರೆ ಕಾಡಿಗೆ ಹೋಗಿ ತಪಸ್ಸು, ಉಪವಾಸ ಮಾಡುವುದು ಎಂಬ ಕಲ್ಪನೆ ಸಾಮಾನ್ಯ ಜನರಲ್ಲಿದೆ. ಯಾವ ಶಾಸ್ತ್ರವೂ ಸುಖ ಪಡಬೇಡಿ ಎಂದು ಹೇಳುವುದಿಲ್ಲ. ಅದನ್ನು ಭಗವಂತನ ಪೂಜಾ ರೂಪದಲ್ಲಿ ಮಾಡಬೇಕು. ಭಗವದ್ ಪೂಜೆಯ ಜತೆಗೆ ಯಾವುದೇ ವೈಭವ ಪಡೆದರೂ ತಪ್ಪಲ್ಲ ಎಂದು ಆಶೀರ್ವಚನ ನೀಡಿದರು.
ಶ್ರೀ ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿ, ವಿವಿಧ ಉತ್ಸವದಿಂದ ಭಗವಂತನ ಆರಾಧನೆ ಮಾಡಲಾಗುತ್ತಿದೆ. ಶ್ರಾವಣ ಮಾಸದಲ್ಲಿ ವೃಂದಾವನದಲ್ಲಿ ವಿಶೇಷ ವೈಭವ ನಡೆಯುತ್ತದೆ. ಉಡುಪಿ ಕೃಷ್ಣನ ಸನ್ನಿಧಾನದಲ್ಲಿ ಮಾಸೋತ್ಸವ ಆಚರಣೆ ಮೂಲಕ ಪುತ್ತಿಗೆ ಶ್ರೀಪಾದರು ವಿಶೇಷವಾದ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ ಎಂದು ಸಂದೇಶ ನೀಡಿದರು.
ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥರು ಅನುಗ್ರಹ ಸಂದೇಶ ನೀಡಿದರು.ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಮಠಾಧೀಶರು ಎಲ್ಲರನ್ನು ಒಗ್ಗೂಡಿಸಿ ಮುನ್ನಡೆಸುವ ಕಾರ್ಯ ಮಾಡುತ್ತಿರುವುದು ಸಮಾಜಕ್ಕೆ ಪ್ರೇರಣೆ. ಪುತ್ತಿಗೆ ಶ್ರೀಪಾದರು ವಿಶ್ವಕ್ಕೆ ಶ್ರೀ ಕೃಷ್ಣ ಸಂದೇಶ ಸಾರಿದ್ದಾರೆ ಎಂದು ಹೇಳಿದರು.
ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಹಿಂದೂ ಧರ್ಮ ವಿಶಿಷ್ಟವಾದ ಪರಿಸ್ಥಿತಿಯಲ್ಲಿ ದಾಟಿ ಹೋಗುತ್ತಿದೆ. ಹಿಂದೂ ಧರ್ಮ ವಿಶ್ವದ ಎಲ್ಲ ಧರ್ಮಕ್ಕೆ ನೆರಳಾಗಿದೆ. ಹಿಂದೂ ಧರ್ಮವನ್ನು ಸರ್ವನಾಶ ಮಾಡಲು ಅನೇಕ ಶಕ್ತಿ ಕೆಲಸ ಮಾಡುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಉಡುಪಿ ರಾಜಸ್ಥಾನಿ ಅಸೋಸಿಯೇಶನ್ ಅಧ್ಯಕ್ಷ ದಶರಥ ಸಿಂಗ್, ಹೈದರಾಬಾದ್ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ, ಮಂಡ್ಯದ ಹೊಟೇಲ್ ಉದ್ಯಮಿ ರಮೇಶ್ ಆಚಾರ್ಯ, ಹುಬ್ಬಳ್ಳಿಯ ಎನ್.ಆರ್.ಕುಲಕರ್ಣಿ ಮೊದಲಾದವರಿಗೆ ಅವರಿಗೆ ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಸಮ್ಮಾನಿಸಲಾಯಿತು.
ಉಪನ್ಯಾಸಕಿ ಡಾ| ಪ್ರಜ್ಞಾ ಮಾರ್ಪಳ್ಳಿ ಅವರು ವಿದ್ಯಾರ್ಥಿ ಜೀವನಕ್ಕೆ ಭಗವದ್ಗೀತೆಯ ಮಾರ್ಗದರ್ಶನ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು.
ಕರ್ಣಾಟಕ ಬ್ಯಾಂಕ್ ಜನರಲ್ ಮ್ಯಾನೇಜರ್‌ಗಳಾದ ಜಯನಾಗರಾಜ ರಾವ್, ರಾಜ ಬಿ.ಎಸ್. ಮೊದಲಾದವರು ಉಪಸ್ಥಿತರಿದ್ದರು.
ಶ್ರೀಮಠದ ರಮೇಶ್ ಭಟ್ ಸ್ವಾಗತಿಸಿ, ಮಹಿತೋಷ್ ಅಚಾರ್ಯ ನಿರೂಪಿಸಿದರು.
ಚಿತ್ರ: ಆಸ್ಟ್ರೋ ಮೋಹನ್