Advertisement

ಮದ್ರಸಾ ಅಧ್ಯಾಪಕನ ಹತ್ಯೆ: ಮೂವರ ಬಂಧನ

02:52 PM Mar 25, 2017 | |

ಕಾಸರಗೋಡು: ನಗರದ ಹೊರ ವಲಯದ ಹಳೆಯ ಸೂರ್ಲು ಮಸೀದಿ ಬಳಿ ಇಸ್ಲತುಲ್‌ ಇಸ್ಲಾಂ ಮದ್ರಸ ಅಧ್ಯಾಪಕ ರಿಯಾಸ್‌ ಮೌಲವಿ (30) ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಶುಕ್ರವಾರ ಬೆಳಗ್ಗೆ ಕೇಳುಗುಡ್ಡೆ ಬಯಲಿನಿಂದ ಬಂಧಿಸಿದ್ದಾರೆ.

Advertisement

ಕಾಸರಗೋಡು ಕೇಳುಗುಡ್ಡೆ ನಿವಾಸಿ ಎಸ್‌. ನಿತಿನ್‌ (18), ಸಣ್ಣಕೂಡ್ಲು ನಿವಾಸಿ ಎನ್‌. ಅಖೀಲೇಶ್‌ (25) ಮತ್ತು ಕೇಳುಗುಡ್ಡೆ ಅಯ್ಯಪ್ಪ ನಗರದ ಎಸ್‌. ಅಜೇಶ್‌ ಯಾನೆ ಅಪ್ಪು (20) ಬಂಧಿತರು. ಹತ್ಯೆಗೆ ಬಳಸಿದ ಆಯುಧ ಹಾಗೂ ಆರೋಪಿಗಳು ಬಳಸಿದ ಬೈಕನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಕಣ್ಣೂರು ಐ.ಜಿ. ಮಹಿಪಾಲ್‌ ಯಾದವ್‌, ಕಣ್ಣೂರು ಕ್ರೈಂ ಬ್ರಾಂಚ್‌ ಎಸ್‌.ಪಿ. ಡಾ| ಎ. ಶ್ರೀನಿವಾಸ್‌ ಅವರ ನೇತೃತ್ವದ ಪ್ರತ್ಯೇಕ ತನಿಖಾ ತಂಡ ಸಮಗ್ರ ತನಿಖೆ ನಡೆಸಿತ್ತು.

ವದಂತಿ: ಕಠಿನ ಕ್ರಮ
ಕಾಸರಗೋಡು ಪರಿಸರದಲ್ಲಿ ವ್ಯಾಪಕ ಹಿಂಸೆ ನಡೆದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಸಂದೇಶ ಹರಿದಾಡುತ್ತಿದ್ದು, ವದಂತಿ ಹರಡುವವರ ವಿರುದ್ಧ ಕಠಿನ ಕ್ರಮ ತೆಗೆದುಧಿಕೊಳ್ಳುವುದಾಗಿ ಎಸ್‌ಪಿ ಕೆ.ಜಿ. ಸೈಮನ್‌ ಎಚ್ಚರಿಕೆ ನೀಡಿದ್ದಾರೆ.

ಬಿಗು ಬಂದೋಬಸ್ತು
ಮದ್ರಸಾ ಅಧ್ಯಾಪಕನ ಹತ್ಯೆಗೆ ಸಂಬಂಧಿಸಿ ಮೂವರನ್ನು ಬಂಧಿಸಿರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಬಿಗು ಪೊಲೀಸ್‌ ಬಂದೋಬಸ್ತು ಏರ್ಪಡಿಸಲಾಗಿದೆ. ಸೂಕ್ಷ್ಮ ಸಂವೇದಿ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನೇಮಿಸಲಾಗಿದೆ. ಪೊಲೀಸ್‌ ಗಸ್ತು ಬಿಗುಗೊಳಿಸಲಾಗಿದೆ. ಮಫ್ತಿ ಪೊಲೀಸರನ್ನೂ ನಿಯೋಜಿಸಲಾಗಿದೆ.

