ಚೆನ್ನೈ:ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮದ್ರಾಸ್ ಹೈಕೋರ್ಟ್ “ಪೇರೆನ್ಸ್ ಪೇಟ್ರಿಯಾ ಜ್ಯೂರಿಸ್‌ಡಿಕ್ಷನ್’ ಅಧಿಕಾರವನ್ನು ಬಳಸಿಕೊಂಡು “ಪ್ರಕೃತಿ ಮಾತೆ’ಯನ್ನು ಜೀವಂತ ವ್ಯಕ್ತಿ ಎಂದು ಘೋಷಿಸಿದೆ.
ಈ ಮೂಲಕ ಜೀವಂತ ವ್ಯಕ್ತಿಗಿರುವ ಎಲ್ಲ ಹಕ್ಕುಗಳು, ಕರ್ತವ್ಯಗಳು ಹಾಗೂ ಹೊಣೆಗಾರಿಕೆಯು ಈಗ ಭೂತಾಯಿಗೆ ದೊರೆತಂತಾಗಿದೆ. ಪ್ರಕೃತಿಯನ್ನು ಉಳಿಸುವ ಮತ್ತು ಸಂರಕ್ಷಿಸುವ ಉದ್ದೇಶದಿಂದ ಹೈಕೋರ್ಟ್ ಇಂಥದ್ದೊಂದು ನಿರ್ಧಾರ ಕೈಗೊಂಡಿದೆ.
ಸರ್ಕಾರಿ ಜಮೀನಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ನೀಡಿದ ನ್ಯಾ. ಎಸ್. ಶ್ರೀಮತಿ ಅವರು, “ಹಿಂದಿನ ತಲೆಮಾರಿನ ಜನರು ಭೂಮಿ ತಾಯಿಯನ್ನು ಅದರ ಪ್ರಾಚೀನ ವೈಭವದೊಂದಿಗೇ ನಮಗೆ ಹಸ್ತಾಂತರಿಸಿದ್ದಾರೆ. ಅದನ್ನು ಮುಂದಿನ ತಲೆಮಾರಿಗೆ ಅದೇ ವೈಭವದೊಂದಿಗೆ ಹಸ್ತಾಂತರಿಸಬೇಕಾದ ನೈತಿಕತೆ ನಮ್ಮದು. ಈ ಕಾರಣಕ್ಕಾಗಿ ನಾವು ಇಲ್ಲಿ “ದೇಶದ ಪೋಷಕ’ ಎಂಬ ಅಧಿಕಾರವನ್ನು ಬಳಸಿಕೊಂಡು ಭೂಮಿ ತಾಯಿಯನ್ನೂ “ಒಂದು ಜೀವಿ’ ಎಂದು ಘೋಷಿಸುತ್ತಿದ್ದೇವೆ’ ಎಂದರು.
ಏನಿದು ಪೇರೆನ್ಸ್ ಪೇಟ್ರಿಯಾ ಜ್ಯೂರಿಸ್‌ಡಿಕ್ಷನ್?
ನಿಂದನೀಯ ಅಥವಾ ಮಕ್ಕಳನ್ನು ನಿರ್ಲಕ್ಷಿಸುವ ಪೋಷಕರು ಅಥವಾ ಕಾನೂನಾತ್ಮಕ ಆರೈಕೆದಾರರ ವಿರುದ್ಧ ಮಧ್ಯಪ್ರವೇಶಿಸಿ, ರಕ್ಷಣೆಯ ಅಗತ್ಯವಿರುವ ಮಗು ಅಥವಾ ವ್ಯಕ್ತಿಯ ಪೋಷಕರ ಸ್ಥಾನವನ್ನು ತುಂಬಲು ಸರ್ಕಾರಕ್ಕೆ ಇರುವ ಕಾನೂನಾತ್ಮಕ ಅಧಿಕಾರವನ್ನು “ದೇಶದ ಪೋಷಕ’ (ಪೇರೆನ್ಸ್ ಪೇಟ್ರಿಯಾ ಜ್ಯೂರಿಸ್‌ಡಿಕ್ಷನ್) ಎನ್ನುತ್ತಾರೆ.