ಅರೇಬಿಯಾದ ಸುಲ್ತಾನನಿಗೆ ಮೂವರು ಪತ್ನಿಯರು. ಆದರೆ, ಅವರ್ಯಾರಿಗೂ ಮಕ್ಕಳಿರಲಿಲ್ಲ ಎಂಬುದೇ ರಾಜನಿಗೆ ಚಿಂತೆ. ಒಂದು ದಿನ ರಾತ್ರಿ ಮಲಗಿದ್ದ ರಾಜನಿಗೆ ಕನಸೊಂದು ಬಿತ್ತು. ಕನಸಲ್ಲಿ ದೇವತೆ ಬಳಿ ಬಂದು ರಾಜನಿಗೆ ಹೇಳುತ್ತಾಳೆ- “ನಿನ್ನ ರಾಣಿಯರಿಗೆ ದಾಳಿಂಬೆ ಬೀಜಗಳನ್ನು ಕೊಡು. ಆಗ ಅವರಿಗೆ ಮಕ್ಕಳಾಗುತ್ತದೆ’. ರಾಜನಿಗೆ ಧುತ್ತೆಂದು ಎಚ್ಚರವಾಗುತ್ತದೆ. ಆದದ್ದಾಗಲಿ, ರಾಣಿಯರಿಗೆ ದಾಳಿಂಬೆ ಕೊಟ್ಟು ನೋಡೋಣ ಎಂದು ನಿರ್ಧರಿಸುತ್ತಾನೆ.
ಅಂತೆಯೇ, ಮೂವರೂ ರಾಣಿಯರಿಗೆ ದಾಳಿಂಬೆ ತಿನ್ನಲು ಹೇಳುತ್ತಾನೆ. ಕೆಲ ತಿಂಗಳ ನಂತರ ಅವರಲ್ಲಿ ಇಬ್ಬರು ರಾಣಿಯರು ಗಂಡು ಮಕ್ಕಳಿಗೆ ಜನ್ಮ ನೀಡುತ್ತಾರೆ. ಮೂರನೆಯವಳು ಮಾತ್ರ ಗರ್ಭ ಧರಿಸುವುದಿಲ್ಲ. ಇದರಿಂದ ಕೋಪಗೊಳ್ಳುವ ರಾಜ, ಮೂರನೇ ಹೆಂಡತಿಯನ್ನು ಕಾಡಿಗೆ ಅಟ್ಟುತ್ತಾನೆ. ಆದರೆ, ಕೆಲವು ಸಮಯದ ನಂತರ ಮೂರನೇ ಪತ್ನಿಯು ಕಾಡಿನಲ್ಲೇ ಮಗುವೊಂದಕ್ಕೆ ಜನ್ಮ ನೀಡುತ್ತಾಳೆ. ಮಗುವಿಗೆ “ಅಹ್ಮದ್’ ಎಂದು ಹೆಸರಿಡುತ್ತಾಳೆ.
ವರ್ಷಗಳು ಕಳೆಯುತ್ತವೆ. ಅಹ್ಮದ್ ಬೆಳೆದು, ದೊಡ್ಡವನಾಗುತ್ತಾನೆ. ಕಾಡಿನಲ್ಲಿದ್ದುಕೊಂಡೇ ಸಾಹಸ ಕಲೆಗಳನ್ನು, ಮಾಂತ್ರಿಕ ವಿದ್ಯೆಗಳನ್ನು ಕಲಿಯುತ್ತಾನೆ. ಒಂದು ದಿನ ತಾಯಿಯು ಅಹ್ಮದ್‌ಗೆ ನಡೆದಿದ್ದೆಲ್ಲವನ್ನೂ ವಿವರಿಸುತ್ತಾಳೆ. ವಿಷಯ ತಿಳಿದ ಅಹ್ಮದ್, ಹೇಗಾದರೂ ಮಾಡಿ ನನ್ನ ಅಪ್ಪನನ್ನು ಭೇಟಿಯಾಗಬೇಕು ಎಂದು ನಿರ್ಧರಿಸಿ, ಆ ರಾಜ್ಯಕ್ಕೆ ಹೋಗಿ ಸೇನೆಗೆ ಸೇರ್ಪಡೆಯಾಗುತ್ತಾನೆ. ತನ್ನ ಯುದ್ಧ ನಿಪುಣತೆಯಿಂದ ಹಲವು ಯುದ್ಧಗಳನ್ನು ಗೆಲ್ಲಿಸಿಕೊಡುತ್ತಾನೆ. ಇದರಿಂದ ಸಂತುಷ್ಟಗೊಳ್ಳುವ ರಾಜನು ಅಹ್ಮದ್‌ನನ್ನು ಅತಿಯಾಗಿ ಪ್ರೀತಿಸಿ, ಸೇನೆಯಲ್ಲಿ ಉನ್ನತ ಹುದ್ದೆಯನ್ನು ನೀಡುತ್ತಾನೆ. ಅಹ್ಮದ್‌ನನ್ನು ರಾಜನು ನೆಚ್ಚಿಕೊಂಡಿದ್ದು ನೋಡಿ ರಾಜನ ಮೊದಲೆರಡು ಪತ್ನಿಯರ ಮಕ್ಕಳಿಗೆ (ರಾಜಕುಮಾರರು) ಅಸೂಯೆ ಶುರುವಾಗುತ್ತದೆ. ಅಹ್ಮದ್‌ನನ್ನು ಆದಷ್ಟು ದೂರವಿಡಿ ಎಂದು ಅಪ್ಪನನ್ನು ಒತ್ತಾಯಿಸುತ್ತಾರೆ. ಹೀಗೇ ಒಂದು ದಿನ ಇಬ್ಬರು ರಾಜಕುಮಾರರು ಬೇಟೆಯಾಡಲೆಂದು ದಟ್ಟ ಅರಣ್ಯಕ್ಕೆ ಹೋಗುತ್ತಾರೆ. ರಾತ್ರಿಯಾದರೂ ಅವರು ವಾಪಸಾಗುವುದಿಲ್ಲ. ಸೈನಿಕರನ್ನು ಕಳುಹಿಸಿ ಹುಡುಕುವಂತೆ ಸುಲ್ತಾನ ಆದೇಶಿಸುತ್ತಾನೆ. ಆದರೆ, ಅವರೂ ಬರಿಗೈಯ್ಯಲ್ಲಿ ವಾಪಸಾಗುತ್ತಾರೆ.
ಕೊನೆಗೆ, ರಾಜನು ಅಹ್ಮದ್‌ನನ್ನು ಕರೆದು ವಿಷಯ ತಿಳಿಸುತ್ತಾನೆ. ಕೂಡಲೇ ಅರಣ್ಯಕ್ಕೆ ಧಾವಿಸುವ ಅಹ್ಮದ್, ಅಲ್ಲಿ ಸಿಗುವ ಹಲವು ಕ್ರೂರ ಪ್ರಾಣಿಗಳೊಂದಿಗೆ ಹೋರಾಡಿ, ರಾಜಕುಮಾರರನ್ನು ಹುಡುಕುತ್ತಾ ಮುಂದೆ ಹೋಗುತ್ತಾನೆ. ಅಷ್ಟರಲ್ಲಿ, ಮರವೊಂದರ ಕೆಳಗೆ ಬಂಧಿಯಾಗಿರುವ ಸುಂದರ ಯುವತಿ ಕಾಣಿಸುತ್ತಾಳೆ. ನೀನ್ಯಾರು ಎಂದು ಅಹ್ಮದ್ ಕೇಳುತ್ತಾನೆ. ಅದಕ್ಕೆ ಅವಳು, “ನಾನು ಕೈರೋ ರಾಜ್ಯದ ರಾಜಕುಮಾರಿ. ನನ್ನನ್ನು ಮಾಂತ್ರಿಕನೊಬ್ಬ ಇಲ್ಲಿ ಬಂಧಿಸಿಟ್ಟಿದ್ದಾನೆ’ ಎನ್ನುತ್ತಾಳೆ. ಆಗಲೇ ಹಿಂದಿನಿಂದ ರಾಕ್ಷಸನ ಧ್ವನಿ ಕೇಳಿಸುತ್ತದೆ. ತಕ್ಷಣ ಜಾಗೃತನಾಗುವ ಅಹ್ಮದ್ ತನ್ನಲ್ಲಿರುವ ಮಂತ್ರಶಕ್ತಿ ಬಳಸಿ, ಆ ಮಾಂತ್ರಿಕನನ್ನು ಕೊಲ್ಲುತ್ತಾನೆ. ನಂತರ, “ಬಾ ಇಲ್ಲಿಂದ ಓಡಿ ಹೋಗೋಣ’ ಎಂದು ರಾಜಕುಮಾರಿಗೆ ಹೇಳುತ್ತಾನೆ. ಆಗ ಆಕೆ, ಅಲ್ಲೇ ಹತ್ತಿರವಿದ್ದ ಗುಹೆಯನ್ನು ತೋರಿಸಿ, “ನೋಡಿ ಅಲ್ಲಿ, ಇನ್ನೂ ಅನೇಕರನ್ನು ಆ ರಾಕ್ಷಸ ಕೂಡಿ ಹಾಕಿದ್ದಾನೆ. ಅವರನ್ನೂ ಬಂಧಮುಕ್ತರಾಗಿಸೋಣ’ ಎನ್ನುತ್ತಾಳೆ. ಗುಹೆಯೊಳಕ್ಕೆ ಹೋಗಿ ನೋಡುವಾಗ ಅಲ್ಲಿದ್ದ ಅನೇಕ ಬಂಧಿಗಳ ಪೈಕಿ ರಾಜಕುಮಾರರೂ ಇರುತ್ತಾರೆ. ಕೂಡಲೇ ಅಹ್ಮದ್, ಎಲ್ಲರನ್ನೂ ಬಂಧಮುಕ್ತರನ್ನಾಗಿಸುತ್ತಾನೆ.
ನಂತರ, ರಾಜಕುಮಾರರು ಮತ್ತು ಕೈರೋದ ರಾಜಕುಮಾರಿಯನ್ನು ಕರೆದುಕೊಂಡು ಅಹ್ಮದ್ ಆಸ್ಥಾನಕ್ಕೆ ಮರಳುತ್ತಾನೆ. ಅಲ್ಲಿ ಸುಲ್ತಾನನ ಮುಂದೆ ನಿಂತು, “ಅಪ್ಪಾ, ನಿನ್ನ ಮೂವರು ಮಕ್ಕಳೂ ಇಲ್ಲಿದ್ದೇವೆ ನೋಡು’ ಎನ್ನುತ್ತಾನೆ. ಸುಲ್ತಾನ ಆಶ್ಚರ್ಯಚಕಿತನಾಗುತ್ತಾನೆ. ಆಗ ಅಹ್ಮದ್, “ಹೌದು ಅಪ್ಪಾ, ನಾನೂ ನಿಮ್ಮ ಮಗನೇ. ನೀವು ಕಾಡಿಗೆ ಅಟ್ಟಿದ ಮೂರನೇ ಪತ್ನಿಗೆ ಹುಟ್ಟಿದ ಮಗ ನಾನು’ ಎನ್ನುತ್ತಾನೆ. ಅಷ್ಟರಲ್ಲಿ ರಾಜನ ಕಣ್ಣಂಚಲ್ಲಿ ನೀರು ಜಿನುಗುತ್ತದೆ. ಮಗನನ್ನು ಅಪ್ಪಿಕೊಂಡು ಕಣ್ಣೀರಿಡುತ್ತಾನೆ. ಸೋದರರೂ ತಮ್ಮನನ್ನು ಆಲಂಗಿಸಿಕೊಳ್ಳುತ್ತಾರೆ. ನಂತರ, ಮೂರನೇ ಪತ್ನಿಯನ್ನೂ ರಾಜ ಆಸ್ಥಾನಕ್ಕೆ ಕರೆಸಿಕೊಂಡು, ತನ್ನ ತಪ್ಪಿಗೆ ಕ್ಷಮೆ ಕೇಳುತ್ತಾನೆ. ಅಹ್ಮದ್‌ನನ್ನು ಕೈರೋದ ರಾಜಕುಮಾರಿಯೊಂದಿಗೆ ಮದುವೆ ಮಾಡಿಸಿ, ಸುಖವಾಗಿ ಬಾಳುತ್ತಾರೆ.
ಹಲೀಮತ್ ಸ ಅದಿಯ