Advertisement

ಅಂಗಡಿಗಳ ಮುಚ್ಚುಗಡೆ: ಬಂಧನ ಸುದ್ದಿ ಹರಡುತ್ತಿದ್ದಂತೆ ಕಾಸರಗೋಡು ನಗರದಲ್ಲಿ ಕೆಲವು ಅಂಗಡಿಗಳು ಮುಚ್ಚಿಕೊಂಡವು. ನಗರದಲ್ಲಿ ಜನ ಸಂಚಾರ ವಿರಳವಾಗಿತ್ತು. ಪತ್ರಿಕಾ ಕಚೇರಿಗಳಿಗೆ ಕಾಸರಗೋಡಿನ ಪರಿಸ್ಥಿತಿ ಹೇಗಿದೆ ಎಂಬುದಾಗಿ ನಿರಂತರ ದೂರವಾಣಿ ಕರೆಗಳು ಬರುತ್ತಿದ್ದವು.
ಗುಂಪು ಸೇರಿದ 6 ಮಂದಿ ಬಂಧನ: ನಿಷೇಧಾಜ್ಞೆ ಉಲ್ಲಂ ಸಿ ಮಾ. 23ರ ರಾತ್ರಿ ಹೊಸ ಬಸ್‌ ನಿಲ್ದಾಣದ ಪರಿಸರದಲ್ಲಿ ಗುಂಪು ಸೇರಿದ್ದ ಮೀಪುಗುರಿಯ ಅಜಿತ್‌ ಕುಮಾರ್‌ (26), ನೆಲ್ಲಿಕುಂಜೆಯ ಅಜೀಶ್‌ ಕುಮಾರ್‌, ಚೆಮ್ನಾಡ್‌ನ‌ ಪಿ. ಮುಹಮ್ಮದ್‌ ಫಯಾಸ್‌ (27), ಖಾಸೀಲೈನ್‌ನ ಜಾಫರ್‌ ಸಾದಿಕ್‌, ಏರಿಯಾಲ್‌ನ ಅಬ್ದುಲ್‌ ಲತೀಫ್‌, ರಹಿಮಾನ್‌ರನ್ನು ಪೊಲೀಸರು ಬಂಧಿಸಿದ್ದಾರೆ.

ಹಲ್ಲೆಗೈದ ದ್ವೇಷ
ಕೆಲವು ದಿನಗಳ ಹಿಂದೆ ಶಟಲ್‌ ಪಂದ್ಯಾಟವೊಂದರ ಸಂದರ್ಭ ಅಹಿತಕರ ಘಟನೆ ನಡೆದಿದ್ದು, ಈ ಮೂವರ ಮೇಲೆ ಹಲ್ಲೆ ನಡೆದಿತ್ತು. ಓರ್ವನ ಎರಡು ಹಲ್ಲುಗಳು ಉದುರಿದ್ದವು. ಇದಕ್ಕೆ ಪ್ರತೀಕಾರವಾಗಿ ಹತ್ಯೆ ನಡೆದಿದೆ ಎಂದು ತನಿಖೆ ನಡೆಸಿದ ಪೊಲೀಸ್‌ ತಂಡ ಹೇಳಿದೆ. ಮಾ. 20ರಂದು ಮಧ್ಯರಾತ್ರಿ ಮಸೀದಿಯ ಕ್ವಾರ್ಟರ್ಸ್‌ಗೆ ನುಗ್ಗಿ ಹತ್ಯೆ ನಡೆಸಿ ಆರೋಪಿಗಳು ಪರಾರಿಯಾಗಿದ್ದರು. ಇಲ್ಲಿ  ಮದ್ರಸಾ ಅಧ್ಯಾಪಕನ ಪಾತ್ರ ಇರಲಿಲ್ಲವಾದರೂ ಪ್ರತೀಕಾರಕ್ಕಾಗಿ ಕೃತ್ಯ ಎಸಗಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಆರೋಪಿಗಳು ಸಂಚು ರೂಪಿಸಿದ್ದರು. ಬಿಯರ್‌ ಮತ್ತು ಬ್ರಾಂಡಿ ಸೇವಿಸಿ, ಗಾಂಜಾ ಸಿಗರೇಟ್‌ ಸೇದಿ ಕೃತ್ಯಕ್ಕೆ ಮುಂದಾಗಿದ್ದರು. ಹತ್ಯೆಯ ಬಳಿಕ ಬೈಕ್‌ನಲ್ಲಿ ಕೇಳುಗುಡ್ಡೆಯ ಅಂಗನವಾಡಿಗೆ ತೆರಳಿ, ಟ್ಯಾಂಕ್‌ನಿಂದ ನೀರು ತೆಗೆದು ರಕ್ತಸಿಕ್ತ ಉಡುಪುಗಳನ್ನು  ತೊಳೆದಿದ್ದರು. ಬಳಿಕ ಮೂರು ದಿನ ಕೇಳುಗುಡ್ಡೆಯ ಬಯಲಿನ ಶೆಡ್‌ನಲ್ಲಿಯೇ ತಂಗಿದ್ದರು. ತೀವ್ರ ತನಿಖೆ ನಡೆಸಿದ ಪೊಲೀಸರು ಘಟನೆಯ ಕೆಲವೇ ದಿನಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next