Advertisement

ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಬದ್ಧ

04:38 PM Aug 22, 2019 | Naveen |

ಮಾಗಡಿ: ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶೀಘ್ರದಲ್ಲಿಯೇ ಕ್ಯಾಂಟೀನ್‌ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಬದ್ಧವಾಗಿದ್ದೇವೆ ಎಂದು ಶಾಸಕ ಎ.ಮಂಜುನಾಥ್‌ ತಿಳಿಸಿದರು.

Advertisement

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2019-2020ನೇ ಸಾಲಿಗೆ ಬುಧವಾರ ನಡೆದ ರಾಷ್ಟ್ರೀಯ ಸೇವಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ಯಾಂಟೀನ್‌ ನಿರ್ಮಾಣಕ್ಕೆ ಅನುದಾನವಿದೆ, ನಿರ್ವಹಣೆ ಮಾಡುವವರೂ ಇದ್ದಾರೆ. ಮುಂದುವರಿಸುವ ಜವಾಬ್ದಾರಿ ಹೇಗೆ ಎಂಬ ಚಿಂತನೆಯಿದೆ. ಆದರೂ ಎಲ್ಲಾ ಸಮಸ್ಯೆಗಳಿಗೂ ಉತ್ತರಿಸುವ ಮೂಲಕ ಕ್ಯಾಂಟೀನ್‌ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.

ಭವಿಷ್ಯ ರೂಪಿಸಿಕೊಳ್ಳುವುದೇ ಉತ್ತಮ ಫ‌ಲಿತಾಂಶ: ಉತ್ತಮ ವಾತಾವರಣ ಹೊಂದಿರುವ ಈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ತಮ್ಮ ಕೊಡುಗೆ ಏನು ಎಂಬ ಪ್ರಶ್ನೆ ಹಾಕಿಕೊಂಡು, ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕಾದರೆ ಉತ್ತಮ ಫ‌ಲಿತಾಂಶ ತಂದುಕೊಡಬೇಕು. ಇದಕ್ಕಾಗಿ ಕನಸು ಕಾಣಬೇಕು. ದೃಢ ಸಂಕಲ್ಪ ಮಾಡಬೇಕು. ಕಾಲೇಜಿನಲ್ಲಿ ಪ್ರತಿಭೆಗಳಿಗೆ ಒಳ್ಳೆಯ ಭವಿಷ್ಯವಿದೆ. ವಿವಿಧ ಕೋರ್ಸ್‌ಗಳನ್ನು ಪ್ರಾರಂಭಿಸಲು ಅಗತ್ಯ ಕೊಠಡಿಗಳನ್ನು ಸಹ ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಕಾನೂನು ಕಾಲೇಜು ಪ್ರಾರಂಭ: ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮಾಗಡಿಯಲ್ಲಿ ಕಾನೂನು ಕಾಲೇಜು ಆರಂಭಿಸಲಾಗುವುದು. ಕಾಲೇಜು ಕಟ್ಟಡ ನಿರ್ಮಾಣಕ್ಕಾಗಿ ಭೈಚಾಪುರದ ಬಳಿ ಸುಮಾರು 1.25 ಎಕರೆ ಜಮೀನು ಗುರುತಿಸಲಾಗಿದೆ. ಸರ್ಕಾರದಿಂದ ಭೂ ಮಂಜೂರು ಮಾಡಿಸಿಕೊಂಡು ಕಟ್ಟಡ ಪ್ರಾರಂಭಿಸಲಾಗುವುದು. ಅಲ್ಲಿಯವರೆವಿಗೂ ಹೊಸಪೇಟೆ ಬಳಿ ಇದ್ದ ಐಟಿಐ ಕಾಲೇಜು ಕೊಠಡಿಯಲ್ಲಿ ಕಾನೂನು ಕಾಲೇಜು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ಡಿಜಿಟಲ್ ಗ್ರಂಥಾಲಯ ನಿರ್ಮಾಣ: ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಮಾಗಡಿ ಪಟ್ಟಣದಲ್ಲಿ ಡಿಜಿಟಲ್ ಗ್ರಂಥಾಲಯ ನಿರ್ಮಿಸಲಾಗುತ್ತಿದೆ. ವಿದ್ಯಾರ್ಥಿಗಳು ಗ್ರಂಥಾಲಯದ ಸೇವೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು. ಉನ್ನತ ಹುದ್ದೆಯನ್ನು ಅಲಂಕರಿಸಿ, ಸಮಾಜ ಮತ್ತು ಕಾಲೇಜಿಗೆ ಅನನ್ಯ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.

Advertisement

ಬೇಡಿಕೆ ಈಡೇರಿಕೆಗೆ ಮನವಿ: ಕಾಲೇಜು ಪ್ರಾಂಶುಪಾಲ ಎಚ್.ಆರ್‌.ಮೂರ್ತಿ ಮಾತನಾಡಿ, ನಿಗದಿತ ವೇಳೆಗೆ ವಿದ್ಯಾರ್ಥಿಗಳು ಕಾಲೇಜಿಗೆ ಬರಲು ಸರ್ಕಾರಿ ಬಸ್‌ಗಳ ಸೌಕರ್ಯವಿಲ್ಲ. ವಿದ್ಯಾರ್ಥಿಗಳು ಮಧ್ಯಾಹ್ನದ ಊಟದ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ಬೇಡಿಕೆಯನ್ನು ಈಡೇರಿಸಬೇಕು. ಕಾಲೇಜಿನಲ್ಲಿ ಕುಡಿಯುವ ನೀರು ಸೇರಿದಂತೆ ಅನೇಕ ಮೂಲ ಸೌಲಭ್ಯದ ಸಮಸ್ಯೆಗಳಿವೆ. ಶೀಘ್ರದಲ್ಲಿಯೇ ಸಮಸ್ಯೆಗಳನ್ನು ನಿವಾರಿಸಬೇಕು ಎಂದು ಮನವಿ ಮಾಡಿದರು.

ತಹಶೀಲ್ದಾರ್‌ ಎನ್‌.ರಮೇಶ್‌ ಮತ್ತು ಕಾಲೇಜು ಶಿಕ್ಷಣ ಇಲಾಖೆಯ ಜಂಟೀ ನಿರ್ದೇಶಕ ಡಾ.ಆರ್‌.ಕೆ.ರಮೇಶ್‌ ಬಾಬು ಕಾಲೇಜಿನ ಪ್ರಗತಿ, ಅಲ್ಲಿನ ವ್ಯವಸ್ಥೆ ಕುರಿತು ಮಾತನಾಡಿದರು. ಈ ವೇಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಮಾಗಡಿ ದೀವಿಗೆ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯದರ್ಶಿ ಸೀಮಾ ಕೌಶರ್‌, ಪ್ರಾಧ್ಯಾಪಕರಾದ ಜಗದೀಶ್‌ ನಡುವಿನ ಮಠ, ಪಿ.ನಂಜುಂಡ, ತಿಮ್ಮಹನುಮಯ್ಯ, ಎಸ್‌.ಮಂಜುನಾಥ್‌, ಚಲುವರಾಜು, ಚಿದಾನಂದ ಸ್ವಾಮಿ, ಗುರುಮೂರ್ತಿ, ವೀಣಾ ಸುಷ್ಮಾ, ಜಿ.ಎಸ್‌.ವೀಣಾ, ಟಿ.ಎನ್‌.ರೂಪಶ್ರೀ, ಕೆ.ಪ್ರಿಯ ದರ್ಶಿನಿ, ಅನಿಲ್ಕುಮಾರ್‌, ಚಂದ್ರಮೋಹನ್‌, ಸಿಬ್ಬಂದಿ, ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next