Advertisement

ಮದ್ರಸಾ ಅಧ್ಯಾಪಕ ಹತ್ಯೆ: ತೀವ್ರ ತನಿಖೆ

12:55 PM Mar 23, 2017 | Team Udayavani |

ಕಾಸರಗೋಡು: ಕಾಸರಗೋಡು ನಗರದ ಹೊರ ವಲಯದ ಸೂರ್ಲು ಹಳೆಯ ಚೂರಿ (ಸೂರ್ಲು)ಯ ಇಸ್ಸತ್ತುಲ್‌ ಇಸ್ಲಾಂ ಮದ್ರಸಾದ ಅಧ್ಯಾಪಕರಾಗಿದ್ದ ಮಡಿಕೇರಿ ನಾಪೊಕ್ಲು ಸಮೀಪದ ಎರುಮಾಡ್‌ ಉದ್ದವಾಡ ನಿವಾಸಿ ರಿಯಾಸ್‌ ಮೌಲವಿ (30) ಹತ್ಯೆ ಸಂಬಂಧಿಸಿ ತನಿಖೆ ತೀವ್ರಗೊಂಡಿದೆ. ಕೊಲೆಗೀಡಾದ ಸ್ಥಳಕ್ಕೆ ತನಿಖಾ ತಂಡವು ಬುಧವಾರ ಬೆಳಗ್ಗೆ ಭೇಟಿ ನೀಡಿ ಕೂಲಂಕಷ ಪರಿಶೀಲನೆ ನಡೆಸಿತು. ಘಟನೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

Advertisement

ಈ ಹಿಂದೆ ಕಾಸರಗೋಡು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ, ಈಗ ಕಣ್ಣೂರು ಕ್ರೈಂಬ್ರಾಂಚ್‌ ಎಸ್‌.ಪಿ.ಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕನ್ನಡಿಗ ಡಾ| ಎ. ಶ್ರೀನಿವಾಸ್‌ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ತನಿಖೆಯನ್ನು ಕೈಗೆತ್ತಿಕೊಂಡಿದ್ದು, ಸಮಗ್ರ ತನಿಖೆಯ ನಿಮಿತ್ತ ಮಾಹಿತಿ ಕಲೆ ಹಾಕುತ್ತಿದ್ದಾರೆ. ವಿಶೇಷ ತನಿಖಾ ತಂಡದಲ್ಲಿ ಮಾನಂತವಾಡಿ ಎ.ಎಸ್‌. ಪಿ. ಜಯದೇವ್‌, ಮಲಪ್ಪುರಂ ಡಿ.ಸಿ.ಆರ್‌.ಬಿ.ಯ ಡಿ.ವೈ.ಎಸ್‌.ಪಿ. ಮೋಹನನ್‌ ಚಂದ್ರನ್‌ ನಾಯರ್‌, ತಳಿಪರಂಬ ಸಿ.ಐ. ಸುಧಾಕರನ್‌ ಸಹಿತ ಉನ್ನತ ಪೊಲೀಸ್‌ ಅಧಿಕಾರಿಗಳಿದ್ದಾರೆ.

ನಿಷೇಧಾಜ್ಞೆ  ಜಾರಿ
ರಿಯಾಸ್‌ ಮೌಲವಿ ಕೊಲೆಕೃತ್ಯದ ಬಳಿಕ ವಿವಿಧೆಡೆಗಳಲ್ಲಿ ವ್ಯಾಪಕವಾಗಿ ಆಕ್ರಮಣ, ಹಿಂಸಾಚಾರಗಳು ಸಂಭವಿಸಿದ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಕೆ.ಜೀವನ್‌ಬಾಬು ಅವರು ಮಾ. 27ರ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

9 ಕೇಸು ದಾಖಲು
ಮದ್ರಸಾ ಅಧ್ಯಾಪಕನ ಕೊಲೆ ಹಿನ್ನೆಲೆಯಲ್ಲಿ ಹರತಾಳ ಸಂದರ್ಭದಲ್ಲಿ ನಡೆದ ಅಹಿತಕರ ಘಟನೆಗೆ ಸಂಬಂಧಿಸಿ ಪೊಲೀಸರು ಒಟ್ಟು 9 ಕೇಸುಗಳನ್ನು ದಾಖಲಿಸಿದ್ದು, ನಾಲ್ವರನ್ನು ಬಂಧಿಸಿದ್ದಾರೆ. 18 ಮಂದಿಯನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಲಾಗಿದೆ. ಅಹಿತಕರ ಘಟನೆ ಹಿನ್ನೆಲೆಯಲ್ಲಿ ಕಾಸರಗೋಡಿಗೆ ವಿವಿಧ ಜಿಲ್ಲೆಗಳಿಂದ ಪೊಲೀಸರನ್ನು ಹಾಗೂ ಕಣ್ಣೂರಿನಿಂದ ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ಕರೆಸಿ ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ.

ಅನುಮತಿಯಿಲ್ಲದೆ ಹೊಸಂಗಡಿಯಲ್ಲಿ ಮೆರವಣಿಗೆ ನಡೆಸಿ ವಾಹನ ಸಂಚಾರಕ್ಕೆ ತೊಂದರೆಯನ್ನುಂಟು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಹಮೀದ್‌ ಸಹಿತ 25 ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಮಾ.21ರಂದು ಸಂಜೆ 4.30ಕ್ಕೆ ಹೊಸಂಗಡಿಯಲ್ಲಿ ಮೆರವಣಿಗೆ ಮಾಡಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next