ಜಾದೂ ಮಾಡೋದು ಸುಮ್ಮನೆ ಅಲ್ಲ. ಪ್ರತಿ ಪ್ರಯೋಗದ ಹಿಂದಿನ ಕುತೂಹಲವನ್ನು ಹಾಗೇ ಇಟ್ಟುಕೊಳ್ಳಬೇಕು. ಅದನ್ನು ಬಿಟ್ಟುಕೊಡಬಾರದು. ನಿರೀಕ್ಷೆಗಳನ್ನು ಹೆಚ್ಚಿಸುತ್ತಲೇ ಇರಬೇಕು. ಕೊನೆಗೆ ಅದನ್ನು ತಣಿಸಬೇಕು. ಇಷ್ಟೆಲ್ಲಾ ಸರ್ಕಸ್ಸುಗಳ ನಡುವೆಯೂ ಗುಟ್ಟು ಬಿಟ್ಟು ಕೊಡುವ ಹಾಗಿಲ್ಲ. ಇಂಥ ಪ್ರಯೋಗಗಳಲ್ಲಿ ಈ ಮಣಿಯೂ ಒಂದು. ಅದು ಹೇಗೆಂದರೆ…
ಒಂದು ದೊಡ್ಡ ಮಣಿಯನ್ನು ಎರಡು ದಾರಗಳಿಗೆ ಪೋಣಿಸಲಾಗಿದೆ. ಅದರಲ್ಲಿ ಒಂದು ದಾರದಿಂದ ಮಣಿಯ ಮೇಲೆ ಒಂದು ಗಂಟು ಹಾಕಲಾಗಿದೆ. ಈ ಸ್ಥಿತಿಯಲ್ಲಿ ಮಣಿಯನ್ನು ಹೊರತೆಗೆಯುವುದು ಅಸಾಧ್ಯ. ಜಾದೂಗಾರ ಇಬ್ಬರು ಪ್ರೇಕ್ಷಕರನ್ನು ಕರೆದು ತನ್ನ ಎರಡೂ ಬದಿಗಳಲ್ಲಿ ನಿಲ್ಲಿಸಿ ಒಬ್ಬೊಬ್ಬರಿಗೆ ಒಂದೊಂದು ದಾರದ ತುದಿಗಳನ್ನು ಕೊಡುತ್ತಾನೆ. ನಂತರ ನಡುವೆ ಇರುವ ಮಣಿಯನ್ನು ಒಂದು ಕರವಸ್ತ್ರದಿಂದ ಮುಚ್ಚಿ 1-2-3 ಎನ್ನುತ್ತಿದ್ದಂತೆಯೇ ಮಣಿಯು ದಾರಗಳಿಂದ ಹೊರಗೆ ಬರುತ್ತದೆ.
ಇವೆಲ್ಲಾ ಹೇಗೆ ಸಾಧ್ಯ? ಇದರ ರಹಸ್ಯ ಇಷ್ಟೆ. ನಿಮಗೆ ಬೇಕಾಗಿರುವುದು ಒಂದು ದೊಡ್ಡ ಮಣಿ, ತೆಳುವಾದ ನೂಲು ಮತ್ತು ಸುಮಾರು ಮೂರು ಅಡಿ ಉದ್ದದ ಎರಡು ಗಟ್ಟಿಯಾದ ದಾರದ ತುಂಡುಗಳು.
ಸಿದ್ಧತೆ: ಎರಡೂ ದಾರಗಳನ್ನು ಸೇರಿಸಿ ಮಧ್ಯದಲ್ಲಿ ನೂಲಿನಿಂದ ಒಂದು ಗಂಟು ಹಾಕಿ. ದಾರಗಳನ್ನು ಮಡಚಿ ಒಂದೇ ದಾರದ ತುದಿಗಳು ಒಂದೇ ಕಡೆಗೆ ಬರುವಂತೆ ಸಿದ್ಧಪಡಿಸಿಟ್ಟುಕೊಳ್ಳಿ. ಪ್ರದರ್ಶನ: ಸಿದ್ಧಪಡಿಸಿದ ದಾರಗಳನ್ನು ನೂಲಿನ ಗಂಟು ಕಾಣದಂತೆ ಮಧ್ಯದಲ್ಲಿ ಹಿಡಿದುಕೊಂಡು ಎರಡೂ ಕಡೆಯಿಂದ ಜಗ್ಗಿ ಗಟ್ಟಿಯಾಗಿರುವುದನ್ನು ಖಚಿತಪಡಿಸಿ. ಇಲ್ಲಿ ನೂಲು ತುಂಡಾಗದಂತೆ ಎಚ್ಚರವಹಿಸಬೇಕು. ನಂತರ ಮಣಿಯನ್ನು ದಾರಗಳ ಮೂಲಕ ಪೋಣಿಸಿ ನೂಲಿನ ಗಂಟಿನ ಮೇಲೆ ಸರಿಸಿ. ಮಣಿಯ ಮೇಲೆ ಒಂದು ಗಂಟನ್ನು ಹಾಕಿ ಎಡಗಡೆಯ ದಾರವನ್ನು ಬಲಗಡೆಗೂ, ಬಲಗಡೆಯ ದಾರವನ್ನು ಎಡಗಡೆಗೂ ತನ್ನಿ. ಪ್ರೇಕ್ಷಕರಲ್ಲಿ ಇಬ್ಬರನ್ನು ಕರೆದು ನಿಮ್ಮ ಎರಡೂ ಬದಿಯಲ್ಲಿ ನಿಲ್ಲಿಸಿ ಎರಡೆರಡು ದಾರದ ತುದಿಗಳನ್ನು ಕೊಡಿ. ನಂತರ ಮಣಿಯನ್ನು ಕರವಸ್ತ್ರದ ಮರೆಯಲ್ಲಿ ಜೋರಾಗಿ ಎಳೆಯಿರಿ. ನೂಲು ತುಂಡಾಗಿ ಮಣಿ ಹೊರಬರುವುದು. ಆಗ ನೋಡಿ ಪ್ರೇಕ್ಷಕರೆಲ್ಲ ಆಶ್ಚರ್ಯಚಕಿತರಾಗಿ ಚಪ್ಪಾಳೆಯ ಮಳೆಯಲ್ಲಿ ಮೀಯಿಸುತ್ತಾರೆ.
ಉದಯ್ ಜಾದೂಗಾರ್